ಬೆಂಗಳೂರು: ಗೌರಿ– ಗಣೇಶ ಹಬ್ಬದ ಜೊತೆಗೆ, ವಾರಾಂತ್ಯದ ರಜಾ ದಿನಗಳು ಬಂದಿರುವುದರಿಂದ ಈ ಅವಧಿಯಲ್ಲಿ ಊರಿಗೆ, ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ಬಸ್‌ಗಳ ಮಾಲೀಕರು ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದ್ದಾರೆ.
ಖಾಸಗಿ ಬಸ್‌ಗಳ ಸೇವೆ ಒದಗಿಸುವವರು ಶುಕ್ರವಾರ, ಶನಿವಾರ, ಭಾನುವಾರದ ಟಿಕೆಟ್ ದರವನ್ನು ಎರಡುಪಟ್ಟು ಹೆಚ್ಚಿಸಿದ್ದರೆ, ಇನ್ನೂ ಕೆಲವು ಬಸ್‌ಗಳ ಟಿಕೆಟ್ ದರದಲ್ಲಿ ಎರಡೂವರೆ–ಮೂರು ಪಟ್ಟು ಏರಿಸಲಾಗಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್‌ಗಳಲ್ಲಿ ₹ 600 ರಿಂದ ₹ 1,100ವರೆಗೆ ಇದ್ದ ದರಗಳು ಈಗ ₹1,500ರಿಂದ ₹ 2,500 ವರೆಗೆ ಏರಿಕೆಯಾಗಿದೆ. ಮಂಗಳೂರಿಗೆ ₹ 700ರಿಂದ ₹ 950ರವರೆಗೆ ಇದ್ದಿದ್ದು ₹1500–₹ 2000ಕ್ಕೆ ಏರಿದೆ.
ಶಿರಸಿಗೆ ₹ 700–₹ 900 ದರ ಇತ್ತು. ಈಗ ₹ 1500–₹ 2,500ರವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ದರ ಏರಿಕೆ ಬರೆ ಎಳೆದಿದೆ.
ಕೆಎಸ್‌ಆರ್‌ಟಿಸಿ ಭರ್ತಿ:
ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ 1,500 ವಿಶೇಷ ಬಸ್‌ಗಳನ್ನು ರಸ್ತೆಗೆ ಇಳಿಸುತ್ತಿದೆ. ಮುಂಗಡ ಕಾಯ್ದಿರಿಸಲು ಅವಕಾಶ ನೀಡಲಾಗಿದ್ದು, ಎಲ್ಲ ಬಸ್‌ಗಳ ಸೀಟುಗಳು ಭರ್ತಿಯಾಗಿವೆ. ತಡೆರಹಿತ ಸಾರಿಗೆ ಬಸ್‌ಗಳಲ್ಲಿ ಮಾತ್ರ ಸೀಟುಗಳು ಲಭ್ಯವಿವೆ.
‘ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳಲ್ಲಿ ಉಳಿದ ಬಸ್‌ಗಳಿಗಿಂತ ದರ ಅಧಿಕವಿದ್ದರೂ ಅದು ಶೇ 10–15ರಷ್ಟು ಮಾತ್ರ ಇರುವುದರಿಂದ ಸಾವಿರಾರು ಪ್ರಯಾಣಿಕರು ಖಾಸಗಿ ಬಸ್‌ಗಳ ದುಬಾರಿ ದರದ ಹೊಡೆತದಿಂದ ಪಾರಾಗಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಎರಡು–ಮೂರು ಪಟ್ಟು ಹೆಚ್ಚಿಸುವುದನ್ನು ನಿಯಂತ್ರಿಸಲು ಕಾನೂನು ತರಬೇಕಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.