ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಆನ್‌ಲೈನ್‌ ಜೂಜಿಗಾಗಿ ಅಣ್ಣನ ಮದುವೆಗಿಟ್ಟಿದ್ದ ಚಿನ್ನ ಕಳವು

Published : 13 ಸೆಪ್ಟೆಂಬರ್ 2024, 15:46 IST
Last Updated : 13 ಸೆಪ್ಟೆಂಬರ್ 2024, 15:46 IST
ಫಾಲೋ ಮಾಡಿ
Comments

ಬೆಂಗಳೂರು: ಆನ್‌ಲೈನ್​ ಬೆಟ್ಟಿಂಗ್‌ಗೆ ಹಣ ಹೊಂದಿಸಲು ಅಣ್ಣನ ಮದುವೆಗೆ ತಂದಿಟ್ಟಿದ್ದ ಚಿನ್ನಾಭರಣ, ನಗದು ಕದ್ದ ತಮ್ಮನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ, ₹ 7 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ

ಕ್ಯಾಬ್ ಚಾಲಕ ಆದಿತ್ಯ ರೆಡ್ಡಿ (22) ಬಂಧಿತ ಆರೋಪಿ. ಈತನಿಂದ 107 ಗ್ರಾಂ. ಚಿನ್ನಾಭರಣ, 100 ಗ್ರಾಂ. ತೂಕದ ದೇವಿಯ ಬೆಳ್ಳಿಯ ಮುಖವಾಡ ವಶಕ್ಕೆ ಪಡೆಯಲಾಗಿದೆ.

ಆದಿತ್ಯ ರೆಡ್ಡಿ ಆನ್‌ಲೈನ್ ರಮ್ಮಿ ಆಟದ ಚಟಕ್ಕೆ ಬಿದ್ದು ಬೃಹತ್‌ ಮೊತ್ತದ ಸಾಲ ಮಾಡಿಕೊಂಡಿದ್ದ. ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಕಳ್ಳತನಕ್ಕೆ ‌ಸಂಚು ರೂಪಿಸಿದ್ದ. ಆರೋಪಿಯ ಅಣ್ಣನ ಮದುವೆ ನಿಶ್ಚಯವಾಗಿದ್ದರಿಂದ ಪೋಷಕರು ಮನೆಯಲ್ಲಿ ಚಿನ್ನಾಭರಣ, ನಗದು ಒಗ್ಗೂಡಿಸಿಟ್ಟಿದ್ದರು.

ಆಗಸ್ಟ್ 28ರಂದು ಆರೋಪಿಯ ಪೋಷಕರು ಲಗ್ನಪತ್ರಿಕೆಗಳನ್ನು ನೀಡಲು ಕೋಲಾರಕ್ಕೆ ತೆರಳಿದ್ದರು. ಅಣ್ಣ ಸಹ ಹೊರಗೆ ಹೋಗಿದ್ದರು. ಆಗ ಮನೆಯ ಲಾಕರ್ ಒಡೆದಿದ್ದ ಆರೋಪಿ, ಚಿನ್ನಾಭರಣ ಹಾಗೂ₹ 45 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದ. ಮನೆಗೆ ಬಂದ ಬಳಿಕ ಕಳ್ಳತನವಾಗಿರುವುದನ್ನು ಗಮನಿಸಿ, ಕಿರಿಯ ಮಗನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಲು ಆಂಧ್ರಪ್ರದೇಶಕ್ಕೆ ಹೊರಟಿದ್ದ ಆರೋಪಿಯನ್ನು ಯಲಹಂಕ ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಯಿತು. ಸಾಲ ತೀರಿಸಲು ಹಣದ ಅಗತ್ಯವಿತ್ತು. ಹಾಗಾಗಿ ಮನೆಯಲ್ಲಿಯೇ ಕಳ್ಳತನ ಮಾಡಿದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT