ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಸದಿಂದ ಗೊಬ್ಬರ: ಘಟಕಕ್ಕೆ ಚಾಲನೆ

ಹೆಸರಘಟ್ಟ: ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸುವ ಘಟಕ ಉದ್ಘಾಟನೆ  
Published 30 ಜುಲೈ 2023, 23:59 IST
Last Updated 30 ಜುಲೈ 2023, 23:59 IST
ಅಕ್ಷರ ಗಾತ್ರ

ಹೆಸರಘಟ್ಟ: ಹೆಸರಘಟ್ಟ ಹೋಬಳಿಯ ಸೊಣ್ಣೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಶುಕ್ರವಾರ ಉದ್ಘಾಟಿಸಿದರು.

ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂಬರ್ 79ರಲ್ಲಿ ₹25 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗಿದೆ. 2,400 ಚದರ ಅಡಿಗಳಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಇಲ್ಲಿ ಗೊಬ್ಬರ ಮಾಡಲಾಗುತ್ತದೆ. ಮಳೆ ನೀರು ಸಂಗ್ರಹ ಪದ್ಧತಿಯನ್ನೂ ಘಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಘಟಕದ ವ್ಯಾಪ್ತಿಗೆ 12 ಗ್ರಾಮಗಳು ಬರಲಿದ್ದು, 1,689 ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ಮಾಹಿತಿ ನೀಡಿದರು.

ಶಾಸಕ ಎಸ್‌.ಆರ್‌ ವಿಶ್ವನಾಥ್‌ ಮಾತನಾಡಿ, ‘ಪ್ಲಾಸ್ಟಿಕ್ ಬಳಕೆಯಿಂದ ಕಸದ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳು ಮುಂದೆ ನಗರೀಕರಣಗೊಳ್ಳುತ್ತವೆ. ಮುಂದೊಂದು ದಿನ ಸಮಸ್ಯೆ ಎದುರಾಗಬಾರದೆಂಬ ಕಾರಣಕ್ಕೆ ಈಗಲೇ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಭಾರತ ಯೋಜನೆ ಮತ್ತು ಗ್ರಾಮ ಪಂಚಾಯಿತಿ ಅನುದಾನದೊಂದಿಗೆ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು.

‘ಸೊಣ್ಣೇನಹಳ್ಳಿ ಘಟಕವು ಕೇವಲ 28 ದಿನಗಳಲ್ಲಿ ನಿರ್ಮಾಣವಾಗಿದೆ. ಈ ಘಟಕದಲ್ಲಿ ಗೊಬ್ಬರ ಉತ್ಪಾದಿಸಿ ಲಾಭವನ್ನು ಪಡೆಯಬಹುದು’ ಎಂದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಿಬ್ಬೂರು ಜಯಣ್ಣ, ಮುಖಂಡ ಕಡತನಮಲೆ ಸತೀಶ್, ಹನುಮಯ್ಯ, ಪಂಚಾಯಿತಿ ಉಪಾಧ್ಯಕ್ಷೆ ರಮ್ಯಾ, ಪಿಡಿಒ ಭಾಸ್ಕರ್, ಕಾರ್ಯದರ್ಶಿ ರೂಪಾ, ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT