ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಸಹಿಷ್ಣುವಾಗಿದ್ದಕ್ಕೇ ಗಾಂಧಿ ಹತ್ಯೆ ನಡೆಯಿತು: ವಿ.ಎಸ್.ಉಗ್ರಪ್ಪ

Published 31 ಜನವರಿ 2024, 15:37 IST
Last Updated 31 ಜನವರಿ 2024, 15:37 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ‘ಧರ್ಮ, ರಾಜಕಾರಣದೊಳಗೆ ನುಸುಳಬಾರದು, ಧಾರ್ಮಿಕ ಸಹಿಷ್ಣುತೆ ಈ ನೆಲದ ಸೌಂದರ್ಯ ಎಂದು ಪ್ರತಿಪಾದಿಸಿದ ಕಾರಣಕ್ಕಾಗಿಯೇ ಗಾಂಧೀಜಿ ಹತ್ಯೆ ನಡೆಯಿತು’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಪ್ರತಿಪಾದಿಸಿದರು.

ಸೌಹಾರ್ದ ಕನಾಟಕ ವೇದಿಕೆಯು ಹುತಾತ್ಮರ ದಿನದ ಅಂಗವಾಗಿ ಹೆಚ್ಎಸ್ಆರ್ ಬಡಾವಣೆಯ ಸ್ವಾಭಿಮಾನಿ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ‘ಗಾಂಧೀಜಿ ಹತ್ಯೆ – ತೆರೆಯ ಹಿಂದಿನ ಕರಾಳತೆ’ ಎಂಬ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಧರ್ಮೀಯರು ಪಾಲ್ಗೊಳ್ಳುವಂತೆ ಮಾಡುವಲ್ಲಿ ಗಾಂಧೀಜಿ ಮಹತ್ವದ ಪಾತ್ರ ವಹಿಸಿದ್ದರು. ಇದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿಯೇ ಧರ್ಮದ ಆಧಾರದಲ್ಲಿ ಒಡೆದಾಳುವ ನೀತಿಗೆ ಕೈಹಾಕಿದರು. ಇದನ್ನು ಬೆಂಬಲಿಸಿದ ಅಂದಿನ ಮತೀಯವಾದಿ ಶಕ್ತಿಗಳು ಬ್ರಿಟಿಷರ ಪರವಾಗಿ ನಿಂತಿದ್ದಲ್ಲದೇ, ಆ ಗುಂಪಿಗೆ ಸೇರಿದ ನಾಥೂರಾಂ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ’ ಎಂದರು.

ಸಿಪಿಐ(ಎಂ) ರಾಜ್ಯ ಮುಖಂಡ ಡಾ.ಕೆ.ಪ್ರಕಾಶ್ ಮಾತನಾಡಿ ‘ವೈವಿಧ್ಯವೇ ಈ ನೆಲದ ಸೌಂದರ್ಯ. ಗಾಂಧೀಜಿಯವರು ಇದನ್ನೇ ಪ್ರತಿಪಾದಿಸುತ್ತಿದ್ದರು. ವಿಚಾರಭೇದದ ಕಾರಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡುವ ಹಂತಕ್ಕೆ ತಲುಪುವುದು ಫ್ಯಾಸಿಸ್ಟ್ ಪ್ರವೃತ್ತಿಯಾಗಿದೆ. ಈ ಮತಾಂಧ ಶಕ್ತಿಗಳೇ ಬಾಪುವನ್ನು ಹತ್ಯೆಗೈದರು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವಾಸುದೇವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಮುಖಂಡ ಅನಿಲ್ ರೆಡ್ಡಿ, ಎನ್.ದಯಾನಂದ, ಧರ್ಮೇಗೌಡ, ಶ್ವೇತಾ ಇದ್ದರು. ಇದಕ್ಕೂ ಮೊದಲು ಬೊಮ್ಮನಹಳ್ಳಿ, ಗಾರ್ವೆಪಾಳ್ಯ ಮತ್ತು ಚಿಕ್ಕಬೇಗೂರು ಗೇಟ್ ಬಳಿ ಮಾನವ ಸರಪಳಿ ರಚಿಸಿದ ಕಾರ್ಯಕರ್ತರು, ಸೌಹಾರ್ದ ಸಂದೇಶ ಸಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT