ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಸ್‌ಆರ್‌ಟಿಸಿಗೆ ಹೆಚ್ಚುವರಿ ವರಮಾನ ತರುತ್ತಿರುವ ‘ಅಶ್ವಮೇಧ’

ನಾಲ್ಕು ತಿಂಗಳ ಹಿಂದೆ ಹೊಸ ವಿನ್ಯಾಸದ ಬಸ್‌ ಕಾರ್ಯಾಚರಣೆ ಆರಂಭಿಸಿದ್ದ ಕೆಎಸ್‌ಆರ್‌ಟಿಸಿ
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಕೆಂಪು ಬಸ್‌ಗಳಲ್ಲಿ ಪ್ರಯಾಣಿಕರು ‘ಅಶ್ವಮೇಧ’ ಬಸ್‌ಗಳಿಗೆ ಆದ್ಯತೆ ನೀಡುತ್ತಿದ್ದು, ಇದರಿಂದ ಸಾರಿಗೆ ಬಸ್‌ಗಿಂತ ‘ಅಶ್ವಮೇಧ‘ ಬಸ್‌ ಕಿಲೋಮೀಟರ್‌ಗೆ ₹10ಕ್ಕೂ ಅಧಿಕ ವರಮಾನ ಗಳಿಸುತ್ತಿದೆ.

ಕೆಎಸ್‌ಆರ್‌ಟಿಸಿ ಈ ವರ್ಷದ ಫೆಬ್ರುವರಿಯಲ್ಲಿ ಹೊಸ‌ ವಿನ್ಯಾಸದ ಈ ಬಸ್‌ ಅನ್ನು ‘ಅಶ್ವಮೇಧ‘ ಎಂಬ ಹೊಸ‌ ಬ್ರಾಂಡ್‌ ಅಡಿ ರಸ್ತೆಗೆ ಇಳಿಸಿತ್ತು. ಆಗ ಈ ಹೆಸರಿನ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಪ್ರಯಾಣಿಕರು ಅದಕ್ಕೆ ತಲೆಕೆಡಿಸಿಕೊಳ್ಳದೇ ಸಾರಿಗೆ ಬಸ್‌ಗಿಂತ ಇದೇ ಬಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

3.42 ಮೀಟರ್ ಎತ್ತರ ಇರುವ ‘ಅಶ್ವಮೇಧ’ (ಕ್ಲಾಸಿಕ್‌) ಬಸ್‌ನಲ್ಲಿ 52 ಆಸನಗಳಿದ್ದು, ‘ಬಕೆಟ್‌ ಟೈಪ್‌’ ವಿನ್ಯಾಸವನ್ನು ಹೊಂದಿವೆ. ವಾಹನದ ಮುಂದಿನ ಮತ್ತು ಹಿಂದಿನ ಗಾಜು ವಿಶಾಲವಾಗಿವೆ. ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು ದೊಡ್ಡದಾಗಿದ್ದು, ಟಿಂಟೆಡ್‌ ಗಾಜುಗಳನ್ನು ಹೊಂದಿವೆ. ಲಗೇಜ್‌ ಕ್ಯಾರಿಯರ್‌ ಕೂಡ ದೊಡ್ಡದಿದೆ. ಮಧ್ಯೆ ನಿಂತುಕೊಳ್ಳಲು ಕೂಡ ವಿಶಾಲ ಜಾಗ ಇರುವುದರಿಂದ ಸಾರಿಗೆ ಬಸ್‌ಗಳ ಬದಲು ಈ ಬಸ್‌ಗಳಲ್ಲಿ ಜನ ಪ್ರಯಾಣಿಸಲು ಬಯಸುತ್ತಿದ್ದಾರೆ. ಅಶ್ವಮೇಧದಲ್ಲಿ ಸೀಟು ಇಲ್ಲದೇ ಇದ್ದರೆ ಮಾತ್ರ ಸಾರಿಗೆ ಬಸ್‌ಗಳಿಗೆ ಹೋಗುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳು ಪ್ರತಿ ಕಿಲೋಮೀಟರ್‌ಗೆ ₹44ರಿಂದ ₹ 50ರವರೆಗೆ ಗಳಿಸುತ್ತಿವೆ. ‘ಅಶ್ವಮೇಧ’ ಬಸ್‌ಗಳು ₹52ರಿಂದ ₹62ರವರೆಗೆ ಗಳಿಸುತ್ತಿವೆ. ಪಾಯಿಂಟ್‌ ಟು ಪಾಯಿಂಟ್‌ಗೆ ‘ಅಶ್ವಮೇಧ’ವನ್ನು ಬಳಸುತ್ತಿರುವುದು ಕೂಡ ಹೆಚ್ಚುವರಿ ವರಮಾನ ಪಡೆಯಲು ಕಾರಣವಾಗಿದೆ.

‘ಪಾಯಿಂಟ್ ಟು ಪಾಯಿಂಟ್‌ ಬಸ್‌ಗಳಾದರೆ ತಡೆರಹಿತವಾಗಿ ಸಂಚರಿಸುತ್ತವೆ. ಆಗ ನಿರ್ವಾಹಕರು ಬೇಕಾಗುವುದಿಲ್ಲ. ಆರಂಭದ ಸ್ಥಳದಲ್ಲಿ ಚಾಲಕರೇ ಪ್ರಯಾಣಿಕರಿಗೆ ಟಿಕೆಟ್‌ ನೀಡುತ್ತಾರೆ. ತಡೆರಹಿತ (ನಾನ್‌ ಸ್ಪಾಪ್‌) ಅಲ್ಲದ ಎಕ್ಸ್‌ಪ್ರೆಸ್‌ ಬಸ್‌ಗಳಲ್ಲಿ ಟಿಕೆಟ್‌ ನೀಡಲು ನಿರ್ವಾಹಕರು ಇರಲೇಬೇಕಾಗುತ್ತದೆ. ‘ಅಶ್ವಮೇಧ ಕ್ಲಾಸಿಕ್‌’ ಬಸ್‌ಗಳಲ್ಲಿ ಬಹುತೇಕ ಪಾಯಿಂಟ್‌ ಟು ಪಾಯಿಂಟ್‌ ಇರುವುದರಿಂದ ನಿರ್ವಾಹಕರು ಇರುವುದಿಲ್ಲ. ಇದರಿಂದ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತಿದೆ. ನಿಲುಗಡೆರಹಿತವಾಗಿರುವ ಕಾರಣ, ದೂರದ ಊರುಗಳಿಗೆ ಪ್ರಯಾಣಿಸುವವರು ಇದೇ ಬಸ್‌ಗಳನ್ನು ಆರಿಸಿಕೊಳ್ಳುತ್ತಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾಹಿತಿ ನೀಡಿದರು.

ಬೆಂಗಳೂರು–ಮೈಸೂರು, ಬೆಂಗಳೂರು–ಹಾಸನ, ಮಂಗಳೂರು–ಧರ್ಮಸ್ಥಳ ಸಹಿತ ಅನೇಕ ಕಡೆಗಳಲ್ಲಿ ‘ಅಶ್ವಮೇಧ ಬಸ್‌ಗಳು ಸಂಚರಿಸುತ್ತಿದ್ದರೂ ಮತ್ತಷ್ಟು ಬಸ್‌ಗಳಿಗೆ ಬೇಡಿಕೆ ಬಂದಿದೆ ಎಂದು ತಿಳಿಸಿದರು.

ಇನ್ನಷ್ಟು ಬಸ್‌ಗಳಿಗೆ ಕ್ರಮ

‘ಜನಸಾಮಾನ್ಯರು ಬಳಸುವ ಅಶ್ವಮೇಧ ಬಸ್‌ಗಳಿಗೆ ಉತ್ತಮ ಸ್ಪಂದನ ದೊರಕಿದೆ. ಈಗಾಗಲೇ 500ಕ್ಕೂ ಅಧಿಕ ‘ಅಶ್ವಮೇಧ’ ಬಸ್‌ಗಳಿವೆ. ಎಲ್ಲ ಕಡೆಯಿಂದ ಬೇಡಿಕೆ ಬರುತ್ತಿರುವುದರಿಂದ ಇನ್ನಷ್ಟು ಬಸ್‌ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT