ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ: ಆಕರ್ಷಣೆಯ ಕೇಂದ್ರವಾದ ₹7 ಲಕ್ಷ ಮೌಲ್ಯದ ಬೋಯರ್ ತಳಿಯ ಮೇಕೆ

ಬೆಂಗಳೂರಿನಲ್ಲಿ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ಆರಂಭ
Last Updated 11 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ಸುಮಾರು ₹7 ಲಕ್ಷ ಮೌಲ್ಯದ ಬೋಯರ್ ತಳಿಯ ಮೇಕೆ ಬೆಂಗಳೂರು ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.

ಒಂದು ವರ್ಷದಲ್ಲೇ ಸಂತಾನೋತ್ಪತ್ತಿಗೆ ಸಜ್ಜಾಗುವ ಮತ್ತು ಅತ್ಯಂತ ವೇಗವಾಗಿ ಬೆಳವಣಿಗೆಯಾಗುವ ಬೋಯರ್ ತಳಿಯ ಮೇಕೆಗಳನ್ನು ಸಾಕಿರುವ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಬಳಿಯ ತರಬೇನಹಳ್ಳಿ ಗ್ರಾಮದ ರೈತ ಉಮೇಶ್ ಕೃಷಿ ಮೇಳಕ್ಕೆ ಮೇಕೆಗಳೊಂದಿಗೆ ಬಂದಿದ್ದಾರೆ.

ದಕ್ಷಿಣ ಆಫ್ರಿಕಾ ಮೂಲದ ಈ ತಳಿಯ ಮೇಕೆಗಳನ್ನು ದೇಶದ ಹಲವೆಡೆ ಸಾಕಲಾಗುತ್ತಿದೆ. ಪುಣೆಯಿಂದ ಈ ತಳಿಯ ಒಂದು ಗಂಡು ಮತ್ತು ಎರಡು ಹೆಣ್ಣು ಮರಿಗಳನ್ನು ಉಮೇಶ್ ಅವರು ₹2.50 ಲಕ್ಷಕ್ಕೆ ಖರೀದಿಸಿ ತಂದಿದ್ದರು. ಈಗ ಅವುಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

‘ಕೇರಳದ ತಲಶ್ಶೇರಿ ತಳಿಯ ಮೇಕೆಗಳಿಗೆ ಬೋಯರ್ ತಳಿಯ ಗಂಡು ಮೇಕೆಯಿಂದ ಸಂಕರ ಮಾಡಿಸಲಾಗುತ್ತಿದೆ. ಹುಟ್ಟುವ ಮೇಕೆ ಮರಿ ಕೇವಲ ಆರು ತಿಂಗಳಲ್ಲೇ 20 ಕೆ.ಜಿಯಿಂದ 30 ಕೆ.ಜಿ ತೂಕ ಬರಲಿದೆ. ಸಂಕರಗೊಂಡು ಹುಟ್ಟಿರುವ ಗಂಡು ಮೇಕೆಯಿಂದ ಬೇರೆ ತಳಿಯ ಮೇಕೆಗಳಿಗೂ ಸಂಕರ ಮಾಡಿಸಬಹುದಾಗಿದೆ. ಆದರೆ, ಅವು ಆರು ತಿಂಗಳ ಅವಧಿಯಲ್ಲಿ 18 ಕೆ.ಜಿಯಿಂದ 20 ಕೆ.ಜಿಯಷ್ಟು ತೂಕ ಬರಲಿವೆ. ನೇರವಾಗಿ ಬೋಯರ್ ಮೇಕೆಯಿಂದ ಸಂಕರಗೊಂಡು ಹುಟ್ಟುವ ಮರಿಗಳ ಬೆಳವಣಿಗೆಯ ವೇಗ ಹೆಚ್ಚು’ ಎಂದು ಉಮೇಶ್‌ ವಿವರಿಸಿದರು.

‘ಈ ಮೇಕೆಯನ್ನು ಮಾಂಸಕ್ಕಿಂತಲೂ ಹೆಚ್ಚಾಗಿ ಸಂತಾನೋತ್ಪತ್ತಿಗೆ ಬಳಸಲಾಗುತ್ತಿದೆ. ಈ ತಳಿಯನ್ನು ಅಭಿವೃದ್ಧಿಪಡಿಸಲು ಇಷ್ಟಪಡುವ ರೈತರು ಕರೆತರುವ ಆಡುಗಳಿಗೆ ಸಂಕರ ಮಾಡಿಕೊಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ರಾಜ್ಯದ ಹವಾಮಾನಕ್ಕೆ ಹೊಂದಿಕೊಳ್ಳುವ ಈ ಮೇಕೆಯಿಂದ ಸಂಕರಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ತಳಿಯ ಮೇಕೆ ಸಾಕಾಣಿಕೆ ಅತ್ಯಂತ ಸುಲಭ. ಇವುಗಳಿಗೆ ಬೇರೆ ಯಾವುದೇ ಹೆಚ್ಚುವರಿ ಪೌಷ್ಟಿಕಾಂಶ ಬೇಕಿಲ್ಲ. ಇವುಗಳೂ ಇತರೆ ಮೇಕೆಗಳಂತೆ ಹುಲ್ಲು, ಸೊಪ್ಪು ತಿನ್ನಲಿವೆ. ಬೋಯರ್ ಮೂಲ ತಳಿಯ ಮೇಕೆಗಳನ್ನು ಕೆ.ಜಿ ಲೆಕ್ಕದಲ್ಲೇ ಮಾರಾಟ ಮಾಡಲಾಗುತ್ತದೆ. ಪ್ರತಿ ಕೆ.ಜಿಗೆ ₹1,500ರಿಂದ ₹3,500 ತನಕ ಬೆಲೆ ಇದೆ. ತಲಶ್ಶೇರಿ ತಳಿಯ ಮೇಕೆಗೆ ಸಂಕರಗೊಂಡು ಹುಟ್ಟುವ ಮರಿಗಳ ಬೆಲೆ ಕೆ.ಜಿಗೆ ₹550 ಇದೆ’ ಎಂದು ವಿವರಿಸಿದರು.

‘ಮೂಲ ತಳಿಯ ಒಂಬತ್ತು ತಿಂಗಳ ಮರಿ 65 ಕೆ.ಜಿ ತೂಕ ಹೊಂದಿದೆ. ಅತ್ಯಂತ ಬಲಿಷ್ಠವಾಗಿ ಬೆಳೆಯುತ್ತಿರುವ ಈ ಮೇಕೆಗೆ ₹7 ಲಕ್ಷ ಮೌಲ್ಯ ಎಂದು ಅಂದಾಜು ಮಾಡಿದ್ದೇವೆ’ ಎಂದು ಉಮೇಶ್ ತಿಳಿಸಿದರು.

ಮಳಿಗೆ ಸಿಗದೆ ಪರದಾಟ

ಬೋಯರ್ ತಳಿಯ ಮೇಕೆಯನ್ನು ಮೇಳಕ್ಕೆ ತಂದಿರುವ ಉಮೇಶ್ ಅವರಿಗೆ ಮಳಿಗೆ ಒದಗಿಸದೆ ದಿನವಿಡೀ ಅವುಗಳನ್ನು ಗೂಡ್ಸ್‌ ವಾಹನದ ಮೇಲೆಯೇ ನಿಲ್ಲಿಸಿಕೊಂಡಿದ್ದರು.

‘ಉತ್ಕೃಷ್ಟ ತಳಿಯ ಮೇಕೆಗಳನ್ನು ಮೇಳಕ್ಕೆ ಬರುವ ರೈತರಿಗೆ ಪರಿಚಯಿಸುವ ಉದ್ದೇಶದಿಂದ ಬಂದಿದ್ದೇವೆ. ಜನ ಕೂಡ ಆಸಕ್ತಿಯಿಂದ ಇವುಗಳನ್ನು ನೋಡುತ್ತಿದ್ದಾರೆ. ಆದರೆ, ಮಳಿಗೆಯನ್ನೇ ಒದಗಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಸುರಿವ ಮಳೆಯಲ್ಲಿ ಕೆಲಕಾಲ ಮೇಕೆಗಳೊಂದಿಗೆ ಆವರಣದಲ್ಲೇ ಕುಳಿತು ಪ್ರತಿಭಟನೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT