ಜಿಪಿಎಸ್, ತುರ್ತುಗಾಬರಿ ಗುಂಡಿ ಅಳವಡಿಕೆ ವ್ಯವಸ್ಥೆಗೆ ಸಚಿವ ಡಿ.ಸಿ ತಮ್ಮಣ್ಣ ಚಾಲನೆ

7

ಜಿಪಿಎಸ್, ತುರ್ತುಗಾಬರಿ ಗುಂಡಿ ಅಳವಡಿಕೆ ವ್ಯವಸ್ಥೆಗೆ ಸಚಿವ ಡಿ.ಸಿ ತಮ್ಮಣ್ಣ ಚಾಲನೆ

Published:
Updated:

ಬೆಂಗಳೂರು: ಜಿಪಿಎಸ್ ವ್ಯವಸ್ಥೆ (ವಾಹನ ಸಂಚಾರದ ಮೇಲೆ ನಿಗಾ ವಹಿಸುವ ಸಾಧನ –ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ – ವಿಎಲ್‌ಟಿಡಿ) ಹಾಗೂ ಪ್ಯಾನಿಕ್‌ ಬಟನ್‌ ಅಳವಡಿಕೆಯನ್ನು ಮುಂದೆ ಹಳೆಯ ವಾಹನಗಳಿಗೂ ಕಡ್ಡಾಯಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದರು.

ಸಾರ್ವಜನಿಕ ಪ್ರಯಾಣಿಕ ವಾಹನಗಳಲ್ಲಿ ವಿಎಲ್‌ಟಿಡಿ ಹಾಗೂ ಪ್ಯಾನಿಕ್‌ ಬಟನ್‌ ಅಳವಡಿಕೆ ವ್ಯವಸ್ಥೆಗೆ ಯಶವಂತಪುರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಆವರಣದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿ, ‘ಸದ್ಯ ಜ. 1ರಿಂದ ನೋಂದಣಿಯಾಗುವ ಟ್ಯಾಕ್ಸಿ ಹಾಗೂ ವಾಣಿಜ್ಯ ವಾಹನಗಳಿಗೆ (ಬಸ್‌, ಟ್ರಕ್‌) ಈ ಸಾಧನ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಳೆಯ ವಾಣಿಜ್ಯ ವಾಹನಗಳಿಗೆ ಅಳವಡಿಸುವ ನಿರ್ಧಾರವನ್ನು ರಾಜ್ಯಗಳು ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೊಂದು ಒಳ್ಳೆಯ ಕ್ರಮ. ಹಾಗಾಗಿ ಮುಂದೆ ಹಳೆಯ ವಾಹನಗಳಿಗೂ ವಿಸ್ತರಿಸುವ ಚಿಂತನೆ ಇದೆ’ ಎಂದರು.

‘ಮಿತಿಮೀರಿದ ಭಾರ ಹೇರಿಕೊಂಡು ಸಂಚರಿಸುವ ಲಾರಿಗಳ ಮೇಲೆ ನಿಗಾವಹಿಸಲು ಇಂಥದ್ದೇ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಹಕಾರಿ ಆಗಲಿದೆ’ ಎಂದು ಅವರು ಹೇಳಿದರು.

‘ಜಿಪಿಎಸ್ ಹಾಗೂ ಪ್ಯಾನಿಕ್‌ ಬಟನ್‌ ವ್ಯವಸ್ಥೆಯ ನಿಯಂತ್ರಣ ಕೇಂದ್ರ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ಇರಲಿದೆ. ಮುಂದೆ ಇದನ್ನು ಸಂಚಾರ ಪೊಲೀಸ್ ಠಾಣೆಗಳ ಜೊತೆಗೆ ಸಂಪರ್ಕ ಕಲ್ಪಿಸಲಾಗುವುದು. ಈ ವಾಹನ ಅಥವಾ ಪ್ರಯಾಣಿಕರು ತೊಂದರೆಗೆ ಒಳಗಾದಾಗ ಪ್ಯಾನಿಕ್ ಬಟನ್ ಒತ್ತಿದಾಗ ಸಮೀಪದ ಪೊಲೀಸ್ ಠಾಣೆಗೂ ಮಾಹಿತಿ ರವಾನೆಯಾಗಲಿದೆ’ ಎಂದರು.

ಪ್ಯಾನಿಕ್‌ ಬಟನ್‌ ಎಲ್ಲಿದೆ?: ಟ್ಯಾಕ್ಸಿಗಳಲ್ಲಿ ಚಾಲಕನ ಹಿಂಭಾಗದಲ್ಲಿ ಈ ಬಟನ್‌ ಅಳವಡಿಸಲಾಗುತ್ತದೆ. ಪ್ರಯಾಣಿಕರು ತೊಂದರೆಗೊಳಗಾದಲ್ಲಿ ಅಥವಾ ಚಾಲಕ– ಪ್ರಯಾಣಿಕರ ಮಧ್ಯೆ ತಕರಾರುಗಳಾದಲ್ಲಿ ಪ್ರಯಾಣಿಕರು ಇದನ್ನು ಒತ್ತಬಹುದು. ಬಸ್‌ಗಳಲ್ಲೂ ಕೈಗೆಟಕುವಂತೆ ಈ ಸ್ವಿಚ್‌ನ್ನು ಅಳವಡಿಸಲಾಗುತ್ತದೆ. 

ದೇಶದಲ್ಲಿ ಇಂತಹ ಸಾಧನಗಳನ್ನು 25 ಕಂಪನಿಗಳು ಉತ್ಪಾದಿಸುತ್ತಿವೆ. ಬೆಲೆ ₹ 10 ಸಾವಿರದಿಂದ 12 ಸಾವಿರದವರೆಗೆ ಇರಲಿದೆ. ವಾಹನ ಮಾಲೀಕರಿಗೆ ಹೊರೆಯಾಗದ ರೀತಿಯಲ್ಲಿ ಇದರ ಬೆಲೆಯನ್ನು ಪರಿಷ್ಕರಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಬಸ್‌ ‍ಪ್ರಯಾಣ ದರ ಏರಿಕೆ ಇಲ್ಲ’

‘ಡೀಸೆಲ್‌ ದರ ವಿಪರೀತ ಏರಿದಾಗ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಸಲು ಚಿಂತನೆ ಮಾಡಿದ್ದೆವು. ಈಗ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ದರ ಏರಿಕೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇಂಧನ ಬೆಲೆ ಇನ್ನೂ ಕಡಿಮೆಯಾದರೆ ದರ ಏರಿಕೆ ಪ್ರಶ್ನೆಯೇ ಬರುವುದಿಲ್ಲ’ ಎಂದು ಸಚಿವ ತಮ್ಮಣ್ಣ ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !