ಬಿಬಿಎಂಪಿಯನ್ನು ಜಿಬಿಎ ಎಂದು ನಾಮಕರಣ ಮಾಡಿದರೆ ನಗರದ ಮೂಲಸೌಕರ್ಯ ಅಭಿವೃದ್ಧಿ ಆಗುವುದಿಲ್ಲ. ಒಳಚರಂಡಿ ವ್ಯವಸ್ಥೆ, ಬೀದಿದೀಪಗಳು, ರಸ್ತೆ ಗುಂಡಿ, ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ನಗರದ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ಅಂದಾಗ ಮಾತ್ರ ಜಿಬಿಎ ಯಶಸ್ವಿ ಆಗಲಿದೆ.
– ಭಾಗ್ಯ ವೆಂಕಟೇಶ್, ಹೊಸಕೋಟೆ
ಬಿಬಿಎಂಪಿ ಜಿಬಿಎಯಾಗಿ ಬದಲಾದ ಮಾತ್ರಕ್ಕೆ ನಗರದಲ್ಲಿನ ಕುಂದು ಕೊರತೆಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ನಗರದಲ್ಲಿನ ಕಸ ವಿಲೇವಾರಿ ಸಮಸ್ಯೆ, ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಕಸದ ಬುಟ್ಟಿಗಳನ್ನು ಇಡಬೇಕು. ಸಾರ್ವಜನಿಕರು ಈ ಕಸದ ಬುಟ್ಟಿಯಲ್ಲಿ ಕಸ ಹಾಕುವಂತೆ ಜಾಗೃತಿ ಮೂಡಿಸಬೇಕು. ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಬೇಕು.
– ಸಂತೋಷ್ ಕುಮಾರ್, ಟಿ. ದಾಸರಹಳ್ಳಿ
ಬಿಬಿಎಂಪಿಯನ್ನು ಜಿಬಿಎಯಾಗಿ ಬದಲಾವಣೆ ಮಾಡಿರುವ ಸರ್ಕಾರದ ನಡೆ ಸ್ವಾಗತಾರ್ಹ. ಜಿಬಿಎ ಹೆಸರಿಗೆ ತಕ್ಕಂತೆ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ಕಸ ವಿಲೇವಾರಿ, ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ಸಿಗಬೇಕು. ನಗರದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಂದಾಗ ಮಾತ್ರ ಜಿಬಿಎ ಯಶಸ್ವಿ ಆಗಲಿದೆ.
– ರಾಜೇಶ್ವರಿ ರಾಘವೇಂದ್ರ ರಾವ್, ವಿಜಯನಗರ
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಜಿಬಿಎ ಪ್ರಮುಖ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ಸ್ಪಂದಿಸುವ ಆಡಳಿತ ವ್ಯವಸ್ಥೆ ಇರಬೇಕು. ಜಿಬಿಎಗೆ ಮೊದಲು ಚುನಾವಣೆ ನಡೆಸಬೇಕು. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಜಿಬಿಎ ಪಾರದರ್ಶಕ ಆಡಳಿತ ನೀಡಿದರೆ ಮಾತ್ರ ಯಶಸ್ವಿ ಆಗಲಿದೆ.