ಭಾನುವಾರ, ಜೂನ್ 13, 2021
29 °C

ಹರ್ಷ ಪೆರಿಕಲ್ ಫೌಂಡೇಷನ್‍ನಿಂದ ಉಚಿತ ಆಹಾರ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನಗರದ ಬಡವರು, ನಿರ್ಗತಿಕರು ಮತ್ತು ವೃದ್ಧಾಶ್ರಮಗಳಿಗೆ ಉಚಿತವಾಗಿ ಪ್ರತಿನಿತ್ಯ ಬೆಳಿಗ್ಗೆ ಉಪಾಹಾರ ನೀಡುವ ಕಾರ್ಯವನ್ನು ಹರ್ಷ ಪೆರಿಕಲ್ ಫೌಂಡೇಷನ್ ಹಮ್ಮಿಕೊಂಡಿದೆ‌.

ಕೋವಿಡ್‍ನಿಂದ ಹೋಂ ಕ್ವಾರಂಟೈನ್‍ಗೆ ಒಳಗಾಗಿರುವ ನಾಗರಿಕರಿಗೆ 14 ದಿನಗಳ ಕಾಲ ಬಿಸಿ ಊಟ ಒದಗಿಸುವ ಕಾರ್ಯವನ್ನು ಫೌಂಡೇಷನ್ ಮಾಡುತ್ತಿದೆ.

ಹೋಂ ಕ್ವಾರಂಟೈನ್‌ನಲ್ಲಿರುವವರ ವೈದ್ಯಕೀಯ ವಿವರ ಪರಿಶೀಲಿಸಿ 14 ದಿನ ಬಿಸಿಯೂಟ ನೀಡಲಾಗುವುದು ಎಂದು ಫೌಂಡೇಷನ್ ಪ್ರಕಟಣೆ ತಿಳಿಸಿದೆ.

ಹಸಿದವರಿಗೆ ಅನ್ನ ನೀಡುವ ಕಾರ್ಯವನ್ನು ಏಪ್ರಿಲ್ ಅಂತ್ಯದಿಂದಲೇ ಆರಂಭಿಸಲಾಗಿದ್ದು, ಲಾಕ್‍ಡೌನ್ ಸಂಕಷ್ಟ ಮುಗಿಯುವವರೆಗೆ ಮುಂದುವರಿಸಲಾಗುವುದು ಎಂದು ಹರ್ಷ ಎಂ. ಪೆರಿಕಲ್ ಮತ್ತು ಶ್ರುತಿ ಪೆರಿಕಲ್ ದಂಪತಿ ಹೇಳಿದ್ದಾರೆ.

ಆಹಾರ ಬೇಕಾದವರು ಈ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾತ್ರ ಮಾಡಬೇಕು: +91 99008 15555.

ಬಡವರಿಗೆ ಬನಶಂಕರಿ ಪ್ರಸಾದ

ಕೋವಿಡ್‌ನಿಂದಾಗಿ ದೇವಾಲಯಗಳಲ್ಲಿ ಅನ್ನದಾಸೋಹ ಸ್ಥಗಿತಗೊಂಡಿದೆ. ಈ ಕಾರ್ಯಕ್ಕಾಗಿ ಭಕ್ತರು ನೀಡಿದ್ದ ಧವಸ ಧಾನ್ಯ ಹಾಳಾಗುವ ಸಾಧ್ಯತೆ ಇದೆ. ಇದನ್ನು ಮನಗಂಡಿರುವ ಬೆಂಗಳೂರು ನಗರ ಜಿಲ್ಲಾಡಳಿತವು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಬನಶಂಕರಿ ಪ್ರಸಾದ ಪೂರೈಸಲು ಮುಂದಾಗಿದೆ.

ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಹಾಗೂ ಹಕ್ಕಿ ಪಿಕ್ಕಿ ಕಾಲೋನಿಯ ಜನರಿಗೆ ದಿನಸಿ ಕಿಟ್‌ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾಡಿದ್ದಾರೆ.

ಕಿಟ್‌ನಲ್ಲಿ ಏನೇನಿದೆ: ಸದ್ಯಕ್ಕೆ 500 ಕಿಟ್ ಸಿದ್ಧಪಡಿಸಲಾಗಿದೆ. ಪ್ರತಿ ಕಿಟ್‌ನಲ್ಲಿ 10 ಕೆ.ಜಿ. ಅಕ್ಕಿ, ಒಂದು ಕೆ.ಜಿ. ಬೆಲ್ಲ, ಒಂದು ಕೆ.ಜಿ. ಬೇಳೆ, ಒಂದು ಕೆ.ಜಿ. ಸಕ್ಕರೆ, ಒಂದು ಪ್ಯಾಕೆಟ್‌ ಉಪ್ಪು, ಅರ್ಧ ಕೆ.ಜಿ. ಹುಣಸೆಹಣ್ಣು ಇರಲಿದೆ. ಇದಕ್ಕೆ ಸುಮಾರು 5 ಸಾವಿರ ಕೆ.ಜಿ. ಅಕ್ಕಿ ಬಳಸಿಕೊಳ್ಳಲಾಗಿದೆ. ಇನ್ನೂ 10 ಸಾವಿರ ಕೆ.ಜಿ. ಅಕ್ಕಿ ಲಭ್ಯವಿದೆ.

‘ಕೋವಿಡ್‌ನಿಂದಾಗಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಅನ್ನದಾಸೋಹ ನಿಲ್ಲಿಸಲಾಗಿದೆ. ಭಕ್ತರ ಪ್ರವೇಶವನ್ನೂ ನಿಷೇಧಿಸಲಾಗಿದೆ. ಹರಕೆಯ ರೂಪದಲ್ಲಿ ಭಕ್ತರು ನೀಡಿದ್ದ ಧವಸ ಧಾನ್ಯಗಳಿಗೆ ಹುಳ ಹಿಡಿಯುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಬಡವರಿಗೆ ದಿನಸಿ ಕಿಟ್‌ ವಿತರಿಸಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ 500 ಮಂದಿಗೆ ಕಿಟ್‌ ನೀಡಲಾಗುತ್ತದೆ’ ಎಂದು ಮಂಜುನಾಥ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು