ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಖರೀದಿ: ಅನುದಾನ ನೀಡದ ಸರ್ಕಾರ, ಸಂಕಷ್ಟಕ್ಕೆ ಸಿಲುಕಿದ ಪ್ರಕಾಶಕರು

Last Updated 16 ಡಿಸೆಂಬರ್ 2021, 22:03 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಂಥಾಲಯಗಳ ಹೆಸರಿನಲ್ಲಿ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಕರ ಸಂಗ್ರಹಿಸುವ ಸರ್ಕಾರ,ಏಕಗವಾಕ್ಷಿ ಯೋಜನೆಯಡಿ ಖರೀದಿಸಲಾದ 2018ನೇ ಸಾಲಿನ ಪುಸ್ತಕಗಳ ಪೂರ್ಣ ಮೊತ್ತವನ್ನು ಇನ್ನೂ ಪಾವತಿಸಿಲ್ಲ.2019ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಅನುದಾನ ಬಿಡುಗಡೆ ಮಾಡಿಲ್ಲ.ಇದರಿಂದ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ‌ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪ್ರತಿಶೀರ್ಷಿಕೆಯ 300 ಪ್ರತಿಗಳನ್ನು ಇಲಾಖೆಯು ಖರೀದಿಸಲಿದೆ. ಇದಕ್ಕಾಗಿ ಪ್ರತಿವರ್ಷ ₹ 15 ಕೋಟಿ ವೆಚ್ಚ ಮಾಡಲಾಗುತ್ತಿದೆ.

2018ನೇ ಸಾಲಿನ ಪುಸ್ತಕಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡು ವರ್ಷ ಕಳೆದಿದೆ. ಆದರೆ, ಇಲಾಖೆಯು ಅರ್ಧದಷ್ಟು ಹಣ ಮಾತ್ರ ಪಾವತಿಸಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಕಾಶಕರಿಗೆ ₹ 7.88 ಕೋಟಿ ಬಾಕಿ ಉಳಿಸಿಕೊಂಡಿದೆ. 2019ನೇ ಸಾಲಿನ ಪುಸ್ತಕಗಳ ಖರೀದಿಯೂ ಕುಂಟುತ್ತಾ ಸಾಗುತ್ತಿದ್ದು, ಪುಸ್ತಕಗಳ ಖರೀದಿಗೆ ಅಗತ್ಯವಿರುವ ₹ 15 ಕೋಟಿ ಅನುದಾನಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ, ಪುಸ್ತಕ ಮುದ್ರಿಸುವ ಪ್ರಕಾಶಕರುಇದರಿಂದ ಸಮಸ್ಯೆಗೆ ಒಳಗಾಗಿದ್ದಾರೆ.

ಪ್ರಕ್ರಿಯೆ ವಿಳಂಬದಿಂದ ಸಮಸ್ಯೆ: ‘ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಈ ವರ್ಷ ಇನ್ನೂ ಬಜೆಟ್ ರೂಪಿಸಿಲ್ಲ. ಎರಡು ವರ್ಷಗಳಿಂದ ಖರೀದಿಯ ಪ್ರಕ್ರಿಯೆಗಳು ವಿಳಂಬ ಆಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಹಾಕಿದ ಬಂಡವಾಳ ವರ್ಷಗಳ ಬಳಿಕ ಆದಾಯವಾಗಿ ಮರಳಿ ಬಂದರೆ ಪುಣ್ಯಎಂಬ ವಾತಾವರಣವಿದೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಖರೀದಿಯನ್ನೇ ಅವಲಂಬಿಸಿದ್ದಾರೆ. ಈ ರೀತಿ ಹಣವನ್ನು ಬಾಕಿ ಉಳಿಸಿಕೊಂಡಲ್ಲಿ ಪುಸ್ತಕೋದ್ಯಮ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ಬೇಸರ ವ್ಯಕ್ತಪಡಿಸಿದರು.

‘ಏಕಗವಾಕ್ಷಿ ಯೋಜನೆಯಡಿ ನಡೆಯುತ್ತಿರುವ ಪುಸ್ತಕಗಳ ಖರೀದಿಯು ನಾಲ್ಕು ವರ್ಷಗಳಷ್ಟು ಹಿಂದೆ ಉಳಿದಿದೆ. ಇದರಿಂದಾಗಿಯೇ ಹೊಸ ಪ್ರಕಟಣೆಗಳು ಗ್ರಂಥಾಲಯಗಳಲ್ಲಿ ಓದುಗರ ಕೈಸೇರುತ್ತಿಲ್ಲ. ಸಾಹಿತ್ಯದ ಬೆಳವಣಿಗೆಗೂ ಸರ್ಕಾರದ ಈ ನಡೆ ತೊಡಕಾಗಿದೆ. ಖರೀದಿಸಿದ ಪುಸ್ತಕಗಳ ಹಣ ಪಾವತಿಸದಿರುವುದರಿಂದ ಸಣ್ಣ ಪ್ರಕಾಶನ ಸಂಸ್ಥೆಗಳು ಹಾಗೂ ಲೇಖಕ ಪ್ರಕಾಶಕರು ಸಮಸ್ಯೆ ಎದುರಿಸಲಿದ್ದಾರೆ. ಈಗಾಗಲೇ ಕೋವಿಡ್‌ ಪುಸ್ತಕೋದ್ಯಮಕ್ಕೂ ದೊಡ್ಡ ಹೊಡೆತ ನೀಡಿದೆ’ ಎಂದು ನವಕರ್ನಾಟಕ ಪ್ರಕಾಶನದವ್ಯವಸ್ಥಾಪಕ ರಮೇಶ್‌ ಉಡುಪ ತಿಳಿಸಿದರು.

ನಾಲ್ಕು ವರ್ಷ ಹಿಂದೆ
ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಸಗಟು ಖರೀದಿಗೆ ಪ್ರತಿ ವರ್ಷ ಪುಸ್ತಕಗಳನ್ನು ಆಹ್ವಾನಿಸಿ, ಆಯ್ಕೆ ಮಾಡಲಾಗುತ್ತದೆ. ಸಾಹಿತಿಗಳು, ಪ್ರಕಾಶಕರು ಒಳಗೊಂಡಂತೆ ಪುಸ್ತಕೋದ್ಯಮದ ಪ್ರಮುಖರನ್ನು ಒಳಗೊಂಡ ಸಮಿತಿಯು ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತದೆ. 2018ನೇ ಸಾಲಿನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು, ಇಲಾಖೆ ಖರೀದಿಸಿದ್ದರೂ ಪುಸ್ತಕಗಳು ರಾಜ್ಯದ ಗ್ರಂಥಾಲಯಗಳಿಗೆ ಇನ್ನೂ ತಲುಪಿಲ್ಲ. ಇದರಿಂದಾಗಿ ಪುಸ್ತಕ ಖರೀದಿಯಲ್ಲಿ ಇಲಾಖೆಯು ನಾಲ್ಕು ವರ್ಷಗಳು ಹಿಂದೆ ಬಿದ್ದಂತಾಗಿದೆ.

‘ಈಗ ಮುದ್ರಣ ವೆಚ್ಚ ಶೇ 20 ರಷ್ಟು ಹೆಚ್ಚಾಗಿದೆ.ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೂಡ ಶೇ 12ರಿಂದ 18ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಪ್ರಕಾಶಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ನಾವು ವಿಶೇಷ ಸೌಲಭ್ಯ, ನೆರವನ್ನು ಕೇಳುತ್ತಿಲ್ಲ. ಈಗಾಗಲೇ ಇರುವ ಯೋಜನೆಯಡಿ ಪುಸ್ತಕಗಳ ಖರೀದಿಸಿಗೆ ನಿಯಮಿತವಾಗಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಸೃಷ್ಟಿ ಪ್ರಕಾಶನದ ಸೃಷ್ಟಿ ನಾಗೇಶ್ ಆಗ್ರಹಿಸಿದರು.

***

ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಬಿಡುಗಡೆಯಾಗುವ ವಿಶ್ವಾಸವಿದೆ.
-ಸತೀಶ್ ಕುಮಾರ್ ಹೊಸಮನಿ,ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT