ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಆಭರಣ ಮಳಿಗೆಯಲ್ಲಿ ಗುಂಡಿನ ದಾಳಿ: ಇಬ್ಬರಿಗೆ ಗಾಯ

* ಚಿನ್ನಾಭರಣ ದರೋಡೆಗೆ ನುಗ್ಗಿದ್ದ ಆರೋಪಿಗಳು * ಪ್ರತಿರೋಧವೊಡ್ಡಿದ್ದ ಮಾಲೀಕ
Published 14 ಮಾರ್ಚ್ 2024, 15:59 IST
Last Updated 14 ಮಾರ್ಚ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಿಗೇಹಳ್ಳಿ ಬಳಿಯ ದೇವಿನಗರದಲ್ಲಿರುವ ಲಕ್ಷ್ಮಿ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್ ಮಳಿಗೆಗೆ ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳು, ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮಳಿಗೆಯ ಮಾಲೀಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

‘ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿರುವ ಘಟನೆಯಲ್ಲಿ ಮಾಲೀಕ ಹಾಪುರಾಮ್ (38) ಹಾಗೂ ಅನಂತರಾಮ್ (21) ಗಾಯಗೊಂಡಿದ್ದಾರೆ. ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಗುಂಡಿನ ದಾಳಿ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ ಹೆಲ್ಮೆಟ್ ಧರಿಸಿದ್ದ ನಾಲ್ವರು ದುಷ್ಕರ್ಮಿಗಳು ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ಮಳಿಗೆ ಬಳಿ ಬಂದಿದ್ದರು. ಒಬ್ಬಾತ, ಮಳಿಗೆ ಹೊರಗೆ ನಿಂತಿದ್ದ. ಮೂವರು ದುಷ್ಕರ್ಮಿಗಳು, ಮಳಿಗೆಯೊಳಗೆ ನುಗ್ಗಿದ್ದರು. ‘ಎಲ್ಲ ಚಿನ್ನಾಭರಣ ತೆಗೆದುಕೊಡು’ ಎಂದು ಕೂಗಾಡಿದ್ದರು. ಅದಕ್ಕೆ ಒಪ್ಪದ ಮಾಲೀಕ, ‘ಚಿನ್ನಾಭರಣ ಏನು ಕೊಡುವುದಿಲ್ಲ. ವಾಪಸು ಹೋಗಿ. ಇಲ್ಲದಿದ್ದರೆ, ಪೊಲೀಸರಿಗೆ ಹೇಳುತ್ತೇನೆ’ ಎಂದಿದ್ದರು.’

‘ಮಾಲೀಕ ಹಾಗೂ ದುಷ್ಕರ್ಮಿಗಳ ನಡುವೆ ಕೆಲ ನಿಮಿಷ ಮಾತಿನ ಚಕಮಕಿ ನಡೆದಿತ್ತು. ಮಾಲೀಕ ಹಾಗೂ ಸಿಬ್ಬಂದಿ, ದುಷ್ಕರ್ಮಿಗಳನ್ನು ಹಿಡಿಯಲು ಮುಂದಾಗಿದ್ದರು. ಅವಾಗಲೇ ಮಳಿಗೆಯಲ್ಲಿದ್ದ ದುಷ್ಕರ್ಮಿಯೊಬ್ಬ, ಪಿಸ್ತೂಲ್‌ನಿಂದ ಮಾಲೀಕ ಹಾಪುರಾಮ್ ಹೊಟ್ಟೆಗೆ ಒಂದು ಸುತ್ತು ಗುಂಡು ಹೊಡೆದಿದ್ದ. ಇನ್ನೊಬ್ಬ ದುಷ್ಕರ್ಮಿ, ಸಿಬ್ಬಂದಿ ಅನಂತರಾಮ್ ಕಾಲಿಗೆ ಗುಂಡು ಹಾರಿಸಿದ್ದ. ಇದೇ ಸಂದರ್ಭದಲ್ಲಿ ಹೊರಗಿದ್ದ ದುಷ್ಕರ್ಮಿ ಸಹ ತನ್ನ ಬಳಿಯ ಪಿಸ್ತೂಲ್‌ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹೊಡೆದಿದ್ದ’ ಎಂದು ಪೊಲೀಸರು ತಿಳಿಸಿದರು.

‘ಗುಂಡಿನ ಶಬ್ದ ಕೇಳಿ ಸ್ಥಳೀಯರು ಆತಂಕಗೊಂಡಿದ್ದರು. ಗುಂಡಿನ ದಾಳಿ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಬೈಕ್ ಸಮೇತ ಪರಾರಿಯಾಗಿದ್ದಾರೆ’ ಎಂದರು.

ವೈಯಕ್ತಿಕ ದ್ವೇಷ ಶಂಕೆ: ‘ದುಷ್ಕರ್ಮಿಗಳು ಆಭರಣ ದರೋಡೆಗೆ ಬಂದಿದ್ದರೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ, ಇದೊಂದು ವೈಯಕ್ತಿಕ ದ್ವೇಷಕ್ಕಾಗಿ ನಡೆದ ಕೃತ್ಯವೆಂಬ ಸಂಶಯವೂ ಇದೆ. ಎರಡೂ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಖಾಲಿ ಕೈಯಲ್ಲಿ ಪರಾರಿ: ‘ದುಷ್ಕರ್ಮಿಗಳು ಮಳಿಗೆಯಲ್ಲಿ ಯಾವುದೇ ಆಭರಣ ದೋಚಿಕೊಂಡು ಹೋಗಿಲ್ಲ. ಆಭರಣ ಮಳಿಗೆ ಮಾಲೀಕನನ್ನು ಕೊಲೆ ಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ಮಳಿಗೆ ನುಗ್ಗಿರಬಹುದೆಂದು ಕೆಲವರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಮಾಲೀಕ ಕೆಲ ವ್ಯಕ್ತಿಗಳ ಜೊತೆ ವೈಷಮ್ಯ ಕಟ್ಟಿಕೊಂಡಿದ್ದರೆಂಬ ಮಾಹಿತಿ ಇದೆ. ಅವರೇ ಸುಪಾರಿ ನೀಡಿರುವ ಅನುಮಾನವಿದೆ. ಈ ಬಗ್ಗೆ ಮಾಲೀಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದರು.

ಕೊಡಿಗೇಹಳ್ಳಿ ದೇವಿನಗರದಲ್ಲಿರುವ ಲಕ್ಷ್ಮಿ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್ ಮಳಿಗೆ
ಕೊಡಿಗೇಹಳ್ಳಿ ದೇವಿನಗರದಲ್ಲಿರುವ ಲಕ್ಷ್ಮಿ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್ ಮಳಿಗೆ

‘ಮಳಿಗೆ ಬಳಿ ಬಿದ್ದಿದ್ದ ಪಿಸ್ತೂಲ್’

‘ದುಷ್ಕರ್ಮಿಗಳು ಕೃತ್ಯಕ್ಕೆ ನಾಡ ಪಿಸ್ತೂಲ್ ಬಳಸಿದ್ದಾರೆ. ಸ್ಥಳದಿಂದ ಪರಾರಿಯಾಗುವ ಸಂದರ್ಭದಲ್ಲಿ ಒಂದು ಪಿಸ್ತೂಲ್‌ ಅನ್ನು ಮಳಿಗೆ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳು ಹೊರ ರಾಜ್ಯದವರೆಂಬ ಸುಳಿವು ಇದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT