ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇ–ತ್ಯಾಜ್ಯ ಸಂಸ್ಕರಣೆ,‌ ಮರುಬಳಕೆ ಆದ್ಯತೆ ನೀಡಿ: ಸಚಿವ ಈಶ್ವರ ಬಿ. ಖಂಡ್ರೆ

ಐದನೇ ರೀ ಕಾಮರ್ಸ್ ಎಕ್ಸ್‌ಪೊದಲ್ಲಿ ಸಚಿವ ಈಶ್ವರ ಬಿ. ಖಂಡ್ರೆ
Published 3 ಸೆಪ್ಟೆಂಬರ್ 2024, 16:24 IST
Last Updated 3 ಸೆಪ್ಟೆಂಬರ್ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಸರಕ್ಕೆ ಹಾನಿ ಮಾಡುತ್ತಿರುವ ತ್ಯಾಜ್ಯದ ಸಂಸ್ಕರಣೆ, ಪುನರ್ ಬಳಕೆ, ಪುನರ್ ನಿರ್ಮಾಣದಂತಹ ಕ್ರಮಗಳ ಮೂಲಕ ವಿಲೇವಾರಿ ಮಾಡುವುದು ಅಗತ್ಯವಾಗಿದೆ’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಐದನೇ ರೀ ಕಾಮರ್ಸ್ ಎಕ್ಸ್‌ಪೊದಲ್ಲಿ ಮಾತನಾಡಿದ ಅವರು, ‘ಇ–ತ್ಯಾಜ್ಯ, ಬ್ಯಾಟರಿ, ಯಂತ್ರೋಪಕರಣಗಳ ಮರುಬಳಕೆ ಮಾಡುವುದು ಈ ಹೊತ್ತಿನ ಆದ್ಯತೆಯಾಗಬೇಕಿದೆ. ಇದರಿಂದ ಆರ್ಥಿಕ ಲಾಭವೂ ಇದ್ದು, ಪರಿಸರ ಸಂರಕ್ಷಣೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಹವಾಮಾನ ಬದಲಾವಣೆ ಅತಿ ದೊಡ್ಡ ಸವಾಲಾಗಿದೆ. ಉತ್ತರ ಕನ್ನಡದ ಶಿರೂರು, ಕೇರಳದ ವಯನಾಡು ಭಾಗದಲ್ಲಿ ಸಂಭವಿಸಿದ ಭೂ ಕುಸಿತ ನಮಗೆಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ. ಗಾಳಿ, ನೀರಿನ ಮಾಲಿನ್ಯ ಹೆಚ್ಚಾಗುತ್ತಿದೆ. ಎಲ್ಲರೂ ಜಾಗೃತರಾಗಬೇಕಿದೆ’ ಎಂದರು.

‘ಮಾಲಿನ್ಯದ ವಿರುದ್ಧ ಹೋರಾಡುವುದು ನಮ್ಮೆಲ್ಲರ ಕರ್ತವ್ಯ. ಅಭಿವೃದ್ದಿ ಕಾರ್ಯಗಳು, ಉತ್ಪಾದನೆಗೆ ತೊಡಕಾಗದಂತಹ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು. ಪರಿಸರ ಉಳಿದರೆ ಮಾತ್ರ ನಾವು ಬದುಕಬಹುದು’ ಎಂದು ಹೇಳಿದ ಸಚಿವರು, ‘ಯುವ ಸಮೂಹಕ್ಕೆ ಉದ್ಯೋಗ ಸೃಜಿಸಲು ಈ ವಲಯದಲ್ಲಿ ವಿಪುಲ ಅವಕಾಶವಿದೆ’ ಎಂದು ಹೇಳಿದರು.

ರೀ ಎಕ್ಸ್‌ಪೊ ಆಯೋಜಕರು ಮತ್ತು ಉರ್ಧವ್‌ ಮ್ಯಾನೇಜ್‌ಮೆಂಟ್ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರೆಡ್ಡಿ ಡಿ. ಪಾಟೀಲ್ ಮಾತನಾಡಿ, ‘ಸಂಸ್ಕರಣೆಯನ್ನು ಬಲಪಡಿಸುವುದು ನಮ್ಮ ಮೂಲ ಧ್ಯೇಯ. ಈ ನಿಟ್ಟಿನಲ್ಲಿ ಪಾಲುದಾರರ ಸಂಖ್ಯೆ ಹೆಚ್ಚಾಗಬೇಕು. ಮೊಬೈಲ್, ಲ್ಯಾಪ್‌ಟಾಪ್ ಮತ್ತಿತರ ವಸ್ತುಗಳನ್ನು ಮರು ಸಂಸ್ಕರಣೆ ಮಾಡಿ ಮರು ಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸಜ್ಜುಗೊಳಿಸಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT