ಮಂಗಳವಾರ, ಜನವರಿ 19, 2021
18 °C
ಗ್ರಾಮ ಪಂಚಾಯಿತಿಗಳನ್ನು ಪಾಲಿಕೆಗೆ ಸೇರಿಸಲು ಅವಕಾಶ

ಬಿಬಿಎಂಪಿ ಕಾಯ್ದೆ ಜಾರಿ: ಪಂಚಾಯಿತಿ ನೂತನ ಸದಸ್ಯರ ಅಧಿಕಾರ ತೂಗುಯ್ಯಾಲೆಯಲ್ಲಿ!

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ಕಾಯ್ದೆ–2020‘ ಸೋಮವಾರದಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಬಿಬಿಎಂಪಿ ಆಸುಪಾಸಿನ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸುವ ಅಂಶವೂ ಈ ಕಾಯ್ದೆಯಲ್ಲಿದೆ. ಈ ಕಾಯ್ದೆ ಪ್ರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡರೆ, ಅಲ್ಲಿನ ಗ್ರಾಮ ಪಂಚಾಯಿತಿಯ ನೂತನ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರ ತೂಗುಯ್ಯಾಲೆಯಲ್ಲಿ ಸಿಲುಕಲಿದೆ. 

ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್‌ 365 ಪಂಚಾಯಿತಿ ಪ್ರದೇಶಗಳನ್ನು ಪಾಲಿಕೆಗೆ ಸೇರ್ಪಡೆಗೊಳಿಸುವ ಬಗ್ಗೆ ವಿವರಿಸುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ 1993ರನ್ವಯ ಆಡಳಿತ ವ್ಯವಸ್ಥೆ ಹೊಂದಿರುವ ಪ್ರದೇಶಗಳನ್ನು ಸರ್ಕಾರವು ಬಿಬಿಎಂಪಿ ಕಾಯ್ದೆಯ ಸೆಕ್ಷನ್ 4ಎ ಉಪವಿಧಿ 1ರ ಅಧಿಸೂಚನೆ ಹೊರಡಿಸುವ ಮೂಲಕ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬಹುದು.

ನಿರ್ದಿಷ್ಟ ಗ್ರಾಮಗಳನ್ನು ಬಿಬಿಎಂಪಿಗೆ ಸೇರ್ಪಡೆಗೊಳಿಸಲು ಸರ್ಕಾರ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಡಳಿತ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆ ಗ್ರಾಮಗಳಿಗೆ ಸಂಬಂಧಪಟ್ಟಂತೆ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳು ಯಾವುದೇ ಆಧಿಕಾರ ಹೊಂದಿರುವುದಿಲ್ಲ. ಆದರೆ, ಬಿಬಿಎಂಪಿ ಕಾಯ್ದೆ ಪ್ರಕಾರ ಪಾಲಿಕೆಯ ಕೌನ್ಸಿಲ್‌ ಪುನರ್‌ ರಚನೆಗೊಳ್ಳುವವರೆಗೆ ಸರ್ಕಾರದಿಂದ ನೇಮಕಗೊಂಡ ಸ್ಥಳೀಯ ನಿವಾಸಿಗಳು ಬಿಬಿಎಂಪಿಯ ಹೆಚ್ಚುವರಿ ಕಾರ್ಪೊರೇಟರ್‌ಗಳಾಗಲಿದ್ದಾರೆ ಎನ್ನುತ್ತದೆ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 365 (ಕೆ).

‘ಸರ್ಕಾರ ಗ್ರಾಮ ಪಂಚಾಯಿತಿಗಳನ್ನು ಬಿಬಿಎಂಪಿಗೆ ಸೇರಿಸಲು ಅಧಿಸೂಚನೆ ಹೊರಡಿಸಿ, ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ, ಬಿಬಿಎಂಪಿ ಕಾಯ್ದೆಯನ್ವಯ ಚುನಾವಣೆ ನಡೆಸುವವರೆಗೆ ಸೇರ್ಪಡೆಗೊಂಡ ಪ್ರದೇಶದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 365 (ಕೆ) ಪ್ರಕಾರ ಅಧಿಕಾರ ಹೊಂದಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಬಿಬಿಎಂಪಿ ಕಾಯ್ದೆಯನ್ವಯ ಬಿಬಿಎಂಪಿ ಒಟ್ಟು ಸದಸ್ಯರ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಲು ಸರ್ಕಾರ ನಿರ್ಧರಿಸಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ಬಿಬಿಎಂಪಿ ಚುನಾವಣೆಯು ಹೈಕೋರ್ಟ್‌ ಆದೇಶದ ಪ್ರಕಾರ 198 ವಾರ್ಡ್‌ಗಳಿಗೆ ಸೀಮಿತವಾಗಿ ನಡೆಯುತ್ತದೆಯೋ ಇಲ್ಲವೋ ಎಂಬುದು ಸುಪ್ರೀಂ ಕೋರ್ಟ್‌ ತೀರ್ಪನ್ನು ಅವಲಂಬಿಸಿದೆ.

‘ಒಂದು ವೇಳೆ ಬಿಬಿಎಂಪಿ ಚುನಾವಣೆಯನ್ನು 198 ವಾರ್ಡ್‌ಗಳಿಗೆ ಸೀಮಿತವಾಗಿ ನಡೆಸುವ ಪರಿಸ್ಥಿತಿ ನಿರ್ಮಾಣವಾದರೂ ಬಿಬಿಎಂಪಿ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಪ್ರದೇಶಗಳನ್ನು ಸೇರ್ಪಡೆಗೊಳಿಸುವುದಕ್ಕೆ ಅಡ್ಡಿ ಇಲ್ಲ. ಏಕೆಂದರೆ ಬಿಬಿಎಂಪಿ ಕಾಯ್ದೆಯನ್ನು ಹೈಕೋರ್ಟ್‌ ಕೂಡಾ ಒಪ್ಪಿದೆ. ಹಾಗಾಗಿ 198 ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆದರೆ ಹೊಸತಾಗಿ ಸೇರುವ ಪ್ರದೇಶದ ಗ್ರಾಮ ಪಂಚಾಯಿತಿ, ತಾಲ್ಲೂಕು ಅಥವಾ ಜಿಲ್ಲಾ ಪಂಚಾಯಿತಿ ಸದಸ್ಯರು ಹೆಚ್ಚುವರಿ ಕಾರ್ಪೊರೇಟರ್‌ಗಳಾಗಿ ಬಿಬಿಎಂಪಿಯಲ್ಲಿ ಮುಂದುವರಿಯಬಹುದು. ಆದರೆ, ಹೊಸ ಬಿಬಿಎಂಪಿ ಕಾಯ್ದೆ ಪ್ರಕಾರ 243 ವಾರ್ಡ್‌ಗಳಿಗೆ ಚುನಾವಣೆ ನಡೆದು ಪಾಲಿಕೆ ಕೌನ್ಸಿಲ್‌ ರಚನೆಗೊಂಡರೆ ಅವರೆಲ್ಲ ಅಧಿಕಾರ ಕಳೆದುಕೊಳ್ಳಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಿಕ್ಕಟ್ಟು ಶಮನ– ಸರ್ಕಾರಕ್ಕೆ ಅಧಿಕಾರ

ಬಿಬಿಎಂಪಿ ತೆಕ್ಕೆಗೆ ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಬಿಕ್ಕಟ್ಟು ಎದುರಾದರೆ ಸರ್ಕಾರವು ಅಧಿಸೂಚನೆ ಹೊರಡಿಸುವ ಮೂಲಕ ಅದನ್ನು ಬಗೆಹರಿಸಲು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 366 ಅವಕಾಶ ಕಲ್ಪಿಸುತ್ತದೆ.

ಗ್ರಾಮಗಳ ಸೇರ್ಪಡೆ–ಮಾರ್ಪಾಡುಗಳೇನು?

l ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಗೊಳ್ಳುವ ಗ್ರಾಮ ಪಂಚಾಯಿತಿಗಳಲ್ಲಿ ವೆಚ್ಚವಾಗದೆ ಉಳಿದಿರುವ ಎಲ್ಲ ಅನುದಾನ ಹಾಗೂ ಆಸ್ತಿ ತೆರಿಗೆ, ಸಂಗ್ರಹವಾಗಬೇಕಾದ ಶುಲ್ಕ, ಬಾಕಿ ಇರುವ ಆಸ್ತಿ ತೆರಿಗೆಗಳು ಹಾಗೂ ಎಲ್ಲ ಸ್ವತ್ತುಗಳು ಬಿಬಿಎಂಪಿ ತೆಕ್ಕೆಗೆ ಸೇರುತ್ತವೆ. ಅವುಗಳನ್ನು ವಸೂಲಿ ಮಾಡುವ ಅಧಿಕಾರವೂ ಪಾಲಿಕೆಯದ್ದಾಗಲಿದೆ.

l ಪಂಚಾಯಿತಿ ವ್ಯಾಪ್ತಿಯ ಪ್ರದೇಶದಲ್ಲಿ ತೆರಿಗೆ ಅಥವಾ ಶುಲ್ಕಗಳ ವಸೂಲಿ ಬಾಕಿ ಇದ್ದರೆ, ಅದನ್ನು ಬಿಬಿಎಂಪಿ ಕಾಯ್ದೆ ಪ್ರಕಾರ ಲೆಕ್ಕ ಹಾಕುವಂತಿಲ್ಲ. 

l ಪಂಚಾಯತ್‌ ರಾಜ್‌ ಕಾಯ್ದೆಯಡಿ ಮಾಡಲಾದ ನೇಮಕಾತಿಗಳು, ಹೊರಡಿಸಲಾದ ಅಧಿಸೂಚನೆಗಳು, ನೋಟಿಸ್‌ಗಳು, ಆದೇಶಗಳು, ರೂಪಿಸಲಾದ ಯೋಜನೆಗಳು, ನೀಡಲಾದ ಅನುಮತಿಗಳು ಮತ್ತು ಪರವಾನಗಿಗಳು, ರಚಿಸಲಾದ ನಿಯಮಗಳು, ಉಪವಿಧಿಗಳು ಬಿಬಿಎಂಪಿ ಕಾಯ್ದೆಯಡಿ ರದ್ದುಗೊಳ್ಳುವವರೆಗೆ ಅಥವಾ ಮಾರ್ಪಾಡು ಮಾಡುವವರೆಗೆ ಮುಂದುವರಿಯುತ್ತವೆ.

l ಪಂಚಾಯತ್‌ ರಾಜ್‌ ಕಾಯ್ದೆ ಅಡಿ ಮಾಡುವ ಬಜೆಟ್‌ ಅಂದಾಜು, ನಡೆಸುವ ಮೌಲ್ಯಮಾಪನ, ಅಳತೆ ಮುಂತಾ
ದುವುಗಳನ್ನು ಬಿಬಿಎಂಪಿ ಕಾಯ್ದೆ ಅನ್ವಯ ನಡೆಸಲಾಗುತ್ತದೆ. ಹೊಣೆಗಾರಿಕೆಗಳನ್ನು ಹಾಗೂ ಸಾಲಗಳನ್ನು ತೀರಿಸುವ ಜವಾಬ್ದಾರಿ ಬಿಬಿಎಂಪಿಯದ್ದಾಗುತ್ತದೆ. 

l ಪಂಚಾಯಿತಿಗಳಲ್ಲಿ ಜಾರಿಗೆ ಬಾಕಿ ಇರುವ ನಿರ್ಣಯಗಳ ಅನುಷ್ಠಾನದ ಹೊಣೆಯೂ ಬಿಬಿಎಂಪಿಗೆ ವರ್ಗಾವಣೆಯಾಗುತ್ತದೆ. ಪಂಚಾಯಿತಿಗಳಿಗೆ ಸಂಬಂಧಪಟ್ಟ ಮೇಲ್ಮನವಿಗಳು ಯಾವುದಾದರೂ ಪ್ರಾಧಿಕಾರದ ಮುಂದೆ ಇತ್ಯರ್ಥಕ್ಕೆ ಬಾಕಿ ಇದ್ದಲ್ಲಿ, ಅವುಗಳನ್ನು ಮುಂದುವರಿಸಬಹುದು. ಆದರೆ, ಅವುಗಳು ಕಾರ್ಯಗತಗೊಳಿಸುವಂತಿರಬೇಕು. ಪಂಚಾಯಿತಿಗೆ ಅಥವಾ ಅದರ ಸಿಬ್ಬಂದಿಗೆ ಸಂಬಂಧಿಸಿದ ವ್ಯಾಜ್ಯಗಳು ಇತ್ಯರ್ಥಕ್ಕೆ ಬಾಕಿ ಇದ್ದರೆ, ಅವು ಬಿಬಿಎಂಪಿಗೆ ಸಂಬಂಧಿಸಿದ್ದೆಂದು ಪರಿಭಾವಿಸಿ ಮುಂದುವರಿಸಬಹುದು.

ಅಧಿಕಾರಿಗಳನ್ನು ಕೈಬಿಡುವ ಅಧಿಕಾರ ಬಿಬಿಎಂಪಿಗೆ

ಈ ಗ್ರಾಮಗಳಲ್ಲಿ ಪಂಚಾಯಿತಿ ರಾಜ್‌ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು, ಸಿಬ್ಬಂದಿ ಬಿಬಿಎಂಪಿಗೆ ಸೇರ್ಪಡೆಯಾಗಲಿದ್ದಾರೆ. ಅವರ ಕಾರ್ಯಕ್ಕೆ ತಕ್ಕುದಾದ ವೇತನವನ್ನು ಬಿಬಿಎಂಪಿಯೇ ಪಾವತಿಸಲಿದೆ.

ಯಾವುದಾದರೂ ಅಧಿಕಾರಿ ಅಥವಾ ಸಿಬ್ಬಂದಿಯ ಅಗತ್ಯ ಇಲ್ಲ ಎಂದು ಬಿಬಿಎಂಪಿ ಪರಿಭಾವಿಸಿದಲ್ಲಿ ಸರ್ಕಾರದಿಂದ ಒಪ್ಪಿಗೆ ಪಡೆದು ಅವರ ಸೇವೆಯನ್ನು ಮೊಟಕುಗೊಳಿಸುವುದಕ್ಕೂ ಪಾಲಿಕೆಗೆ ಅಧಿಕಾರವಿದೆ. ಅಂತಹ ಸಿಬ್ಬಂದಿಗೆ ಅವರ ರಜೆ, ಪಿಂಚಣಿ, ಭವಿಷ್ಯನಿಧಿ, ಗ್ರಾಚುಯಿಟಿ ಮುಂತಾದ ಎಲ್ಲ ಸೌಕರ್ಯಗಳನ್ನು ಬಿಬಿಎಂಪಿಯೇ ಒದಗಿಸಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು