ಭಾನುವಾರ, ಡಿಸೆಂಬರ್ 6, 2020
19 °C
ಗ್ರಾಮ ಸೇವಾ ಸಂಘದಿಂದ ಆಯೋಜನೆ

ಬೆಂಗಳೂರಿನ ವಿವಿಧೆಡೆ ಗ್ರಾಮೀಣ ಕೈಮಗ್ಗ ಉತ್ಪನ್ನಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗ್ರಾಮೋದ್ಯೋಗ ಉಳಿಸಿ’ ಆಂದೋಲನದ ಭಾಗವಾಗಿ ಗ್ರಾಮ ಸೇವಾ ಸಂಘವು ಗುರುವಾರದಿಂದ (ಅ.1) ಭಾನುವಾರದವರೆಗೆ (ಅ.4)  ನಗರದ ವಿವಿಧೆಡೆ ಗ್ರಾಮೀಣ ಕೈಮಗ್ಗ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಿದೆ. 

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಗ್ರಾಮೀಣ ಕೈಮಗ್ಗ ಉತ್ಪನ್ನಗಳ ಮೊದಲ ಪ್ರದರ್ಶನವು ಗಾಂಧಿ ಭವನದಲ್ಲಿ ನಾಲ್ಕೂ ದಿನಗಳು ನಡೆಯಲಿವೆ. ಎರಡನೇ ಪ್ರದರ್ಶನವು ಕೆಂಗೇರಿ ಉಪನಗರದ ಹೊಯ್ಸಳ ವೃತ್ತದ ಬಳಿ ನಿರ್ಮಾಣವಾಗಿರುವ ಕರಸ್ಥಲ ಆವರಣದಲ್ಲಿ ಅ.2ರಿಂದ ಆರಂಭವಾಗಲಿದೆ. ಮೂರನೇ ಪ್ರದರ್ಶನವು ಅ.4ರಂದು ರಾಗಿಕಣದಲ್ಲಿ ನಡೆಯಲಿದೆ. ಉತ್ಪನ್ನಗಳ ಪ್ರದರ್ಶನದ ಜತೆಗೆ ಗ್ರಾಮೋದ್ಯೋಗ ಕುರಿತು ಚರ್ಚಾಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಇರಲಿದೆ’ ಎಂದು ತಿಳಿಸಿದರು.  

‘ವಸ್ತ್ರ ವಿನ್ಯಾಸಕಾರರು, ಕುಶಲಕರ್ಮಿಗಳು, ಆರ್ಥಿಕ ತಜ್ಞರು ಆಂದೋಲನದ ಭಾಗವಾಗಿದ್ದಾರೆ. ಅವರು ಕೂಡ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನತೆಯೇ ರಾಜ್ಯದಾದ್ಯಂತ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಿದ್ದಾರೆ. 'ಗ್ರಾಹಕನಾಗಿ ಒಳಗೆ ಬಾ, ಗ್ರಾಮೋದ್ಯೋಗ ಕಾರ್ಯಕರ್ತನಾಗಿ ಹೊರಬಾ' ಘೋಷವಾಕ್ಯದ ಮೂಲಕ ಗ್ರಾಹಕರನ್ನು ಖಾದಿಯತ್ತ ಆಕರ್ಷಿಸಲಿದ್ದೇವೆ. ಕೋವಿಡ್‌ನಿಂದ ಗ್ರಾಮೋದ್ಯೋಗಗಳು ಅವನತಿಯ ಅಂಚು ತಲುಪಿವೆ. ಗ್ರಾಮೀಣ ಭಾಗದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಅನಿವಾರ್ಯವಾಗಿದೆ’ ಎಂದರು. 

ಚಳವಳಿ ಅನಿವಾರ್ಯ: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ, ‘ಗ್ರಾಮೀಣ ಭಾಗದ ಜನತೆಗೆ ಅಲ್ಲಿಯೇ ಉದ್ಯೋಗಗಳು ದೊರೆಯುವಂತಾಗಲು ಕ್ರಮಕೈಗೊಳ್ಳಬೇಕು. ಯಂತ್ರೋದ್ಯಮದ ವಸ್ತುಗಳ ಬದಲು ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಬಳಸಲು ಪ್ರೋತ್ಸಾಹಿಸಬೇಕು. ಈನಿಟ್ಟಿನಲ್ಲಿ ಗ್ರಾಮದ್ಯೋಗ ಚಳವಳಿ ಅನಿವಾರ್ಯ’ ಎಂದು ತಿಳಿಸಿದರು.

ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ‘ಗಾಂಧೀಜಿಯ 150ನೇ ವರ್ಷಾಚರಣೆಯ ಕಾರಣ ಈ ಖಾದಿ ಚಳವಳಿ ಮಹತ್ವ ಪಡೆದಿದೆ. ಗ್ರಾಮೋದ್ಯೋಗ ರಕ್ಷಣೆಗೆ ಈಗಾಗಲೇ ಹಳ್ಳಿಗಳಲ್ಲಿ ಚಳವಳಿ ಪ್ರಾರಂಭವಾಗಿದ್ದು, ಹಲವರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು