ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೆ ಚುನಾವಣೆ ನಡೆಸಲು ಮತ್ತೆ 3 ತಿಂಗಳ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ

Last Updated 30 ನವೆಂಬರ್ 2022, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆಸಲು ಮತ್ತೆ ಮೂರು ತಿಂಗಳ ಕಾಲಾವಕಾಶ ಬೇಕು’ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮನವಿ ಮಾಡಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಹಾಜರಾಗಿ ನ್ಯಾಯಪೀಠಕ್ಕೆ ಈ ಮನವಿ ಸಲ್ಲಿಸಿದರು.

‘ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ನಿರ್ದೇಶನದ ಅನುಸಾರಬಿಬಿಎಂಪಿಯ 243 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿ–ಪರಿಶಿಷ್ಟ ವರ್ಗ (ಎಸ್ಸಿ, ಎಸ್ಟಿ), ಹಿಂದುಳಿದ ವರ್ಗಗಳ ಎ ಮತ್ತು ಬಿ ಗೆ ಮೀಸಲಾತಿ ನಿಗದಿಪಡಿಸುವ ನಿಟ್ಟಿನಲ್ಲಿ ರಾಜಕೀಯ ಮೀಸಲಾತಿಗೆ ಅರ್ಹರಿರುವ ವರ್ಗಗಳ ವಿವರವಾದ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಕೆ.ಭಕ್ತವತ್ಸಲ ನೇತೃತ್ವದ ಆಯೋಗಕ್ಕೆ ಪತ್ರ ಬರೆಯಲಾಗಿದೆ’ ಎಂದರು.

‘ಈ ಪತ್ರವನ್ನು ‌ಪರಿಶೀಲಿಸಿ ಆದಷ್ಟು ಬೇಗ ಪ್ರತಿಕ್ರಿಯಿಸುವುದಾಗಿ ಆಯೋಗ ತಿಳಿಸಿದೆ. ಹೊಸದಾಗಿ ಮೀಸಲಾತಿ ನಿಗದಿಪಡಿಸುವ ಮುನ್ನ ಆಯೋಗದ ನಿಲುವು ಮುಖ್ಯ. ಆದ್ದರಿಂದ, ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು‘ ಎಂದು ಕೋರಿದರು.

ಆಯೋಗದ ಆಕ್ಷೇಪ: ಇದೇ ವೇಳೆ ಕಾಲಾವಕಾಶ ಕೋರಿ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಚುನಾವಣಾ ಆಯೋಗ ಲಿಖಿತ ಆಕ್ಷೇಪಣೆ ಸಲ್ಲಿಸಿದೆ. ‘2022ರ ಡಿಸೆಂಬರ್‌ 31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಈಗಾಗಲೇ ಆದೇಶಿಸಿದೆ. ಹಾಗಾಗಿ, ಮತ್ತೂ‌ ಸಮಯಾವಕಾಶ ಕೋರಿರುವ ಸರ್ಕಾರದ ಈ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ. ಆದ್ದರಿಂದ ಇದನ್ನು ವಜಾಗೊಳಿಸಬೇಕು’ ಎಂದು ಮನವಿ ಮಾಡಿದೆ.

ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ‘ಚುನಾವಣೆ ನಡೆಸಲು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಸಲ್ಲಿಕೆಯಾಗಿದೆ. ಚುನಾವಣೆ ವಿಳಂಬವಾಗುತ್ತಿರುವ ಕುರಿತಂತೆ ಆಯೋಗ ಈಗಾಗಲೇ ಸುಪ್ರಿಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಆ ಅರ್ಜಿ ವಿಚಾರಣೆಗೆ ನಿಗದಿಯಾಗಿಲ್ಲ. ಬಹುಶಃ ಡಿಸೆಂಬರ್ 5ರೊಳಗೆ ವಿಚಾರಣೆ ನಿಗದಿಯಾಗುವ ಸಾಧ್ಯತೆಯಿದೆ‘ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಸುಪ್ರಿಂ ಕೋರ್ಟ್ ವಿಚಾರಣೆ ಏನಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಡಿಸೆಂಬರ್‌ 6ಕ್ಕೆ ಮುಂದೂಡಿತು.

ಸರ್ಕಾರದ ನಿಲುವಿಗೆ ಚುನಾವಣಾ ಆಯೋಗ ಆಕ್ಷೇಪ

‘ಸಮಯ ವಿಸ್ತರಣೆ ಕೋರಿ ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿ ಸಕಾರಣಗಳೇ ಇಲ್ಲ. ಅರ್ಜಿ ಸಂಪೂರ್ಣ ಅಸಮರ್ಥನೀಯ. ಇದು ಚುನಾವಣೆಯನ್ನು ವಿಳಂಬಿಸುವ ಸ್ಪಷ್ಟ ಉದ್ದೇಶ ಹೊಂದಿದೆ’ ಎಂದು ಚುನಾವಣಾ ಆಯೋಗ ಸರ್ಕಾರದ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಸಂಬಂಧ 2022ರ ನವೆಂಬರ್ 24ರಂದು ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಆಯೋಗವು, ‘ಸರ್ಕಾರದ ಇರಾದೆ 2023ರ ಮೇ ನಂತರವೇ ಚುನಾವಣೆ ನಡೆಸಬೇಕೆಂಬ ರೀತಿಯಲ್ಲಿದೆ. ವಿಧಾನಸಭೆ ಚುನಾವಣೆ2023ರ ಮೇ ವೇಳೆಗೆ ನಡೆಯಲಿದೆ. ಒಂದೊಮ್ಮೆ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡರೆ, ಪಾಲಿಕೆಯ ಚುನಾವಣೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಲಿದೆ. ಆಗ ಸಂವಿಧಾನದ 243–3ನೇ ವಿಧಿ ಸ್ಪಷ್ಟವಾಗಿ ಉಲ್ಲಂಘನೆಯಾಗಲಿದೆ‘ ಎಂಬ ಆತಂಕ ವ್ಯಕ್ತಪಡಿಸಿದೆ. ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ನಲ್ಲೇ ಮುಕ್ತಾಯಗೊಂಡಿದೆ. ಮೀಸಲು ಪಟ್ಟಿ ಪ್ರಶ್ನಿಸಲಾದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ‘ಬಿಬಿಎಂಪಿಯ 243 ವಾರ್ಡ್‌ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು‘ ಎಂದು ಸೆಪ್ಟೆಂಬರ್ 30ರಂದು ಆದೇಶಿಸಿತ್ತು.ಈ ಆದೇಶ ಪಾಲನೆಗೆ ಮೂರು ತಿಂಗಳ ಕಾಲ ಅವಧಿ ವಿಸ್ತರಿಸುವಂತೆ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗಷ್ಟೇ ಪ್ರಮಾಣಪತ್ರ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT