ಭಾನುವಾರ, ಸೆಪ್ಟೆಂಬರ್ 20, 2020
21 °C

ಎಚ್‌1ಎನ್‌1 ಪ್ರಕರಣಗಳ ಹೆಚ್ಚಳ: ಕರಾವಳಿಯಲ್ಲಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೇವಲ ಆರು ತಿಂಗಳಲ್ಲಿ ಎಚ್‌1ಎನ್‌1 ನಿಂದಾಗಿ 87 ಮಂದಿ ಮೃತಪಟ್ಟಿದ್ದು, ಕರಾವಳಿ ಪ್ರದೇಶದಲ್ಲಿ ಈ ಕಾಯಿಲೆ ತೀವ್ರವಾಗಿ ಬಾಧಿಸಿದೆ.

ರಾಜ್ಯದಲ್ಲಿ ಈ ವರ್ಷ ಇಲ್ಲಿಯವರೆಗೆ 1,760 ಜ್ವರದ ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷ 1,733 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಸಾವಿನ ಪ್ರಮಾಣ ಹೆಚ್ಚಾಗಲು ರೋಗಿಗಳಲ್ಲಿ ಪ್ರತಿರೋಧಕ ಶಕ್ತಿ ಕುಸಿತವಾಗಿರುವುದೇ ಕಾರಣ ಎಂದು ವೈದ್ಯರು ಹೇಳಿದ್ದಾರೆ.

‘ಮೂರು ವರ್ಷಗಳ ಹಿಂದೆಯೂ ಇದೇ ರೀತಿಯಲ್ಲೇ ಎಚ್‌1ಎನ್‌1 ಪ್ರಕರಣ ಉಲ್ಬಣಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 315 ಪ್ರಕರಣಗಳು ದಾಖಲಾಗಿದ್ದರೆ, ದಕ್ಷಿಣ ಕನ್ನಡದಲ್ಲಿ 195 ಪ್ರಕರಣಗಳು ವರದಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ 156 ಪಕ್ರರಣ ದಾಖಲಾಗಿದ್ದು, 13 ಸಾವು ಸಂಭವಿಸಿತ್ತು. ಧಾರವಾಡ ಮತ್ತು ದಾವಣಗೆರೆಯಲ್ಲಿ ಒಟ್ಟು 74 ಪ್ರಕರಣಗಳು ದಾಖಲಾಗಿವೆ.

ಮೈಸೂರು, ಬೆಂಗಳೂರು, ದಕ್ಷಿಣಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಎಚ್‌1ಎನ್‌1 ಪ್ರಕರಣಗಳು ಏರಿಕೆಯಾಗಿದೆ. 2017 ರಲ್ಲಿ 16,000 ಪ್ರಕರಣಗಳು ವರದಿಯಾಗಿದ್ದವು ಎಂದು ದಾವಣಗೆರೆ ಜಿಲ್ಲೆ ಉಸ್ತುವಾರಿ ಅಧಿಕಾರಿ ಡಾ.ಗಂಗಾಧರ ಹೇಳಿದರು.

‘ಎಚ್‌1ಎನ್‌1 ವೈರಸ್‌ ಸುಮಾರು 125 ವರ್ಷಗಳಷ್ಟು ಹಿಂದೆ ಪತ್ತೆ ಆಗಿತ್ತು. ಈ ವೈರಸ್‌ ವರ್ಷದಿಂದ ವರ್ಷಕ್ಕೆ ಪ್ರತಿಕಾಯಗಳ ಉತ್ಪಾದನೆ ಬದಲಿಸುತ್ತಿರುವುದರಿಂದ ಇದಕ್ಕೆ ನೀಡುವ ಲಸಿಕೆ ಪರಿಣಾಮಕಾರಿ ಆಗುತ್ತಿಲ್ಲ. ವ್ಯಕ್ತಿಗೆ ಈ ವೈರಸ್ ಸೋಂಕಿದರೆ, ಅದರ ಲಕ್ಷಣಗಳು ಅರಿವಿಗೆ ಬರಲು ಐದು ದಿನಗಳಾದರೂ ಬೇಕು. ಕೆಲವೊಮ್ಮೆ ಜ್ವರದ ಲಕ್ಷಣವೂ ಗಮನಕ್ಕೆ ಬಾರದೇ ಒಳಗಿಂದೊಳಗೇ ಆರೋಗ್ಯ ಬಿಗಡಾಯಿಸಿ ರೋಗಿಗಳು ಸಾವನ್ನಪ್ಪುತ್ತಾರೆ’ ಎಂದು ಅವರು ಹೇಳಿದರು. 

ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮುನ್ನೆಚ್ಚರಿಕೆ ಕ್ರಮವಾಗಿ ಒಸೆಲ್ಟಮಿವಿರ್‌ ಮಾತ್ರೆಗಳ ಸಂಗ್ರಹವನ್ನು ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.

‘ಇದು ಸಾಂಕ್ರಾಮಿಕ ರೋಗವಾಗಿದೆ. ಜನರ ಓಡಾಟವನ್ನು ಆಧರಿಸಿ ಸೋಂಕು ಪ್ರಮಾಣ ಹೆಚ್ಚುವುದು ಅಥವಾ ತಗ್ಗುವುದು ಆಗುತ್ತದೆ. ಈ ವೈರಸ್‌ ತಳಿ ಸ್ವರೂಪವನ್ನೇ ಬದಲಿಸಿಕೊಳ್ಳುವುದರಿಂದ ಚಿಕಿತ್ಸೆ ಪರಿಣಾಮಕಾರಿಯಾಗದೇ ಸೋಂಕುಪೀಡಿತರು ಸಾವನ್ನಪ್ಪುತ್ತಾರೆ’ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ.ಟಿ.ಎಸ್‌. ಪ್ರಭಾಕರ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು