ಮಂಗಳವಾರ, ನವೆಂಬರ್ 24, 2020
19 °C
ಹಗದೂರು ವಾರ್ಡ್‌ ನಿವಾಸಿಗಳ ನಿದ್ದೆಗೆಡಿಸಿರುವ ಮಳೆ ಮತ್ತು ಕೊಳಚೆ ನೀರು

ತಾಸು ಮಳೆ ಬಂದರೆ ದ್ವೀಪವಾಗುವ ಗಾಂಧಿಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇವಲ ಮೂರು–ನಾಲ್ಕು ಮಳೆ ಸುರಿದರೂ ದ್ವೀಪದಂತಾಗುತ್ತದೆ ಹಗದೂರು ವಾರ್ಡ್‌ನ ಗಾಂಧಿಪುರ. ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗುತ್ತದೆ. ಅಕ್ಕ–ಪಕ್ಕದ ಬಡಾವಣೆಗಳಿಂದ, ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ಹರಿದು ಬರುವ ಕೊಳಚೆ ನೀರು ನಮ್ಮ ನಿದ್ದೆಗೆಡಿಸಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

‘ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಸಮುಚ್ಚಯವಿದೆ. ಭಾರಿ ಮಳೆ ಬೀಳುವ ಸಂದರ್ಭದಲ್ಲಿ ಮಳೆ ನೀರು ಮತ್ತು ಕೊಳಚೆ ನೀರನ್ನು ದೊಡ್ಡ ಪ್ರಮಾಣದಲ್ಲಿ ವಸತಿ ಪ್ರದೇಶದೆಡೆಗೆ ಹರಿಯಬಿಡುತ್ತಾರೆ. ಅಪಾರ್ಟ್‌ಮೆಂಟ್‌ ಮತ್ತು ನಮ್ಮ ಬಡಾವಣೆಯ ಮಧ್ಯೆ ಒಂದು ಕಾಲುದಾರಿ ಇದೆ. ಈ ದಾರಿ ವೈಟ್‌ಫೀಲ್ಡ್‌ ಮುಖ್ಯರಸ್ತೆಯನ್ನು ಸಂಪರ್ಕಿಸುತ್ತದೆ. ಅಪಾರ್ಟ್‌ಮೆಂಟ್‌ನವರು ಬಿಟ್ಟ ನೀರು ಕಾಲುದಾರಿಯಲ್ಲಿ ತುಂಬಾ ರಭಸವಾಗಿ ಹರಿಯುತ್ತದೆ. ಈ ಮಾರ್ಗದಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತದೆ’ ಎಂದು ಗಾಂಧಿಪುರ ನಿವಾಸಿ ವಿನ್ಸೆಂಟ್ ಹೇಳಿದರು.

‘ಎಸ್‌ಟಿಪಿ ಮತ್ತು ಮಳೆ ನೀರನ್ನು ವಸತಿ ಪ್ರದೇಶದ ಕಡೆಗೆ ಬಿಡುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನವರಿಗೆ ಕಳೆದ ಜೂನ್‌ನಲ್ಲಿಯೇ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಅವರು ಹೇಳಿದರು.

‘ಜಲಮಂಡಳಿಯು ಒಳಚರಂಡಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಪೈಪ್‌ ಹಾಕಿದ ನಂತರ ಗುಂಡಿಯನ್ನು ಮಣ್ಣಿನಿಂದ ಮುಚ್ಚುತ್ತಿದ್ದಾರೆ. ಮಳೆ ಬಂದಾಗ ಕೆಸರು ಉಂಟಾಗಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ರಸ್ತೆಯಲ್ಲಿ ಓಡಾಡುವುದೇ ಸವಾಲಾಗಿದೆ’ ಎಂದು ಸ್ಥಳೀಯರಾದ ಸೈಮನ್‌ ಸಂಪತ್ ಹೇಳಿದರು.

‘ವಾರ್ಡ್‌ನ ಯಾವುದೇ ರಸ್ತೆಯೂ ಸುಸ್ಥಿತಿಯಲ್ಲಿಲ್ಲ. ಬೇರೆ ಬೇರೆ ಬಡಾವಣೆಗಳ ನೀರು ಕೂಡ ಗಾಂಧಿಪುರದೊಳಗೆ ಬರುತ್ತಿದೆ. ಮನೆಯೊಳಗೇ ನೀರು ನುಗ್ಗುತ್ತಿದೆ. ತಾತ್ಕಾಲಿಕವಾಗಿ ಏನಾದರೂ ವ್ಯವಸ್ಥೆ ಮಾಡುತ್ತಾರೆ. ಮಳೆ ಬಂದಾಗ ಮತ್ತೆ ಇದೇ ಪರಿಸ್ಥಿತಿ ಸೃಷ್ಟಿಯಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಸಮುದಾಯ ಭವನದಲ್ಲಿ ನೀರು

‘ನಮ್ಮೂರಿಗೆ ಕೊಡುವ ಪಡಿತರವನ್ನೆಲ್ಲ ಸಮುದಾಯ ಭವನದಲ್ಲಿ ಇಟ್ಟಿರುತ್ತಾರೆ. ಈಗ ಅದರೊಳಗೂ ನೀರು ನುಗ್ಗಿದೆ. ಮಳೆ ನಿರಂತರವಾಗಿ 3ರಿಂದ 4 ತಾಸು ನಿರಂತರವಾಗಿ ಸುರಿದರೆ ಈ ಅವ್ಯವಸ್ಥೆ ಸೃಷ್ಟಿಯಾಗುತ್ತದೆ’ ಎಂದು ಸೈಮನ್ ಹೇಳಿದರು.

‘ಮೊದಲು ರಸ್ತೆಗಳು ಉತ್ತಮ ಸ್ಥಿತಿಯಲ್ಲಿಯೇ ಇದ್ದವು. ಜಲಮಂಡಳಿಯು ಈ ರಸ್ತೆಗಳನ್ನೆಲ್ಲ ಅಗೆದು ಹಾಕಿದೆ. ಕಾಮಗಾರಿ ಮುಗಿದ ತಕ್ಷಣ ರಸ್ತೆ ದುರಸ್ತಿ ಮಾಡಿಸಿದ್ದರೆ ಹೆಚ್ಚು ಹಾನಿ ಆಗುತ್ತಿರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಈ ಬಗ್ಗೆ ಪ್ರತಿಕ್ರಿಯೆಗೆ ಜಲಮಂಡಳಿ ಅಧಿಕಾರಿಗಳು ಲಭ್ಯರಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು