ಗುರುವಾರ , ಮೇ 26, 2022
30 °C
ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಮುಖ್ಯಮಂತ್ರಿಗೆ ಮನವಿ

ಗೊರಗುಂಟೆ ಪಾಳ್ಯ ಸಿಗ್ನಲ್ ರಹಿತ ಜಂಕ್ಷನ್: ಸ್ಥಳ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೊರಗುಂಟೆ ಪಾಳ್ಯ ಜಂಕ್ಷನ್‌ ಅನ್ನು ಸಿಗ್ನಲ್ ರಹಿತ ಕಾರಿಡಾರ್ ಮಾಡುವ ಸಂಬಂಧ ಶಾಸಕ ಮುನಿರತ್ನ ಮತ್ತು ಪಾಲಿಕೆ ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.

‘ರಾಜ್ಯದ ವಿವಿಧೆಡೆಯಿಂದ ನಗರಕ್ಕೆ ಬರುವ ಶೇ 70ರಷ್ಟು ವಾಹನಗಳು ಈ ಜಂಕ್ಷನ್ ಮೂಲಕವೇ ಸಾಗಲಿವೆ. ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಈ ಯೋಜನೆ ಸಹಕಾರಿಯಾಗಲಿದೆ’ ಎಂದು ಮುನಿರತ್ನ ಹೇಳಿದರು.

‘ವಾರಾಂತ್ಯ ಮಾತ್ರವಲ್ಲದೇ ಪ್ರತಿದಿನವೂ ಇಲ್ಲಿ ಸಂಚಾರ ದಟ್ಟಣೆ ಇರುತ್ತದೆ. ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಚರ್ಚಿಸಲಾಗಿದೆ. ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಕೋರಲಾಗಿದೆ’ ಎಂದರು.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಮಾತನಾಡಿ, ‘ಗೊರಗುಂಟೆಪಾಳ್ಯ ಜಂಕ್ಷನ್ ಬೆಂಗಳೂರು ನಗರದ ಪ್ರಮುಖ ದ್ವಾರ ಇದ್ದಂತೆ. ಸಿಗ್ನಲ್ ರಹಿತ ಜಂಕ್ಷನ್ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈಗ ಸಿಗ್ನಲ್‌ ರಹಿತ ಜಂಕ್ಷನ್ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ವಾಹನ ದಟ್ಟಣೆಗೆ ಕಾರಣವಾಗಲಿದೆ. ಹೀಗಾಗಿ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

₹2 ಸಾವಿರ ಕೋಟಿ ಮೊತ್ತದ ಯೋಜನೆ

‘ಈ ಜಂಕ್ಷನ್ ಸಿಗ್ನಲ್ ರಹಿತ ಮಾಡಲು ₹2 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ’ ಎಂದು ಆಯುಕ್ತ ಎನ್.ಮಂಜುನಾಥಪ್ರಸಾದ್ ಹೇಳಿದರು.

‘ತುಮಕೂರು ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆ ಹಾಗೂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಇದು. ಈ ಯೋಜನೆ ಸಂಬಂಧ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ಹಣ ಮೀಸಲಿಡಲು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಬಿಇಎಲ್, ಹೋಟೆಲ್ ತಾಜ್ ಜಂಕ್ಷನ್, ಹೊರವರ್ತುಲ ರಸ್ತೆ, ತುಮಕೂರು ರಸ್ತೆ, ಪೈಪ್ ಲೈನ್ ರಸ್ತೆ, ಎಚ್.ಎಂ.ಟಿ ಜಂಕ್ಷನ್ ಸೇರಿ 6 ಕಡೆ ಮೇಲುಸೇತುವೆ ಹಾಗೂ ಕೆಳಸೇತುವೆ ನಿರ್ಮಿಸುವುದು ಯೋಜನೆಯ ಉದ್ದೇಶ. ಕಾಮಗಾರಿ ಆರಂಭವಾದರೆ ಮುಗಿಸಲು ಕನಿಷ್ಠ 4ರಿಂದ 5 ವರ್ಷ ಬೇಕಾಗಲಿದೆ. ಪ್ರತಿ ವರ್ಷದ ಬಜೆಟ್‌ನಲ್ಲಿ ಇಂತಿಷ್ಟು ಹಣ ಮೀಸಲಿಟ್ಟು ಯೋಜನೆ ಪೂರ್ಣಗೊಳಿಸಲು ಸಾಧ್ಯವಿದೆ’ ಎಂದು ಹೇಳಿದರು.

ಕಾರಿಡಾರ್‌ ಯೋಜನೆ ಮಾರ್ಗದಲ್ಲಿ ರಕ್ಷಣಾ ಭೂಮಿ, ಖಾಸಗಿ ಭೂಮಿ ಇದೆ. ಸ್ವಾಧೀನ ಮಾಡಿಕೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸಂಚಾರದ ಮಾರ್ಗ ಬದಲಿಸಿ ಹಂತ–ಹಂತವಾಗಿ ಯೋಜನೆ ಪೂರ್ಣಗೊಿಸಲಾಗುವುದು ಎಂದು ವಿವರಿಸಿದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು