ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಹೇಳಿದರೆ ದೇಶದ್ರೋಹದ ಪಟ್ಟ: ಶಶಿಕುಮಾರ್ ಆತಂಕ

ಗೌರಿ ಲಂಕೇಶ್ ಅವರ 61ನೇ ಜನ್ಮ ವಾರ್ಷಿಕೋತ್ಸವ
Last Updated 29 ಜನವರಿ 2023, 17:25 IST
ಅಕ್ಷರ ಗಾತ್ರ

ಬೆಂಗಳೂರು: ‘ಸತ್ಯ ಹೇಳುವುದೇ ಮಾಧ್ಯಮಗಳ ಮುಖ್ಯವಾದ ಉದ್ದೇಶ. ಸತ್ಯ ಹೇಳಲು ಹೊರಟವರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ’ ಎಂದು ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ಅಧ್ಯಕ್ಷ ಶಶಿಕುಮಾರ್ ಕಳವಳ ವ್ಯಕ್ತಪಡಿಸಿದರು.

ಗೌರಿ ಮೆಮೋರಿಯಲ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಗೌರಿ ಲಂಕೇಶ್ ಅವರ 61ನೇ ಜನ್ಮ ವಾರ್ಷಿಕೋತ್ಸವದಲ್ಲಿ ‘ಮೌನವಾದ ಧ್ವನಿಗಳು: ಹೊಸ ಭಾರತದಲ್ಲಿ ಪತ್ರಿಕೋದ್ಯಮಕ್ಕೆ ಇರುವ ಬೆದರಿಕೆಗಳು’ ಕುರಿತು ಉಪನ್ಯಾಸ ನೀಡಿದರು.

’ಸಂವಿಧಾನ ಮೂಲ ಸ್ವರೂಪಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ತಮ್ಮ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಸ್ವಾತಂತ್ರವಾಗಿ ಕಾರ್ಯ ನಿರ್ವಹಿಸಲು ಬೇಕಾದ ವಾತಾವರಣ ಇಲ್ಲದಿರುವುದು ಇದಕ್ಕೆ ಕಾರಣ’ ಎಂದರು.

‘ಆಡಳಿತವನ್ನು ಎದುರಿಸುವ ಶಕ್ತಿ ಮಾಧ್ಯಮಗಳಿಗೆ ಇಲ್ಲವಾಗಿದೆ. ಸುಳ್ಳು ಎಂಬುದು ಗೊತ್ತಿದ್ದರೂ ಅದನ್ನು ಹೇಳುವ ಸಾಮರ್ಥ್ಯವನ್ನು ಮಾಧ್ಯಮಗಳು ಕಳೆದುಕೊಂಡಿವೆ. ಸತ್ಯವನ್ನು ಮುಚ್ಚಿ ಸುಳ್ಳನ್ನೇ ವಿಜೃಂಭಿಸಲಾಗುತ್ತಿದೆ. ಸತ್ಯ ಹುಡುಕ ಹೊರಟವರು ಹಲವು ಸವಾಲುಗಳನ್ನು ಎದುರಿಸಬೇಕಾದ ಸ್ಥಿತಿಯೂ ಇದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಹೇಳಿದರು.

‘ಮಾಧ್ಯಮಗಳು ತಮ್ಮ ಪಾತ್ರವನ್ನು ಮರು ಅವಲೋಕನ ಮಾಡಿಕೊಳ್ಳಬೇಕಿದೆ. ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡು ಪ್ರಜಾಪ್ರಭುತ್ವ ಉಳಿಸಬೇಕಿದೆ’ ಎಂದರು.

ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೀತಲ್‌ವಾಡ್, ‘ದ್ವೇಷದ ಮಾತುಗಳು ಮನೆ ಮನೆ ತಲುಪುತ್ತಿದ್ದು, ಶಾಂತಿ–ಸಹಬಾಳ್ವೆ ಸಾರುವ ಮಾತುಗಳು ಜನರನ್ನು ತಲುಪುತ್ತಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಅದು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ’ ಎಂದರು.

‘ಸಾಮಾಜಿಕ ಮಾಧ್ಯಮದ ಜತೆಗೆ ಜನರ ಬಳಿಗೆ ತೆರಳಿ ಅವರಿಗೆ ಸತ್ಯ ಮತ್ತು ಶಾಂತಿ–ಸಹಬಾಳ್ವೆ ಬಗ್ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಚುನಾವಣೆಗಳು ಎದುರಾಗುತ್ತಿರುವ ಸಂದರ್ಭದಲ್ಲಿ ಈ ಕಾರ್ಯವನ್ನು ಸಾಮಾಜಿಕ ಚಳವಳಿಗಳು ಹೆಚ್ಚು ಹೆಚ್ಚಾಗಿ ಮಾಡಬೇಕಿದೆ. ಹಳ್ಳಿ–ಹಳ್ಳಿಗಳಲ್ಲಿ ಜಾಗೃತಿ ಹೆಚ್ಚಾಗಬೇಕಿದೆ’ ಎಂದು ಹೇಳಿದರು.

ಕವಿತಾ ಲಂಕೇಶ್ ಅವರು ನಿರ್ಮಿಸಿರುವ ಗೌರಿ ಕಿರು ಚಿತ್ರವನ್ನು ಬಿಡುಗಡೆ ಮಾಡಿ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT