ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆವ್ವದ ವೇಷ ತೊಟ್ಟು ಹೆದರಿಸಿದ್ದವರ ಬಂಧನ

ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ * ಪ್ರ್ಯಾಂಕ್ ವಿಡಿಯೊ ಚಿತ್ರೀಕರಿಸುತ್ತಿದ್ದ ಆರೋಪಿಗಳು
Last Updated 11 ನವೆಂಬರ್ 2019, 21:44 IST
ಅಕ್ಷರ ಗಾತ್ರ

ಬೆಂಗಳೂರು: ಪ್ರ್ಯಾಂಕ್‌ (ಹುಡುಗಾಟಿಕೆಗಾಗಿ) ವಿಡಿಯೊ ಚಿತ್ರೀಕರಿಸುವುದಕ್ಕಾಗಿ ದೆವ್ವದ ವೇಷ ತೊಟ್ಟು ತಡರಾತ್ರಿ ನಡುರಸ್ತೆಯಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಹೆದರಿಸುತ್ತಿದ್ದ ಆರೋಪದಡಿ ಏಳು ಯುವಕರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ. ನಗರದ ಶಾನ್ ಮಲ್ಲಿಕ್ (20), ನವೀದ್ (20), ಸಜೀಲ್ ಮಹಮ್ಮದ್ (21), ಸಾಕಿಬ್ (20), ಸೈಯದ್ ನಬೀಲ್ (20), ಯೂಸುಫ್ ಅಹಮ್ಮದ್ (20) ಹಾಗೂ ನಾಗವಾರದ ಮಹಮ್ಮದ್ ಅಕ್ಯೂಬ್ (20) ಬಂಧಿತರು.

‘ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಇದೇ ಸಂದರ್ಭದಲ್ಲೇ ಶರೀಫ್‌ನಗರದಲ್ಲಿ ಆರೋಪಿಗಳು ಸಾರ್ವಜನಿಕರನ್ನು ಅಡ್ಡಗಟ್ಟಿ ಹೆದರಿಸುತ್ತಿದ್ದರು. ಗಸ್ತಿನಲ್ಲಿದ್ದ ಸೋಲದೇವನಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಸಿ.ಬಿ. ಶಿವಸ್ವಾಮಿ ಅವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಅವರೇ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.

‘ಬಂಧಿತ ಆರೋಪಿಗಳು ಎಂಜಿನಿಯರ್, ಬಿಬಿಎಂ ಹಾಗೂ ಬಿಎಸ್ಸಿ ಓದುತ್ತಿದ್ದಾರೆ. ಠಾಣೆ ಜಾಮೀನು ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದ್ದು, ಇನ್ನೊಮ್ಮೆ ಇಂಥ ಕೃತ್ಯ ಎಸಗದಂತೆ ಎಚ್ಚರಿಕೆ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ರಕ್ತಸಿಕ್ತ ಹೋಲುವ ಬಟ್ಟೆ: ‘ಹಾಸ್ಯ ಹಾಗೂಪ್ರ್ಯಾಂಕ್‌ ವಿಡಿಯೊಗಳನ್ನು ಚಿತ್ರೀಕರಿಸುತ್ತಿರುವ ಆರೋಪಿಗಳು ’ಕೋಕೆಪೆಡಿಯಾ’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಮತ್ತಷ್ಟು ಪ್ರ್ಯಾಂಕ್ ವಿಡಿಯೊಗಳನ್ನು ಮಾಡಲು ಆರೋಪಿಗಳು ಈ ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು.

‘ರಕ್ತಸಿಕ್ತ ಹೋಲುವ ಬಟ್ಟೆ ತೊಟ್ಟಿದ್ದ ಇಬ್ಬರು ಉದ್ದವಾದ ಕೂದಲು ಹಾಕಿಕೊಂಡು ದೆವ್ವದಂತೆ ವರ್ತಿಸುತ್ತಿದ್ದರು. ವಿಚಿತ್ರವಾದ ಮುಖವಾಡ ಸಹ ಧರಿಸಿದ್ದರು. ಇನ್ನೊಬ್ಬ ಸತ್ತವನಂತೆ ರಸ್ತೆಯಲ್ಲಿ ಬೀಳುತ್ತಿದ್ದ. ಕ್ಯಾಬ್ ಹಾಗೂ ಆಟೊ ಚಾಲಕ, ಸಾರ್ವಜನಿಕರು ಸ್ಥಳಕ್ಕೆ ಬಂದರೆ ಅವರನ್ನು ಅಡ್ಡಗಟ್ಟಿ ಹೆದರಿಸುತ್ತಿದ್ದರು. ಅಂಗಡಿ ಎದುರು ಮಲಗಿದ್ದ ವ್ಯಕ್ತಿಯೊಬ್ಬರನ್ನು ಎಬ್ಬಿಸಿ ಅವರ ಮೈ ಮೇಲೆ ಬಿದ್ದು ವಿಚಿತ್ರವಾಗಿ ವರ್ತಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳ ಕೃತ್ಯದಿಂದ ಹಲವು ಸಾರ್ವಜನಿಕರು ಭಯಗೊಂಡಿದ್ದರು. ಕೆಲವರು ಅವರಿಂದ ತಪ್ಪಿಸಿಕೊಂಡು ಓಡಿದ್ದರು. ಸ್ಥಳದಲ್ಲಿ ಗಸ್ತಿನಲ್ಲಿದ್ದ ಅಪರಾಧ ವಿಭಾಗದ ಸಿಬ್ಬಂದಿಯನ್ನೂ ಆರೋಪಿಗಳು ಹೆದರಿಸಲು ಯತ್ನಿಸಿದ್ದರು. ಅದೇ ಸಂದರ್ಭದಲ್ಲೇ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ಸ್ಥಳಕ್ಕೆ ಹೋಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT