ಬೆಂಗಳೂರು: ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಗಂಗಾಧರೇಶ್ವರ ದೇವಸ್ಥಾನದ ಗೋಡೆ ಕುಸಿದಿದ್ದು, ಅದನ್ನು ದುರಸ್ತಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಂ ರಾಯಪುರ ತಿಳಿಸಿದರು.
ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯ ಬಳಿ ಗೋಡೆ ಕುಸಿದಿರುವ ಸ್ಥಳಕ್ಕೆ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಗಂಗಾಧರೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರಲಿದ್ದು, ದೇವಾಲಯಕ್ಕೆ ಹೊಂದಿಕೊಂಡಿರುವ ಅಂಗಡಿಯ ಮೇಲ್ಭಾಗದ ಗೋಡೆಗೆ ಅಂಗಡಿಯ ನಾಮಫಲಕ ಹಾಗೂ ಶೀಟ್ ಅಳವಡಿಸಲಾಗಿತ್ತು. ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಜೆಸಿಬಿಯ ಮೂಲಕ ನಾಮಫಲಕ ಹಾಗೂ ಶೀಟ್ ತೆರವುಗೊಳಿಸುವ ಸಂದರ್ಭದಲ್ಲಿ ದೇವಾಲಯದ ಮೇಲ್ಭಾಗದ ಗೋಡೆ ಕುಸಿದುಬಿದ್ದಿದೆ. ಪಾಲಿಕೆ ವತಿಯಿಂದ ಗೋಡೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ವಾರ‍್ಯಾಂತದಲ್ಲಿ ಪೂರ್ಣಗೊಳ್ಳುತ್ತದೆ’ ಎಂದು ಮಾಹಿತಿ ನೀಡಿದರು.
ಪಾದಚಾರಿ ಮಾರ್ಗದ ತೆರವು ಕಾರ್ಯಾಚರಣೆ ಮಾಡುವ ವೇಳೆ ಮುಜರಾಯಿ ಇಲಾಖೆಯ ಸಹಯೋಗದೊಂದಿಗೆ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಮುಖ್ಯ ಎಂಜಿನಿಯರ್ ರಾಜೇಶ್, ಕಾರ್ಯಪಾಲಕ ಎಂಜಿನಿಯರ್‌ಗಳಾದ ಮಹಂತೇಶ್, ಯರಪ್ಪ ರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.