‘ಜಿಬಿಎ ರಚನೆಯ ನಂತರ ಮುಂದೇನಾಗಬೇಕು’– ಈ ಪ್ರಶ್ನೆಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ.
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವುದು ಸರಿ. ಆದರೆ, ಸಂಚಾರ ದಟ್ಟಣೆಯ ಮಧ್ಯೆ ನಿತ್ಯ ಆಂಬುಲೆನ್ಸ್‌ಗಳು ಸಂಚರಿಸುತ್ತಿವೆ. ಆಂಬುಲೆನ್ಸ್ ಸಂಚರಿಸಲು ಒಂದು ಪ್ರತ್ಯೇಕ ರಸ್ತೆ ನಿರ್ಮಿಸಬೇಕು. ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ ನಂತರ ಜಿಬಿಎ ರಚನೆ ಮಾಡಬೇಕು.-ಮಂಜುಳಾ ಎಚ್.ವಿ., ಬಸವೇಶ್ವರನಗರ
ನಗರದಲ್ಲಿ ರಸ್ತೆ, ನೀರು, ವಿದ್ಯುತ್, ಉದ್ಯಾನ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಗರ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಸಂಚಾರ ದಟ್ಟಣೆ ನಿಯಂತ್ರಿಸಬೇಕು. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಹಸಿರು ಪ್ರದೇಶವನ್ನು ರಕ್ಷಿಸಿ, ಬೆಳೆಸಬೇಕು. ಉದ್ಯೋಗ ಸೃಷ್ಟಿ, ವ್ಯಾಪಾರ–ವಹಿವಾಟಿನ ವಿಸ್ತರಣೆಗೆ ಅವಕಾಶ ನೀಡಿದ ನಂತರ ಜಿಬಿಎ ರಚನೆಗೆ ಮುಂದಾಗಬೇಕು.-ಸಿದ್ದು ಮೈದೊಳಲು, ಜ್ಞಾನಭಾರತಿ
ರಾಜ್ಯ ಸರ್ಕಾರ ಬಿಬಿಎಂಪಿಯನ್ನು ಜಿಬಿಎ ಮಾಡುವ ಮುನ್ನ ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿ, ಹಾಲು, ಮೊಸರಿನ ಬೆಲೆ ನಿಯಂತ್ರಿಸಬೇಕು. ಬಿಬಿಎಂಪಿ ಮನೆ ತೆರಿಗೆ, ಕಾವೇರಿ ನೀರಿನ ತೆರಿಗೆ ಕಡಿತಗೊಳಿಸಬೇಕು. ನಗರದಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ ನಂತರ ಜಿಬಿಎ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.– ಎಂ.ಲಿಂಗರಾಜು ಗೌಡ, ಮಲ್ಲತ್ತಹಳ್ಳಿ
ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತಲಿನ ನಗರಗಳು ವೇಗವಾಗಿ ಬೆಳೆಯುತ್ತಿವೆ. ಇದಕ್ಕೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಜಿಬಿಎಗೆ ಆದ್ಯತೆ ನೀಡಬೇಕಿದೆ. ಪಾದಚಾರಿ ಮಾರ್ಗ, ಸರ್ವೀಸ್ ರಸ್ತೆಗಳು ಒತ್ತುವರಿಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು ತೆರವುಗೊಳಿಸಬೇಕು. ಉದ್ಯಾನ ನಗರಿಯ ಶ್ವಾಸಕೋಶಗಳಂತಿರುವ ಉದ್ಯಾನಗಳ ನಿರ್ವಹಣೆ ಹಾಗೂ ಸಂರಕ್ಷಣೆಗೆ ವಿನೂತನ ಯೋಜನೆಗಳನ್ನು ರೂಪಿಸಬೇಕು.– ಸಿದ್ದಣ್ಣ ಪೂಜಾರಿ, ವಿಜಯನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.