ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟಿದ ಸರ್ಕಾರಿ ರಂಗಮಂದಿರಗಳು

ಕೋವಿಡ್ ನಿಯಂತ್ರಣದ ನಂತರ ನಗರದಲ್ಲಿ ಗರಿಗೆದರಿದ ಸಾಂಸ್ಕೃತಿಕ ಚಟುವಟಿಕೆ
Last Updated 26 ಜುಲೈ 2022, 21:36 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದಂತೆ ಕಲಾ ಪ್ರಪಂಚ ಚೇತರಿಸಿ ಕೊಳ್ಳಲಾರಂಭಿಸಿದೆ. ಇದರಿಂದಾಗಿ ನಗ ರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿವೆ. ಬೆರಳಣಿಕೆಯಷ್ಟು ಮಾತ್ರ ಸರ್ಕಾರಿ ರಂಗಮಂದಿರಗಳು ಇರುವುದರಿಂದ ದರ ಏರಿಕೆಯ ನಡುವೆ ಯೂ ಬೇಡಿಕೆ ಹೆಚ್ಚಳವಾಗುತ್ತಿದೆ.

2020ರ ಮಾರ್ಚ್‌ ತಿಂಗಳಲ್ಲಿಕೋವಿಡ್ ಕಾಣಿಸಿಕೊಂಡ ಬಳಿಕ ಸೂಕ್ತ ನಿರ್ವಹಣೆ ಇಲ್ಲದೆಯೇ ರಂಗಮಂದಿರಗಳು ಕಳೆಗುಂದಿದ್ದವು. ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿದ್ದರಿಂದ ಕೆಲ ತಿಂಗಳು ರಂಗಮಂದಿರಗಳು ಬಾಗಿಲು ಮುಚ್ಚಬೇಕಾಗಿತ್ತು. ಈಗ ಜನಜೀವನ ಕೋವಿಡ್ ಪೂರ್ವದ ಸ್ಥಿತಿಗೆ ಮರಳುತ್ತಿರುವುದರಿಂದ ಕಲಾ ಚಟುವಟಿಕೆಗಳಿಗೂ ಉತ್ತೇಜನ ಸಿಗಲಾರಂಭಿಸಿದೆ. ಹೀಗಾಗಿ, ವಿವಿಧ ಸಂಘ–ಸಂಸ್ಥೆಗಳು ಈ ಮೊದಲಿನಂತೆ ಕಾರ್ಯಕ್ರಮಗಳನ್ನು ನಡೆಸಲಾರಂಭಿಸಿವೆ. ಖಾಸಗಿ ರಂಗಮಂದಿರಗಳಲ್ಲಿ ಬಾಡಿಗೆ ದುಬಾರಿ ಇರುವುದರಿಂದ ಸರ್ಕಾರಿ ರಂಗ ಮಂದಿರಗಳಿಗೆ ಬೇಡಿಕೆ ಹೆಚ್ಚಳವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರ ಒಳಗೊಂಡಂತೆ ನಗರದ ಏಳು ರಂಗಮಂದಿರಗಳನ್ನು ನಿರ್ವಹಣೆ ಮಾಡುತ್ತಿದೆ. ಇವುಗಳಲ್ಲಿ ಎರಡು ಬಯಲು ರಂಗಮಂದಿರಗಳೂ ಸೇರಿವೆ. 2018ರ ಡಿಸೆಂಬರ್ ತಿಂಗಳಲ್ಲಿ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡಕ್ಕೆ ಒಳಗಾಗಿದ್ದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯ, ಮೂರೂವರೆ ವರ್ಷಗಳ ಬಳಿಕ ಪ್ರದರ್ಶನಗಳಿಗೆ ವೇದಿಕೆ ಒದಗಿಸಿದೆ. ಕಳೆದ ಏಪ್ರಿಲ್‌ ತಿಂಗಳಿಂದ ಅಲ್ಲಿ ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ರವೀಂದ್ರ ಕಲಾಕ್ಷೇತ್ರ, ನಯನ ಸಭಾಂಗಣ ಹಾಗೂ ಸಾಂಸ್ಕೃತಿಕ ಸಮುಚ್ಚಯಕ್ಕೆ ಬೇಡಿಕೆ ಹೆಚ್ಚಿದೆ.

ಚೇತರಿಕೆಯ ಹಾದಿ:ಕೋವಿಡ್ ಪೂರ್ವ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿ ತಿಂಗಳು ಸರಾಸರಿ 30 ಕಾರ್ಯಕ್ರಮಗಳು ನಡೆಯುತ್ತಿದ್ದವು. 2019–20ನೇ ಸಾಲಿನಲ್ಲಿ 385 ಕಾರ್ಯಕ್ರಮಗಳು ನಡೆದಿವೆ. ಬಳಿಕ ಬೆರಳಣಿಕೆ
ಯಷ್ಟು ಕಾರ್ಯಕ್ರಮಗಳು ಮಾತ್ರ ನಡೆದಿದ್ದವು. ಈಗ ರಂಗಮಂದಿರಗಳ ಕಾಯ್ದಿರಿಸುವಿಕೆ ಕೋವಿಡ್ ಪೂರ್ವದ ಸ್ಥಿತಿಗೆ ಮರಳುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರ ಸೇರಿ ಕೆಲ ಖಾಸಗಿ ಸಭಾಂಗಣಗಳ ನವೀಕರಣ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಕನ್ನಡ ಭವನದಲ್ಲಿರುವ ನಯನ ಸಭಾಂಗಣಕ್ಕೂ ಬೇಡಿಕೆ ಹೆಚ್ಚಿದೆ.

ಸರ್ಕಾರಿ ರಂಗಮಂದಿರಗಳಕಾಯ್ದಿರಿಸುವಿಕೆಯಲ್ಲಿ ಪಾರದರ್ಶಕತೆ ತರಲು 2022ರಏ.1ರಿಂದ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸರ್ಕಾರಿ ನಿಯಮಗಳ ಅನುಸಾರ ನಿಗದಿಯಾದ ಕಾರ್ಯಕ್ರಮ ನಿಂತಲ್ಲಿ, ಈಗ ಹಣ ಹಿಂತಿರುಗಿಸುವ ಬದಲು, ಮತ್ತೊಂದು ದಿನಾಂಕ ಆಯ್ಕೆಗೆ ಅವಕಾಶ ನೀಡಲಾಗುತ್ತಿದೆ. ಮೂರು ದಿನಗಳಿಗಿಂತಲೂ ಹೆಚ್ಚಿನ ಅವಧಿಗೆ ಸತತವಾಗಿ ಸಭಾಂಗಣ ಕಾಯ್ದಿರಿಸಲು ಅವಕಾಶವಿಲ್ಲ.

‘ರಂಗಮಂದಿರಗಳನ್ನು ಮುಂಚಿತವಾಗಿ ಕಾಯ್ದಿರಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೆಲವೇ ದಿನಗಳಲ್ಲಿ ಕೋವಿಡ್ ಪೂರ್ವದ ಸ್ಥಿತಿ ತಲುಪಲಿದ್ದೇವೆ. ಸೆಪ್ಟೆಂಬರ್ ಅಂತ್ಯದವರೆಗೂ ವಾರಾಂತ್ಯ ಕಾಯ್ದಿರಿಸಲ್ಪಟ್ಟಿದೆ. ಅಕ್ಟೋಬರ್ ತಿಂಗಳ ಕಾಯ್ದಿರಿಸುವಿಕೆಯನ್ನೂ ಪ್ರಾರಂಭಿಸಲಾಗುವುದು’ ಎಂದು ರವೀಂದ್ರ ಕಲಾಕ್ಷೇತ್ರದ ವ್ಯವಸ್ಥಾಪಕ ಬಿ.ಎಸ್. ಶಿವಪ್ರಕಾಶ್ ಅವರು ತಿಳಿಸಿದರು.

ದುಬಾರಿಯಾದ ಕಲಾ ಕೇಂದ್ರಗಳು

ಕೋವಿಡ್ ಕಾಣಿಸಿಕೊಂಡ ಬಳಿಕ ರಂಗಮಂದಿರಗಳ ದರಗಳಲ್ಲೂ ವ್ಯತ್ಯಾಸವಾಗುತ್ತಿದೆ. ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಕೆಲ ರಂಗಮಂದಿರಗಳ ಬಾಡಿಗೆ ಹೆಚ್ಚಳ ಮಾಡಲಾಗುತ್ತಿದೆ. ಸರ್ಕಾರಿ ರಂಗಮಂದಿರಗಳ ಬಾಡಿಗೆಯೂ ಶೇ10ರಿಂದ ಶೇ 20ರಷ್ಟು ಹೆಚ್ಚಳವಾಗಿದೆ.

ರವೀಂದ್ರ ಕಲಾಕ್ಷೇತ್ರಕ್ಕೆ ಒಂದು ಪಾಳಿಗೆ ₹ 10,900 (ನಾಟಕ ಪ್ರದರ್ಶನಕ್ಕೆ) ಪಾವತಿಸಬೇಕಿದೆ. ಇದರಲ್ಲಿ ₹ 5 ಸಾವಿರ ಠೇವಣಿಯೂ ಸೇರಿದ್ದು, ಕಾರ್ಯಕ್ರಮದ ಬಳಿಕ ಹಿಂದಿರುಗಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₹ 12,080 ಪಾವತಿಸಬೇಕಿದೆ. ಖಾಸಗಿ ರಂಗಮಂದಿರಗಳನ್ನು ಮುಖ್ಯಸ್ಥರು ನವೀಕರಿಸಿ, ದರ ಹೆಚ್ಚಿಸುತ್ತಿದ್ದಾರೆ.

ಡಾ. ಅಂಬೇಡ್ಕರ್ ಭವನ,ಚೌಡಯ್ಯ ಸ್ಮಾರಕ ಭವನ,ಸೇಂಟ್ ಜಾನ್ ಆಡಿಟೋರಿಯಂ,ಕುವೆಂಪು ಕಲಾಕ್ಷೇತ್ರ, ಸರ್ ಪುಟ್ಟಣ್ಣಚೆಟ್ಟಿ ಪುರಭವನ, ಎಚ್‌.ಎನ್. ಕಲಾಕ್ಷೇತ್ರ,ಗುರುನಾನಕ್ ಭವನ ಹಾಗೂ ಎಡಿಎ ರಂಗಮಂದಿರ 500ಕ್ಕೂ ಅಧಿಕ ಆಸನಗಳ ಸಾಮರ್ಥ್ಯ ಹೊಂದಿವೆ. ಇಲ್ಲಿ ಬಾಡಿಗೆ ಒಂದು ಲಕ್ಷ ರೂಪಾಯಿವರೆಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT