ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳಿನ ಕಾಯಿಲೆ: ಮುನ್ಸೂಚನೆಯ ಜಿಪಿಯು

ತರ್ಕಬದ್ಧ ಅರ್ಥೈಸುವಿಕೆ, ದತ್ತಾಂಶ ವಿಶ್ಲೇಷಣೆಗೆ ಮೆಷಿನ್‌ ಲರ್ನಿಂಗ್ ಅಲ್ಗಾರಿದಮ್‌
Last Updated 29 ಜೂನ್ 2022, 21:20 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಗೆ ವಯಸ್ಸಾದಂತೆ ಆತನ ಮಿದುಳೂ ಸುಕ್ಕುಗಟ್ಟಿ, ಮುದುಡುತ್ತಾ ಹೋಗುತ್ತದೆ. ಮಿದುಳಿನ ನರಗಳ ಜಾಲ ವ್ಯವಸ್ಥೆಯೂ ಶಿಥಿಲಗೊಳ್ಳುತ್ತವೆ. ಇದರ ಪರಿಣಾಮ ಅಲ್ಜಮೇರ್‌, ಪಾರ್ಕಿನ್ಸನ್‌ ಸೇರಿದಂತೆ ಹಲವು ಬಗೆಯ ಮಿದುಳು ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು. ಈ ಕಾಯಿಲೆಗೆ ತುತ್ತಾಗುವುದನ್ನು ಮೊದಲೇ ತಿಳಿದುಕೊಳ್ಳಲು ಸಾಧ್ಯವೇ?

ಇಂತಹ ಕಾಯಿಲೆಗಳಿಂದ ಬಾಧಿತ ರಾಗಿರುವ ಕುಟುಂಬಗಳ ಸದಸ್ಯರಲ್ಲಿ ಈ ಪ್ರಶ್ನೆ ಕಾಡುವುದು ಸಹಜ. ಏಕೆಂದರೆ ಈ ಕಾಯಿಲೆಗಳಿಗೆ ತುತ್ತಾದವರ ಬದುಕೂ ಅತ್ಯಂತ ಯಾತನಾಮಯವಾಗಿರುತ್ತವೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ)ಸೆಂಟರ್‌ ಫಾರ್‌ ನ್ಯೂರೋ ಸೈನ್ಸ್‌ ವಿಭಾಗದ ಸಂಶೋಧಕರು ಹೊಸದಾಗಿ ಅಭಿವೃದ್ಧಿಪಡಿಸಿರುವ ಜಿಪಿಯು (ಗ್ರಾಫಿಕ್‌ ಪ್ರೊಸೆಸಿಂಗ್‌ ಯುನಿಟ್‌) ಆಧಾರಿತ ‘ಮೆಷಿನ್‌ ಲರ್ನಿಂಗ್ ಅಲ್ಗಾರಿದಮ್‌’ ಈ ನಿಟ್ಟಿನಲ್ಲಿ ಆಶಾ ಕಿರಣವಾಗಿದೆ.

ಇದರಿಂದ ವಿಜ್ಞಾನಿಗಳು ಮಿದುಳಿನ ವಿವಿಧ ಭಾಗಗಳ ನಡುವಿನ ಸಂಪರ್ಕಗಳನ್ನು ಹೆಚ್ಚು ತರ್ಕಬದ್ಧವಾಗಿ ಅರ್ಥೈಸಿಕೊಳ್ಳುವುದರ ಜತೆ ಮುಂದೇನಾಗಬಹುದು ಎಂಬುದನ್ನು ಊಹಿಸಲೂ ಅಥವಾ ಭವಿಷ್ಯವನ್ನು ನುಡಿಯಲು ಸಾಧ್ಯವಾಗು
ತ್ತದೆ. ಈ ಅಧ್ಯಯನ ‘ನೇಚರ್‌ ಕಂಪ್ಯೂಟೇಷನಲ್‌ ಸೈನ್ಸ್‌ ಜರ್ನಲ್‌’ನಲ್ಲಿ ಪ್ರಕಟವಾಗಿದೆ.

ಮಿದುಳಿನಲ್ಲಿ ಪ್ರತಿ ಸೆಕೆಂಡಿಗೆ ಕೋಟಿಗಟ್ಟಲೆ ನರಕೋಶಗಳು ಮಿಂಚಿನಂತೆ ಬೆಳಕನ್ನು ಹೊಮ್ಮಿಸುತ್ತವೆ. ಇದರಿಂದಾಗಿಯೇ ನರಕೋಶಗಳಲ್ಲಿ ವಿದ್ಯುತ್‌ ಸಂಚಲನವಾಗುತ್ತದೆ. ಮಿದುಳಿನ ಒಂದು ತುದಿಯಿಂದ ಮತ್ತೊಂದು ತುದಿಗೆ ನಿರಂತರವಾಗಿ ವಿದ್ಯುತ್‌ ಪ್ರವಾಹ ಸಾಗುತ್ತಲೇ ಇರಬೇಕು. ‘ಆಕ್ಸಾನ್‌’ ಎಂದು ಕರೆಯಲಾಗುವ ಸಂಪರ್ಕದ ಕೇಬಲ್‌ಗಳ ಮೂಲಕವೇ ವಿದ್ಯುತ್‌ ಪ್ರವಹಿಸುತ್ತದೆ. ಮಿದುಳಿನ ಕಾರ್ಯನಿರ್ವಹಣೆಯ ಲೆಕ್ಕ (ಕಂಪ್ಯುಟೇಷನ್‌) ಹಾಕಲು ಈ ಸಂಪರ್ಕ ಅತ್ಯಗತ್ಯ. ಮಿದುಳಿನ ವರ್ತನೆಯನ್ನು ಅನಾವರಣಗೊಳಿಸಲು, ಅರ್ಥೈಸಲು ಈ ಲೆಕ್ಕಾಚಾರ ಅಗತ್ಯ ಎನ್ನುತ್ತಾರೆ ಸೆಂಟರ್‌ ಫಾರ್‌ ನ್ಯೂರೋಸೈನ್ಸ್‌ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿನಿ ವರ್ಷಾ ಶ್ರೀನಿವಾಸನ್‌.

‘ಕನೆಕ್ಟೋಮ್‌’ ಅಂದರೆ, ಮಿದುಳಿನಲ್ಲಿ ನರಗಳ ಸಂಪರ್ಕ ಜಾಲದ ವಿಸ್ತೃತ ನಕಾಶೆ ಅಥವಾ ವೈರಿಂಗ್‌ ಚಿತ್ರ ಎನ್ನಬಹುದು. ಪ್ರತಿಯೊಂದು ನರವೂ ಪರಸ್ಪರ ಸಂವಹನ ನಡೆಸುತ್ತವೆ.ಕನೆಕ್ಟೋಮ್‌ ಬಳಸಿ ಅಲ್ಜಮೇರ್‌ ರೋಗಿಯ ವರ್ತನೆ ಸ್ಪಷ್ಟವಾಗಿ ಗೋಚರಿಸುವುದಕ್ಕೂ ಮೊದಲೇ ಮಿದುಳಿನ ನರವ್ಯೂಹ ಕ್ಷೀಣಿಸುವುದು ಅಥವಾ ಮುದುಡುವುದರ ಲಕ್ಷಣಗಳನ್ನು ಗುರುತಿಸಬಹುದು ಎಂದು ಸೆಂಟರ್‌ ಫಾರ್ ನ್ಯೂರೋಸೈನ್ಸ್‌ನ ಸಹಾಯಕ ಪ್ರಾಧ್ಯಾಪಕ ದೇವರಾಜನ್‌ ಶ್ರೀಧರನ್‌ ಹೇಳಿದ್ದಾರೆ.

ಸಂಸ್ಥೆಯು ಅಭಿವೃದ್ಧಿಪಡಿಸಿರುವ ಅಲ್ಗಾರಿದಮ್‌ ವ್ಯವಸ್ಥೆಯು (ರೆಗ್ಯುಲರೈಸ್ಡ್‌, ಆಕ್ಸಲರೇಟೆಡ್‌, ಲೀನಿಯರ್‌ ಫಾಸಿಕಲ್‌ ಇವಾಲ್ಯು ವೇಷನ್‌ ಅಥವಾ ರಿಯಲ್‌ ಲೈಫ್‌ ) ಡಿಫ್ಯೂಷನ್‌ ಮ್ಯಾಗ್ನೆಟಿಕ್ ರೆಸೊನಾನ್ಸ್‌ ಇಮೇಜಿಂಗ್‌ನಿಂದ (ಡಿ ಎಂಆರ್‌ಐ) ಮಾನವ ಮಿದುಳನ್ನು ಸ್ಕ್ಯಾನ್‌ ಮಾಡಿ ಸೃಷ್ಟಿಸುವ ಅಗಾಧ ಪ್ರಮಾಣದ ದತ್ತಾಂಶವನ್ನು ಅತಿ ವೇಗದಲ್ಲಿ ವಿಶೇಷಣೆ ಮಾಡುತ್ತದೆ. ಈಗ ಚಾಲ್ತಿಯಲ್ಲಿರುವಅಲ್ಗಾರಿದಮ್‌ಗಿಂತ 150 ಪಟ್ಟು ವೇಗದಲ್ಲಿ ದತ್ತಾಂಶವನ್ನು ಮೌಲ್ಯ ಮಾಪನ ಮಾಡುವ ಸಾಮರ್ಥ್ಯ ಹೊಂದಿದೆ.

ಅಷ್ಟೇ ಅಲ್ಲ ಹಳೇ ವ್ಯವಸ್ಥೆಯಲ್ಲಿ ದತ್ತಾಂಶವನ್ನು ವಿಶ್ಲೇಷಿಸಿ ಮಾಹಿತಿ ಸಂಗ್ರಹಿಸಲು ಹಲವು ಗಂಟೆ ಅಥವಾ ಒಂದು ದಿನವೇ ಬೇಕಾಗುತ್ತಿತ್ತು. ಆ ಕೆಲಸವನ್ನು ಒಂದು ಸೆಕೆಂಡಿನಲ್ಲಿ ಮಾಡಬಹುದಾಗಿದೆ ಎಂದು ದೇವರಾಜನ್‌ ಶ್ರೀಧರನ್‌ ಹೇಳಿದ್ದಾರೆ.

ಎಂಆರ್‌ಐನಲ್ಲಿ ಕ್ರಾಂತಿಕಾರಿ ಅಲ್ಗಾರಿದಮ್‌ ಅಭಿವೃದ್ಧಿ

ಮಿದುಳಿನ ವರ್ತನೆಯಿಂದ ಮೊದಲೇ ಕಾಯಿಲೆ ಪತ್ತೆ

200 ವ್ಯಕ್ತಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT