ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲಗಪ್ಪೆಯ ಹೊಸ ಪ್ರಭೇದ ಪತ್ತೆ

ಹೊಸ ಕಪ್ಪೆಯ ಹೆಸರಿನ ಜೊತೆ ಸೇರಿತು ‘ಬೆಂಗಳೂರು‘
Last Updated 26 ನವೆಂಬರ್ 2020, 16:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬಿಲಗಪ್ಪೆಯ ಹೊಸ ಪ್ರಭೇದವೊಂದನ್ನು ಪ್ರಾಣಿವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬಿಲಗಪ್ಪೆಗೆ ‘ಸ್ಫೇರೊಥೆಕಾ ಬೆಂಗಳೂರು’ (SphaeFrogrotheca bengaluru) ಎಂದು ವೈಜ್ಞಾನಿಕ ನಾಮಕರಣ ಮಾಡುವ ಮೂಲಕ ಇದು ಪತ್ತೆಯಾದ ಬೆಂಗಳೂರಿಗೂ ಗೌರವ ಸಲ್ಲಿಸಲಾಗಿದೆ.

ಹೊಸ ಪ್ರಭೇದವನ್ನು ದಕ್ಷಿಣ ಏಷ್ಯಾದಾದ್ಯಂತ ಕಂಡುಬರುವ ಸ್ಫೇರೊಥೆಕಾ ಕುಲದ ಕಪ್ಪೆಗಳ ಬಾಹ್ಯವಿಜ್ಞಾನ ಮತ್ತು ಆನುವಂಶಿಕ ವ್ಯತ್ಯಾಸಗಳ ಆಧಾರದ ಮೇಲೆ ವಿವರಿಸಲಾಗಿದೆ. ಈ ಆವಿಷ್ಕಾರದ ಕುರಿತು ನ್ಯೂಜಿಲೆಂಡ್‌ನಿಂದ ಪ್ರಕಟವಾಗುವ, ಪ್ರಾಣಿ ವಿಜ್ಞಾನದ ಅಂತರರಾಷ್ಟ್ರೀಯ ನಿಯತಕಾಲಿಕೆ ‘ಜೂಟ್ಯಾಕ್ಸಾ’ದಲ್ಲಿ (Zootaxa) ಸಂಶೋಧನಾ ಪ್ರಬಂಧ ಪ್ರಕಟವಾಗಿದೆ.

ಭಾರತದಲ್ಲಿ ಉಭಯವಾಸಿಗಳ ಆವಿಷ್ಕಾರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಜೀವ ವೈವಿಧ್ಯದ ಅತಿಸೂಕ್ಷ್ಮ ತಾಣಗಳಲ್ಲಿ (ಹಾಟ್‌ಸ್ಪಾಟ್‌) ಅಥವಾ ಹಸಿರು ಹೊದಿಕೆಯುಳ್ಳ ಅರಣ್ಯಗಳಲ್ಲೇ ಹೆಚ್ಚಾಗಿ ಹೊಸ ಪ್ರಭೇದಗಳು ಪತ್ತೆಯಾಗುತ್ತಿವೆ. ಆದರೆ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ದೀಪಕ್‌ ಅವರ ತಂಡವು ಬೆಂಗಳೂರಿನ ಹೊರವಲಯದಿಂದ ಹೊಸ ಜಾತಿಯ ಬಿಲಗಪ್ಪೆಯನ್ನು ಕಂಡುಹಿಡಿದದ್ದು ವಿಶೇಷ.ಅವರು ಕರ್ನಾಟಕದ ದಖ್ಖನ್‌ ಪ್ರಸ್ತಭೂಮಿಯ ಉಭಯವಾಸಿಗಳನ್ನು ದಾಖಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಭಾರತೀಯ ಪ್ರಾಣಿ ಸರ್ವೇಕ್ಷಣಾ ಸಂಸ್ಥೆ (ಜೆಡ್‌ಎಸ್‌ಐ) ವಿಜ್ಞಾನಿ ಡಾ. ಕೆ. ಪಿ. ದಿನೇಶ್‌, ಫ್ರಾನ್ಸ್‌ನ ನ್ಯಾಷನಲ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯ ವಿಜ್ಞಾನಿ ಡಾ. ಅನ್ನೆಮಾರಿ ಓಹ್ಲರ್‌, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಧ್ಯಾಪಕ ಡಾ. ಕಾರ್ತಿಕ್‌ ಶಂಕರ್‌; ಜೆಡ್‌ಎಸ್‌ಐ ವಿಜ್ಞಾನಿ ಡಾ.ಬಿ.ಎಚ್‌.ಚನ್ನಕೇಶವಮೂರ್ತಿ ಹಾಗೂ ಮೈಸೂರು ಯುವರಾಜ ಕಾಲೇಜಿನ ಪ್ರಾಧ್ಯಾಪಕಿ ಜೆ.ಎಸ್‌.ಅಶಾದೇವಿ ಈ ಹೊಸ ಪ್ರಭೇದದ ಕಪ್ಪೆಯ ಸಂಶೋಧನೆಗೆ ನೆರವಾಗಿದ್ದಾರೆ.

ಬೆಂಗಳೂರಿನಲ್ಲಿ ಈ ಹಿಂದೆ ಹಸಿರು ಹೊದಿಕೆ ಸಮೃದ್ಧವಾಗಿತ್ತು. ನೈಸರ್ಗಿಕ ಹಾಗೂ ಶುದ್ಧ ಜಲಮೂಲಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದವು. ವ್ಯಾಪಕ ನಗರೀಕರಣದಿಂದಾಗಿ ಹಸಿರು ಹೊದಿಕೆ ಹಾಗೂ ಶುದ್ಧ ನೀರಿನ ಮೂಲಗಳೂ ನಶಿಸುತ್ತಿವೆ. ‘ಪರಿಸರ ವ್ಯವಸ್ಥೆಯ ಸೂಚಕಗಳಾದ' ಕಪ್ಪೆಗಳು ಈ ಬೆಳವಣಿಗೆಯಿಂದಾಗಿ ನಗರದಲ್ಲಿ ಹೇಳಹೆಸರಿಲ್ಲದಂತಾಗಿವೆ. ಈ ಬಿಲಗಪ್ಪೆಯ ಹೊಸ ಪ್ರಭೇದವೂ ಬೆಂಗಳೂರಿನ ಹೊರವಲಯದಲ್ಲಿ ಮಾತ್ರ ಕಂಡುಬಂದಿದೆ.

‘ಜಾಗತಿಕ ಮಟ್ಟದಲ್ಲೂ ಕಪ್ಪೆಗಳು ಕಣ್ಮರೆಯಾಗುವ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿದೆ. ಹೊಸದಾಗಿ ಪತ್ತೆಯಾಗುವ ಎಷ್ಟೋ ಕಪ್ಪೆಗಳು ವೈಜ್ಞಾನಿಕ ನಾಮಕರಣ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ನಶಿಸುತ್ತಿವೆ. ಇವು ಅಳಿವಿನಂಚಿಗೆ ತಲುಪುವುದನ್ನು ತಪ್ಪಿಸಲು ನಗರ ಮತ್ತು ಕೃಷಿ ಪರಿಸರದ ಉಭಯವಾಸಿಗಳ ದಾಖಲೀಕರಣ ತುರ್ತಾಗಿ ಆಗಬೇಕಿದೆ’ ಎನ್ನುತ್ತಾರೆ ಜೆಡ್‌ಎಸ್‌ಐನ ವಿಜ್ಞಾನಿ ಡಾ. ದಿನೇಶ್‌.

‘ನಗರದ ಉಭಯವಾಸಿಗಳ ಬಗ್ಗೆ ಸಂಶೋಧನೆ ಮಾಡುವ ಹಂಬಲ ವಿದ್ಯಾರ್ಥಿ ದೆಸೆಯಿಂದಲೂ ಇತ್ತು. ನಾನು ಹುಟ್ಟಿ ಬೆಳೆದ ಬೆಂಗಳೂರಿನಲ್ಲೇ ಬಿಲಗಪ್ಪೆಯ ಹೊಸ ಪ್ರಭೇದ ಪತ್ತೆಯಾಗಿದ್ದು ಖುಷಿ ತಂದಿದೆ’ ಎನ್ನುತಾರೆ ಪಿ.ದೀಪಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT