ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru -Dharwad Vande Bharat | ವಂದೇ ಭಾರತ್‌ಗೆ ಉತ್ತಮ ಸ್ಪಂದನೆ

ಧಾರವಾಡ ಕಡೆಗೆ ಶೇ 70, ಬೆಂಗಳೂರು ಕಡೆಗೆ ಶೇ 76 ಸೀಟು ಭರ್ತಿ
Published 3 ಜುಲೈ 2023, 0:20 IST
Last Updated 3 ಜುಲೈ 2023, 0:20 IST
ಅಕ್ಷರ ಗಾತ್ರ

ಬೆಂಗಳೂರು: ಐದು ದಿನಗಳ ಹಿಂದೆ ಬೆಂಗಳೂರು-ಧಾರವಾಡ ನಡುವೆ ಆರಂಭಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಾರಾಂತ್ಯದಲ್ಲಿ ಶೇ 70ಕ್ಕೂ ಅಧಿಕ ಸೀಟುಗಳು ಭರ್ತಿಯಾಗಿದ್ದವು. ಪ್ರಯಾಣಿಕರ ಉತ್ತಮ ಸ್ಪಂದನದಿಂದ ಈ ರೈಲು ಆರಂಭಿಕ ಯಶಸ್ಸನ್ನು ಪಡೆದಿದೆ. 

8 ಕೋಚ್‌ಗಳ ಈ ರೈಲಿನಲ್ಲಿ 52 ಸೀಟುಗಳು ಎಕ್ಸಿಕ್ಯುಟಿವ್‌ ಕ್ಲಾಸ್‌ದ್ದಾಗಿವೆ. 478 ಸೀಟುಗಳು ಎಸಿ ಚೇರ್‌ ಕಾರ್‌ ಆಗಿವೆ.  ಬೆಂಗಳೂರಿನಿಂದ ಬೆಳಿಗ್ಗೆ ಹೊರಟರೆ ಮಧ್ಯಾಹ್ನದೊಳಗೆ ಧಾರವಾಡಕ್ಕೆ ತಲುಪುವ, ಮಧ್ಯಾಹ್ನ ಧಾರವಾಡದಿಂದ ಹೊರಟು ಸಂಜೆ ಬೆಂಗಳೂರಿಗೆ ತಲುಪುತ್ತಿರುವುದು ಪ್ರಯಾಣಿಕರ ಸ್ಪಂದನೆ ಜಾಸ್ತಿಯಾಗಲು ಕಾರಣವಾಗಿದೆ. ಇತರೇ ರೈಲುಗಳಿಗಿಂತ ದರ ಬಹಳ ಅಧಿಕವಿದ್ದರೂ ನೂಕುನುಗ್ಗಲು ಇಲ್ಲದ, ಸುಖ ಪ್ರಯಾಣಕ್ಕಾಗಿ ವಂದೇ ಭಾರತ್‌ಗೆ ಆದ್ಯತೆ ನೀಡುತ್ತಿದ್ದಾರೆ.

‘ಬೆಂಗಳೂರಿನಿಂದ ದಾವಣಗೆರೆಗೆ ಬಹಳ ಬೇಗ ತಲುಪುತ್ತಿದೆ. ಕರಜಗಿಯಿಂದ ನಿಧಾನವಾಗುತ್ತದೆ. ಕುಂದಗೋಳದ ನಂತರ ಸಿಗುವ ಕ್ಲಿಷ್ಟ ಸೇತುವೆಗಳು, ತಿರುವುಗಳು ಇದಕ್ಕೆ ಕಾರಣ. ನಾನು ಬೆಂಗಳೂರಿನಿಂದ ಧಾರವಾಡಕ್ಕೆ ಇದೇ ರೈಲಲ್ಲಿ ಹೋಗಿದ್ದು, ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲೇ ತಲುಪಿತ್ತು. ಆಧುನಿಕ ಆಸನ, ಉತ್ತಮ ಸೌಲಭ್ಯಗಳಿರುವ ಈ ರೈಲಿನಲ್ಲಿ ಸದ್ದೇ ಇಲ್ಲ. ಪ್ರಯಾಣ ಸಾಗಿದ್ದೇ ಗೊತ್ತಾಗುವುದಿಲ್ಲ’ ಎಂದು ಪ್ರಯಾಣಿಕ ಕೃಷ್ಣಕುಮಾರ್‌ ಅವರು ‘ಪ್ರಜಾವಾಣಿ’ ಜೊತೆಗೆ ಅನುಭವ ಹಂಚಿಕೊಂಡರು.

‘ಆರಾಮದಾಯಕವಾಗಿ ಹೋಗುವವರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹೇಳಿ ಮಾಡಿಸಿದಂತಿದೆ. ಕಮೋಡ್ ಸಿಸ್ಟಂನ ಶೌಚಾಲಯದಿಂದ ಹಿಡಿದು ಅತ್ಯಾಧುನಿಕ ಸೌಲಭ್ಯಗಳು ಇದರಲ್ಲಿದೆ. ಜನರು ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಈ ರೈಲು ಜನಪ್ರಿಯಗೊಳ್ಳಲಿದೆ’ ಎಂದು ಮತ್ತೊಬ್ಬ ಪ್ರಯಾಣಿಕ ವಿನಯ ಕುಮಾರ್ ಮಾಹಿತಿ ನೀಡಿದರು.‌

ಆಹಾರ ಬೇಕಿದ್ದರೆ ಟಿಕೆಟ್‌ ಮಾಡುವಾಗಲೇ ಕ್ಯಾಟರಿಂಗ್‌ ಶುಲ್ಕ ಎಂದು ನೀಡಬೇಕಾಗುತ್ತದೆ. ಬೆಂಗಳೂರಿನಿಂದ ಹೋಗುವಾಗ ಉಪಾಹಾರ ಮಾತ್ರ ಇರುವುದರಿಂದ ₹152 ದರ ಇದೆ. ಧಾರವಾಡದಿಂದ ಬರುವಾಗ ₹320 ನೀಡಬೇಕಾಗುತ್ತದೆ. 

ಪ್ರಯಾಣಿಕರಿಗೆ ಉತ್ತಮ ಸೌಲಭ್ಯ, ವೇಗವಾದ ಪ್ರಯಾಣ ಸಿಗುತ್ತಿರುವುದರಿಂದ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಮೈಸೂರು–ಚೆನ್ನೈ ವಂದೇ ಭಾರತ್‌ ಯಶಸ್ವಿಯಾದಂತೆ ಬೆಂಗಳೂರು– ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಕೂಡ ಯಶಸ್ವಿಯಾಗಲಿದೆ ಎಂದು ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು–ಚೆನ್ನೈ ವಂದೇ ಭಾರತ್‌ಗೂ ಪ್ರಯಾಣಿಕರ ಕೊರತೆ ಇಲ್ಲ

ಬೆಂಗಳೂರು ಮೂಲಕ ಸಾಗುವ ಮೈಸೂರು–ಚೆನ್ನೈ ವಂದೇ ಭಾರತ್‌ ರೈಲು ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾಗಿತ್ತು. ಸರಾಸರಿ ಶೇ 75ಕ್ಕಿಂತ ಸೀಟ್‌ ಭರ್ತಿಯಾಗುತ್ತಿವೆ. ಮೈಸೂರಿನಿಂದ ಚೆನ್ನೈಗೆ ಜೂನ್‌ ತಿಂಗಳಲ್ಲಿ ಎಸಿ ಚೇರ್‌ ಕಾರ್‌ನಲ್ಲಿ ಶೇ 68ರಷ್ಟು ಜನರು ಪ್ರಯಾಣಿಸಿದ್ದರೆ ಎಕ್ಸಿಕ್ಯುಟಿವ್‌ ಕ್ಲಾಸ್‌ನಲ್ಲಿ ಶೇ 77 ಜನರು ಪ್ರಯಾಣಿಸಿದ್ದರು. ಚೆನ್ನೈಯಿಂದ ಮೈಸೂರಿಗೆ ಹೆಚ್ಚು ಪ್ರಯಾಣಿಕರು ಈ ರೈಲಿನಲ್ಲಿ ಬಂದಿದ್ದಾರೆ. ಎಸಿ ಚೇರ್‌ ಕಾರ್‌ನಲ್ಲಿ ಶೇ 79ರಷ್ಟು ಮತ್ತು ಎಕ್ಸಿಕ್ಯುಟಿವ್‌ ಕ್ಲಾಸ್‌ನಲ್ಲಿ ಶೇ 83ರಷ್ಟು ಜನರು ಪ್ರಯಾಣಿಸಿದ್ದಾರೆ ಎಂದು ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT