ಗುರುವಾರ , ಮಾರ್ಚ್ 23, 2023
32 °C
ಇಂದು ಪತ್ರಿಕಾ ವಿತರಕರ ದಿನ * ಪತ್ರಿಕೆಯಿಂದ ಸೋಂಕು ಹರಡುತ್ತದೆ ಎಂಬ ಸುಳ್ಳು ಸುದ್ದಿಯಿಂದ ಎದುರಾಯಿತು ಸಂಕಷ್ಟ

ಮಳೆ–ಚಳಿಗಿಂತ ಕೊರೊನಾ ಹೆದರಿಸಿತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೆಪ್ಟೆಂಬರ್‌ 4 ಪತ್ರಿಕಾ ವಿತರಕರ ದಿನ. ಅವರ ಮೊಗದಲ್ಲಿ ಸಂಭ್ರಮದ ಬದಲು ಸಂಕಷ್ಟವೇ ಎದ್ದು ಕಾಣುತ್ತಿದೆ. ಈ ಹಿಂದೆ ಯಾವತ್ತೂ ಎದುರಿಸದ ಸಂಕಷ್ಟವನ್ನು ಈ ಒಂದೇ ವರ್ಷದಲ್ಲಿ ಎದುರಿಸಿದೆವು ಎನ್ನುತ್ತಾರೆ ಪತ್ರಿಕಾ ವಿತರಕರು ಮತ್ತು ಏಜೆಂಟರು. 

‘ನಾವು ಮಳೆ, ಚಳಿಗೇ ಹೆದರಿದವರಲ್ಲ. ಆದರೆ, ಕೊರೊನಾ ಸೋಂಕಿನ ಹೆಸರಿನಲ್ಲಿ ಹಬ್ಬಿದ ಸುಳ್ಳು ಸುದ್ದಿ ನಮ್ಮನ್ನು ಹೈರಾಣಾಗಿಸಿತು. ಎಷ್ಟೋ ಹುಡುಗರು ಕೆಲಸವಿಲ್ಲದೆ ಕುಳಿತುಕೊಳ್ಳುವಂತಾಯಿತು’ ಎಂದು ಡೀಲರ್‌ಗಳು ಹೇಳುತ್ತಾರೆ. 

‘ಪತ್ರಿಕೆ ಮುಟ್ಟುವುದರಿಂದ ಅಥವಾ ಅದರ ಮೂಲಕ ಕೊರೊನಾ ಸೋಂಕು ಹರಡುವುದಕ್ಕೆ ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಈವರೆಗೆ ಯಾವ ಪತ್ರಿಕಾ ವಿತರಕನಿಗೂ ಸೋಂಕು ತಗುಲಿರುವ ಉದಾಹರಣೆ ಇಲ್ಲ. ಪತ್ರಿಕೆಯಿಂದ ಸೋಂಕು ಹರಡುತ್ತದೆ ಎಂಬುದು ನಿಜವೇ ಆಗಿದ್ದರೆ, ಶೇ 80ರಷ್ಟು ವಿತರಕರು ಇಂದು ಆಸ್ಪತ್ರೆಯಲ್ಲಿರಬೇಕಿತ್ತಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ.


ಶಿರೀಶ್‌ಕುಮಾರ್‌ ಚಿಪ್ರೆ

ಮಾಸ್ಕ್‌ ಧರಿಸಿಯೇ ಪತ್ರಿಕೆ ವಿತರಣೆ

ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವದಂತಿಗಳಿಂದ ಬಹಳಷ್ಟು ಜನ ಪೇಪರ್‌ ಹಾಕಿಸಿಕೊಳ್ಳುವುದನ್ನೇ ನಿಲ್ಲಿಸಿದರು. ಈಗಲೂ ಎಷ್ಟೋ ಅಪಾರ್ಟ್‌ಮೆಂಟ್‌ ಒಳಗೆ ನಮ್ಮನ್ನು ಬಿಡುತ್ತಿಲ್ಲ. ಕೆಲವರು ಮಾತ್ರ ಈಗ ಮತ್ತೆ ಪತ್ರಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿಯೇ ಪತ್ರಿಕೆ ಹಾಕುತ್ತಾರೆ. ಸ್ಯಾನಿಟೈಸರ್‌ಗಳು ಒದಗಿಸಿದ್ದೇವೆ. ವೈಟ್‌ಫೀಲ್ಡ್‌ ವ್ಯಾಪ್ತಿಯಲ್ಲಿ ಯಾವ ಹುಡುಗರಿಗೂ ಕೊರೊನಾ ಬಂದಿಲ್ಲ. ಎಲ್ಲರೂ ಮತ್ತೆ ಮೊದಲಿನಂತೆ ಪತ್ರಿಕೆ ಹಾಕಿಸಿಕೊಳ್ಳಬೇಕು. ಇದನ್ನು ನಂಬಿದ ಎಷ್ಟೋ ಯುವಕರಿಗೆ, ಏಜೆಂಟರಿಗೆ ಸಹಾಯ ಮಾಡಿದಂತಾಗುತ್ತದೆ

ಶಿರೀಶ್‌ಕುಮಾರ್‌ ಚಿಪ್ರೆ, ಪತ್ರಿಕಾ ಡೀಲರ್, ವೈಟ್‌ಫೀಲ್ಡ್


ವೀರಭದ್ರ

ವೃದ್ಧರಿಗೆ ಓದಲು ಬಿಡುತ್ತಿಲ್ಲ 

ಪತ್ರಿಕೆಗಳನ್ನು ಹೆಚ್ಚು ಓದುವುದೇ ಹಿರಿಯ ನಾಗರಿಕರು. ಅವರು ಈಗ ಓದಲು ಬಯಸಿದರೂ, ಅವರ ಮಕ್ಕಳು, ಮೊಮ್ಮಕ್ಕಳು ಬಿಡುತ್ತಿಲ್ಲ. ಅವರನ್ನು ಮನೆಯಿಂದ ಆಚೆಗೂ ಕಳುಹಿಸುತ್ತಿಲ್ಲ. 25 ವರ್ಷಗಳಿಂದ ಪತ್ರಿಕಾ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಸಾವಿರಾರು ವಿದ್ಯಾರ್ಥಿಗಳು, ವಿತರಕರು ಇದೇ ವೃತ್ತಿಯನ್ನು ನಂಬಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಷ್ಟವಾಗುತ್ತಿದೆ. ಪತ್ರಿಕೆಯು ಮುದ್ರಣಾಲಯದಿಂದ ಮಾರುಕಟ್ಟೆ ಬರುವವರಿಗೆ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ‘ಪ್ರಜಾವಾಣಿ’ ಮಾಡಿದ್ದ ವಿಡಿಯೊವನ್ನು ಓದುಗರೊಂದಿಗೆ ಹಂಚಿಕೊಂಡೆವು. ಲಾಕ್‌ಡೌನ್‌ ನಂತರ ಪತ್ರಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ 

ವೈ.ಸಿ. ವೀರಭದ್ರ, ಪತ್ರಿಕಾ ಏಜೆಂಟ್, ಯಲಹಂಕ 


ಜಿ. ವರದನ್

ವಿತರಕರಿಗೆ ನೆರವು

ಬಿಲ್‌ ಸಂಗ್ರಹಿಸಲು ಮನೆಗೆ ಹೋದಾಗ, ಬಹಳಷ್ಟು ಜನ ಮನೆಗೆ ಬರಬೇಡಿ, ಆನ್‌ಲೈನ್‌ನಲ್ಲಿಯೇ ಹಣ ಪಾವತಿಸುತ್ತೇವೆ ಎಂದರು. ಆದರೆ, ಹಣ ಕಟ್ಟಲಿಲ್ಲ. 1972ರಿಂದ ಈ ವೃತ್ತಿಯಲ್ಲಿದ್ದೇನೆ. ಇಂತಹ ಪರಿಸ್ಥಿತಿ ಇರಲಿಲ್ಲ. ವಿತರಕರು ಮನೆ–ಮನೆಗೆ ಹೋಗುವಾಗ ಅಪಘಾತಗಳಾಗುತ್ತವೆ, ನಾಯಿಗಳು ದಾಳಿ ಮಾಡುತ್ತೇವೆ. ಇಂತಹ ಸಂಕಷ್ಟಗಳ ಜೊತೆಗೆ ಈ ಬಾರಿ, ಗ್ರಾಹಕರು ಹಣ ನೀಡದ ಸಮಸ್ಯೆಯೂ ಸೇರಿಕೊಂಡಿತು. ‘ವೈಟ್‌ಫೀಲ್ಡ್‌ ನ್ಯೂಸ್‌ಪೇಪರ್‌ ಹಾಕರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್’ ಮಾಡಿಕೊಂಡಿದ್ದೆವು. ಸಂಘದಲ್ಲಿನ ಹಣದ ಮೂಲಕ ವಿತರಕರಿಗೆ ತಲಾ ₹3 ಸಾವಿರ ವಿತರಣೆ ಮಾಡಿದ್ದೇವೆ

ಜಿ. ವರದನ್‌, ವಿತರಕ–ಏಜೆಂಟ್‌, ವೈಟ್‌ಫೀಲ್ಡ್ 

 


ರವೀಂದ್ರ ಎಲ್. ನಾಯಕ್

ಜನ ಅರ್ಥ ಮಾಡಿಕೊಳ್ಳಬೇಕು 

ಜನರಲ್ಲಿ ಪತ್ರಿಕೆ ಓದುವ ಹವ್ಯಾಸವೇ ಕಡಿಮೆಯಾಗಿದೆ. ಸಾಮಾಜಿಕ ಮಾಧ್ಯಮ ಅಥವಾ ಸುದ್ದಿ ವಾಹಿನಿಗಳನ್ನು ಹೆಚ್ಚು ನೋಡುತ್ತಿದ್ದಾರೆ. ಆದರೆ, ನ್ಯೂಸ್‌ ಚಾನೆಲ್‌ಗಳಲ್ಲಿ ಶೇ 10ರಷ್ಟು ಸುದ್ದಿಗಳೂ ಇರುವುದಿಲ್ಲ. ಪತ್ರಿಕೆಯಲ್ಲಿ 100 ಸುದ್ದಿಗಳು ಸಿಗುತ್ತವೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಮಳೆ, ಚಳಿ, ಗಾಳಿ ಎನ್ನದೆ ಹುಡುಗರು ಪತ್ರಿಕೆ ಹಾಕುತ್ತಿರುತ್ತಾರೆ. ಈಗಲೂ ಎಷ್ಟೋ ಜನ ಮನೆ ಒಳಗೆ ಬರಬೇಡಿ, ಗೇಟ್‌ ಮುಟ್ಟಬೇಡಿ ಎನ್ನುತ್ತಾರೆ. ಅವರು ಕರೆದರೂ ನಾವು ಒಳಗೆ ಹೋಗುವುದಿಲ್ಲ. ಆದರೆ, ನಮ್ಮಿಂದಲೇ ಸೋಂಕು ಹರಡುತ್ತದೆ ಏನೋ ಎಂಬಂತೆ ವರ್ತಿಸುವುದು ಕಂಡಾಗ ಬೇಸರವಾಗುತ್ತದೆ 

ರವೀಂದ್ರ ಎಲ್. ನಾಯಕ್, ಏಜೆಂಟ್‌, ಬಸವೇಶ್ವರನಗರ 


ವಿ. ಲಕ್ಷ್ಮಣ್

 

ಲಾಕ್‌ಡೌನ್‌ ವೇಳೆ ಸವಾಲು

ಲಾಕ್‌ಡೌನ್‌ ಸಂದರ್ಭದಲ್ಲಿ ಮತ್ತು ಲಾಕ್‌ಡೌನ್‌ ನಂತರವೂ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಎಷ್ಟೋ ಹುಡುಗರು ಪೇಪರ್ ಹಾಕುವುದಕ್ಕೆ ಬರುತ್ತಿಲ್ಲ. ಓದಿಗೆ ಸಹಾಯವಾಗಲಿ ಎಂದು ಬರುತ್ತಿದ್ದ ವಿದ್ಯಾರ್ಥಿಗಳನ್ನೂ ಅವರ ಪೋಷಕರು ಈಗ ಕಳುಹಿಸುತ್ತಿಲ್ಲ. ನಾವು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಡಿಮೆ ಹುಡುಗರೇ ಹೆಚ್ಚು ಪತ್ರಿಕೆ ವಿತರಿಸುತ್ತಿದ್ದಾರೆ. ಆದರೆ, ಗ್ರಾಹಕರು ಸರಿಯಾಗಿ ಬಿಲ್‌ನ ಹಣ ಕೊಡುತ್ತಿಲ್ಲ. ಆನ್‌ಲೈನ್‌ನಲ್ಲಿಯೂ ಕಳುಹಿಸುವುದಿಲ್ಲ. ಈಗ ಕೆಲವರು ಮತ್ತೆ ಪತ್ರಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ಗಿಂತ ಶೇ 20ರಷ್ಟು ಹೆಚ್ಚು ಪತ್ರಿಕೆಗಳು ಈಗ ಮಾರಾಟವಾಗುತ್ತಿವೆ 

ವಿ. ಲಕ್ಷ್ಮಣ್‌, ವಿತರಕ, ಜಯನಗರ 


ಡಿ. ರಾಜಣ್ಣ

 

ಗೇಟ್‌ ಹಾಕಿಬಿಡುತ್ತಿದ್ದರು

ನಾವು ಮನೆ ಹತ್ತಿರ ಹೋಗುತ್ತಿದ್ದಂತೆ ಗೇಟ್‌ ಹಾಕಿಬಿಡುತ್ತಿದ್ದರು. ಗೇಟ್‌ನಿಂದ ಹೊರಗಡೆಯೇ ಪೇಪರ್‌ ಇಟ್ಟು ಬರಬೇಕಿತ್ತು. 50 ಪತ್ರಿಕೆಗಳು ಹೋಗುವ ಕಡೆ 20 ಮಾತ್ರ ಹೋಗುತ್ತಿದ್ದವು. ಇವತ್ತು ಬೇಡ, ನಾಳೆ ಕೊಡಿ, ನಾಡಿದ್ದು ಕೊಡಿ ಎಂದು ಕೊನೆಗೆ ಪೇಪರ್‌ ಹಾಕಲೇಬೇಡಿ ಎಂದು ಹೇಳಿ ಕಳುಹಿಸುತ್ತಿದ್ದರು. ಎಷ್ಟೋ ಹುಡುಗರು ಕೂಡ ಪತ್ರಿಕೆ ಹಾಕಲು ಬರುತ್ತಿಲ್ಲ. ಪೋಷಕರೇ ಮಕ್ಕಳನ್ನು ಕಳುಹಿಸುತ್ತಿಲ್ಲ.  ಈಗ ನಾನೇ ಪೇಪರ್‌ ಹಾಕಲು ಹೋಗುತ್ತೇನೆ. ಮೊದಲು 300–400 ಜನ ಒಂದೆಡೆ ಸೇರಿ, ಪತ್ರಿಕೆಗಳನ್ನು ವಿಂಗಡಿಸಿಕೊಂಡು ಹೋಗುತ್ತಿದ್ದೆವು. ಈಗ ಒಂದೆಡೆ 100 ಜನರೂ ಸೇರಲು ಸಾಧ್ಯವಾಗುವುದಿಲ್ಲ. 

ಡಿ. ರಾಜಣ್ಣ, ವಿತರಕ, ಬಸವೇಶ್ವರನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು