ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೊಯ್ಸಳ ಟ್ರ್ಯಾಕಿಂಗ್‌’ ವ್ಯವಸ್ಥೆಗೆ ಉತ್ತಮ ಸ್ಪಂದನೆ: ಬಿ.ದಯಾನಂದ ಮಾಹಿತಿ

ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಮಾಹಿತಿ
Published 10 ಜುಲೈ 2024, 23:40 IST
Last Updated 10 ಜುಲೈ 2024, 23:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಜಾರಿಗೆ ತಂದಿರುವ ‘ಹೊಯ್ಸಳ ಟ್ರ್ಯಾಕಿಂಗ್‌’ ವ್ಯವಸ್ಥೆ ಹಾಗೂ ‘ಅಪದ್ಬಾಂಧವ’ಕ್ಕೆ ಉತ್ತಮ ಸ್ಪಂದನೆ ಲಭಿಸುತ್ತಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ತಿಳಿಸಿದರು.

‘ಈ ಮೊದಲು ಸಾರ್ವಜನಿಕರು 112ಕ್ಕೆ ಕರೆ ಮಾಡಿದಾಗ, ಹೊಯ್ಸಳ ಗಸ್ತು ವಾಹನ ಸಂಖ್ಯೆ ಹಾಗೂ ಸಿಎಫ್‌ಎಸ್ ಸಂಖ್ಯೆಯ ಸಂದೇಶ ಮಾತ್ರ ರವಾನೆ ಆಗುತ್ತಿತ್ತು. ಈಗ ಅದನ್ನು ಮೇಲ್ದರ್ಜೆಗೇರಿಸಲಾಗಿದೆ. ಕರೆ ಮಾಡಿದ ಸಾರ್ವಜನಿಕರಿಗೆ ಹೊಯ್ಸಳದ ಲೈವ್ ಲೊಕೇಶನ್ ಲಿಂಕ್ ರವಾನೆ ಆಗಲಿದೆ. ಅಲ್ಲದೇ ಹೊಯ್ಸಳ ವಾಹನ ಸಂಚರಿಸುವ ಮಾರ್ಗ, ಅದು ಎಷ್ಟು ದೂರದಲ್ಲಿದೆ, ಸ್ಥಳಕ್ಕೆ ಬರಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದೂ ಗೊತ್ತಾಗಲಿದೆ. ಒಲಾ, ಊಬರ್ ಅಥವಾ ಫುಡ್ ಡೆಲಿವರಿ ಆ್ಯಪ್‌ಗಳ ಮಾದರಿಯಲ್ಲಿ ವಾಹನವನ್ನು ಪತ್ತೆ ಹಚ್ಚಬಹುದಾಗಿದೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಕೆಎಸ್‌ಪಿ ಆ್ಯಪ್‌ನಲ್ಲಿ ‘ಅಪತ್ಬಾಂಧವ’:

ನಗರದಲ್ಲಿರುವ ಸುರಕ್ಷಿತ ತಾಣಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದ್ದು, ಇದೀಗ ರಾಜ್ಯ ಪೊಲೀಸ್ ಇಲಾಖೆಯ ಕೆಎಸ್‌ಪಿ ಆ್ಯಪ್‌ನಲ್ಲೇ ‘ಸೇಫ್ ಕನೆಕ್ಟ್’ ಎಂಬುದಾಗಿ ಪರಿಚಯಿಸಲಾಗಿದೆ ಎಂದು ಅವರು ತಿಳಿಸಿದರು.  

50 ಕಡೆ ಸುರಕ್ಷಿತ ತಾಣ:
‘ಸೇಫ್ ಸಿಟಿ’ ಯೋಜನೆ ಅಡಿ ನಗರದ 50 ಸ್ಥಳಗಳಲ್ಲಿ ಸುರಕ್ಷಿತ ತಾಣಗಳನ್ನು ನಿರ್ಮಿಸಲಾಗಿದ್ದು ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.

ಒಂದು ತಿಂಗಳಲ್ಲಿ 45 ಮಂದಿ ಸೆರೆ:

ಮಾದಕ ವಸ್ತುಗಳ ಮಾರಾಟ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಪೊಲೀಸರು, ತಿಂಗಳ ಅವಧಿಯಲ್ಲಿ ಮೂವರು ವಿದೇಶಿ ಪ್ರಜೆಗಳೂ ಸೇರಿದಂತೆ 45 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 117 ಕೆ.ಜಿ ಗಾಂಜಾ, 11 ಕೆ.ಜಿ ಅಫೀಮು, 400 ಗ್ರಾಂ ಹಶೀಶ್‌ ಆಯಿಲ್, 50 ಗ್ರಾಂ. ಕೊಕೇನ್, 236 ಗ್ರಾಂ. ಎಂಡಿಎಂಎ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ದಯಾನಂದ ತಿಳಿಸಿದರು.

ಜೂನ್‌ ತಿಂಗಳಲ್ಲಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ನೆರೆ ರಾಜ್ಯಗಳಿಂದ ವಿದೇಶಿ ಪ್ರಜೆಗಳು ಡ್ರಗ್ಸ್‌ ತಂದು ನಗರದ ಗ್ರಾಹಕರಿಗೆ ಪೂರೈಸುತ್ತಿದ್ದರು. ಅಲ್ಲದೇ ಸ್ಥಳೀಯವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ 42 ಮಂದಿಯನ್ನು ಬಂಧಿಸಲಾಗಿದೆ ಎಂದರು.‌

ಜೂನ್‌ನಲ್ಲಿ ಮಟ್ಕಾ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೆ, ಸಂಚಾರ ನಿಯಮ ಉಲ್ಲಂಘನೆ, ಅನಧಿಕೃತ ಬಡ್ಡಿ ವ್ಯವಹಾರ ಸೇರಿದಂತೆ ವಿವಿಧ ಆರೋಪಗಳ ಅಡಿ ನಗರದ ಹಲವು ಠಾಣೆಗಳಲ್ಲಿ ದಾಖಲಾಗಿದ್ದ 179 ಪ್ರಕರಣಗಳಲ್ಲಿ 324 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಹಳೆಯ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT