ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ, ಉಬರ್‌ನಂತೆಯೇ ಸಾರಿಗೆಗೆ ಶೀಘ್ರ ಸರ್ಕಾರಿ ಆ್ಯಪ್‌: ಸಚಿವ ರಾಮಲಿಂಗಾರೆಡ್ಡಿ

ರಾಸ್ತೆ ಸಾರಿಗೆ ಕಾರ್ಮಿಕರ ಫೆಡರೇಶನ್‌ನ ರಾಜ್ಯ ಸಮಾವೇಶ
Published 29 ಅಕ್ಟೋಬರ್ 2023, 15:36 IST
Last Updated 29 ಅಕ್ಟೋಬರ್ 2023, 15:36 IST
ಅಕ್ಷರ ಗಾತ್ರ

ಬೆಂಗಳೂರು: ‘ಓಲಾ, ಉಬರ್‌ ರೀತಿಯಲ್ಲಿ ಶೀಘ್ರದಲ್ಲೇ ಸಾರಿಗೆ ಇಲಾಖೆಯಿಂದ ಆ್ಯಪ್‌ ಪರಿಚಯಿಸಲಾಗುತ್ತದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಆಲ್‌ ಇಂಡಿಯಾ ರೋಡ್‌ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್‌ ಫೆಡರೇಶನ್‌ (ಎಐಆರ್‌ಟಿಡಬ್ಲ್ಯುಎಫ್‌) ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

’ಇದು ಆನ್‌ಲೈನ್‌ ಕಾಲವಾಗಿರುವುದರಿಂದ ಆ್ಯಪ್ ಅಗತ್ಯ ಹೆಚ್ಚಿದೆ. ತ್ವರಿತವಾಗಿ ಅಥವಾ ಸ್ವಲ್ಪ ತಡವಾಗಿಯಾದರೂ ಆ್ಯಪ್ ಪರಿಚಯಿಸಲಾಗುತ್ತದೆ. ಅದಕ್ಕಾಗಿ ಯೋಜನೆಯನ್ನು ರೂಪಿಸಿದ್ದೇವೆ’ ಎಂದು ತಿಳಿಸಿದರು.

ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ಸಾರಿಗೆ ಇಲಾಖೆ ಯೋಜನೆ ರೂಪಿಸಿದೆ. ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲಾಗುವುದು. ಎಲ್ಲ ಅಸಂಘಟಿತ ಕಾರ್ಮಿಕರು ಈ ಮಂಡಳಿ ವ್ಯಾಪ್ತಿಗೆ ಬರುವುದಿಲ್ಲ. ರಸ್ತೆ ಸಾರಿಗೆ ಕಾರ್ಮಿಕರಿಗಷ್ಟೇ ಇದು ಅನ್ವಯವಾಗಲಿದೆ. ಆಟೊ, ಟ್ಯಾಕ್ಸಿ, ಲಾರಿ ಸಹಿತ ಸಾರ್ವಜನಿಕ ಸಾರಿಗೆಯಲ್ಲಿ ದುಡಿಯುವವರು, ಇವುಗಳ ತಯಾರಿ, ದುರಸ್ತಿ ಕಾರ್ಯಾಗಾರಗಳಲ್ಲಿ ಕೆಲಸ ಮಾಡುವವರ ಕ್ಷೇಮಕ್ಕಾಗಿ ಮಂಡಳಿ ಇರಲಿದೆ ಎಂದು ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರ ಖಾಸಗಿಯವರು ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲು ಸಬ್ಸಿಡಿ ನೀಡುತ್ತದೆ. ಅದೇ ಸಬ್ಸಿಡಿಯನ್ನು ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ ನೀಡಿದರೆ ನಮ್ಮ ಇಲಾಖೆಯೇ ಬಸ್‌ ಖರೀದಿಸುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ‘ಸಾರಿಗೆ ಕಾಯ್ದೆಗೆ’ ತಿದ್ದುಪಡಿ ತರಬೇಕೆಂದು ಒತ್ತಾಯ ಮಾಡುತ್ತೇವೆ. ಈ ವಿಷಯವಾಗಿ ಸಾರಿಗೆ ಸಂಘಟನೆಗಳು ಕೂಡ ಧ್ವನಿ ಎತ್ತಬೇಕು’ ಎಂದು ಮನವಿ ಮಾಡಿದರು.

ಎಐಆರ್‌ಟಿಡಬ್ಲ್ಯುಎಫ್‌ ರಾಜ್ಯ ಸಂಚಾಲಕ ಪ್ರಕಾಶ್‌ ಕೆ. ಮಾತನಾಡಿ, ‘ಮೋಟಾರು ವಾಹನ ರಂಗವನ್ನು ಕಾರ್ಪೋರೇಟೀಕರಣ ಮಾಡುವ, ಸಾರ್ವಜನಿಕ ಸಾರಿಗೆಯನ್ನು ನಾಶ ಮಾಡುವ, ದುಬಾರಿ ದಂಡ, ಶುಲ್ಕ ವಿಧಿಸುವ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ–2019 ಅನ್ನು ಒಕ್ಕೂಟ ಸರ್ಕಾರ ವಾಪಸ್‌ ಪಡೆಯಬೇಕೆಂದು ರಾಜ್ಯ ಸರ್ಕಾರ ನಿರ್ಣಯ ಅಂಗೀಕರಿಸಬೇಕು. ಎಲೆಕ್ಟ್ರಿಕ್‌ ಬಸ್‌ಗಳನ್ನು ನಿಗಮಗಳೇ ಖರೀದಿಸಬೇಕು. ಪೆಟ್ರೋಲ್‌, ಡೀಸೆಲ್‌, ಅನಿಲದ ಮೇಲೆ ವಿಧಿಸುವ ತೆರಿಗೆ ಕಡಿಮೆ ಮಾಡಬೇಕು. ಸಾರಥಿ ಸೂರು ಯೋಜನೆಯನ್ನು ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಕೆಎಸ್‌ಆರ್‌ಟಿಸಿ ನಿಗಮಗಳ ನೌಕರರ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖೆಯ ಉಪ ಆಯುಕ್ತ ಗುರುಪ್ರಸಾದ್, ವಿವಿಧ ಸಂಘಟನೆಗಳ ಪ್ರಮುಖರಾದ ಕುಪ್ಪುಸ್ವಾಮಿ, ‌ಎನ್‌.ವಿ. ಪ್ರಸಾದ್‌, ಚಿದಾನಂದ, ಬಿ.ವಿ. ರಾಘವೇಂದ್ರ, ಎಚ್‌.ಡಿ. ರೇವಪ್ಪ, ಆರ್‌. ಮಂಜುನಾಥ್, ನೀಲಕಂಠಪ್ಪ, ರಘು, ಚೇತನ್‌ ಎಂ.ಆರ್., ಮುರಳಿಕೃಷ್ಣರಾಜು, ಕೆ.ಎಂ. ಸಂತೋಷ್‌ ಕುಮಾರ್‌, ಸಿ.ಎನ್‌. ಶ್ರೀನಿವಾಸ್‌, ರಾಜು ದೇವಾಡಿಗ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT