ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡು ಬಡವರ ಪಾಲಿಗೆ ‘ಆರೋಗ್ಯ ನಿಧಿ’ ಮರೀಚಿಕೆ

ಮೇಯರ್‌ ವೈದ್ಯಕೀಯ ಪರಿಹಾರ ನಿಧಿಗೆ ಹೆಚ್ಚಿದ ಶಿಫಾರಸು * ನೆರವಿಗೆ ಎದುರು ನೋಡುತ್ತಿದ್ದಾರೆ ಸಾವಿರಾರು ಮಂದಿ
Last Updated 5 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಚಿಕಿತ್ಸಾ ವೆಚ್ಚ ಭರಿಸುವ ಸಾಮರ್ಥ್ಯ ಇರುವ ಕುಟುಂಬಗಳೇ ಹೆಚ್ಚಾಗಿ ಬಿಬಿಎಂಪಿಯ ‘ಮೇಯರ್‌ ವೈದ್ಯಕೀಯ ಪರಿಹಾರ ನಿಧಿ’ ಪ್ರಯೋಜನ ಪಡೆಯುತ್ತಿವೆ. ಕಡು ಬಡತನದಲ್ಲಿ ನರಳುತ್ತಿರುವ ಕುಟುಂಬಗಳ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದರೂ ಈ ನಿಧಿಯಿಂದ ಆರ್ಥಿಕ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ.

ಇನ್ನೊಂದೆಡೆ, ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೇ ತೀರಾ ಇಕ್ಕಟ್ಟಿನ ಪರಿಸ್ಥಿತಿ ತಲುಪಿರುವ ಬಡ ಕುಟುಂಬಗಳು ಈ ನೆರವು ಪಡೆಯಲು ಪಾಲಿಕೆಯ ಕಚೇರಿಗಳಿಗೆ ಅಲೆದಾಟ ನಡೆಸುವಂತಾಗಿದೆ. ಮಧ್ಯವರ್ತಿಗಳ ಹಾವಳಿ ಈ ಯೋಜನೆಯ ಆಶಯಕ್ಕೇ ಕೊಳ್ಳಿ ಇಡುತ್ತಿದೆ.

ಯೋಜನೆಯಡಿ ಸೂಕ್ತ ಮಾನದಂಡವನ್ನು ರೂಪಿಸದ ಹಿನ್ನೆಲೆಯಲ್ಲಿ ಬಡವರ ಹೆಸರಿನಲ್ಲಿ ಹಲವರು ಈ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಸೇರಿದಂತೆ ವಿವಿಧ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಕರ್ನಾಟಕ ಮೆಡಿಕಲ್ ಅಟೆಂಡೆನ್ಸ್ ರಿಜಿಸ್ಟರ್ ನಿಗದಿಪಡಿಸಿರುವ ದರ ನಿಯಮದ ಅನುಸಾರ ವೈದ್ಯಕೀಯ ನೆರವು ನೀಡಬೇಕು. ಅರ್ಹ ಫಲಾನುಭವಿಗಳಿಗೆ ಒಟ್ಟು ಚಿಕಿತ್ಸಾ ವೆಚ್ಚದ ಶೇ 50 ರಷ್ಟು ಅಥವಾ ಗರಿಷ್ಠ ₹ 50 ಸಾವಿರ ನೀಡುವ ಅವಕಾಶವಿದೆ. ವಿಶೇಷ ಪ್ರಕರಣಗಳಲ್ಲಿ ಮಾತ್ರ ಮೇಯರ್ ವಿವೇಚನೆಗೆ ಬಿಡಲಾಗುತ್ತದೆ.ಆದರೆ, ಬಹುತೇಕರು ಪಾಲಿಕೆ ಸದಸ್ಯರು ಹಾಗೂ ರಾಜಕೀಯ ಮುಖಂಡರಿಂದ ಒತ್ತಡ ಹಾಕಿಸಿ, ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಅರ್ಜಿಗಳ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಇದಕ್ಕೆ ಎಪಿಎಲ್ ಮತ್ತು ಬಿಪಿಎಲ್ ಎಂದು ಪಡಿತರ ಚೀಟಿಗಳನ್ನು ವಿಂಗಡಿಸದಿರುವುದು ಕೂಡ ಪ್ರಮುಖ ಕಾರಣ. ಕಳೆದ ವರ್ಷ ಸಹಾಯಧನಕ್ಕಾಗಿ ಮೂರು ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರಸಕ್ತ ವರ್ಷ ಮೇಯರ್‌ ವೈದ್ಯಕೀಯ ಪರಿಹಾರ ನಿಧಿ ಪೂರ್ಣ ಪ್ರಮಾಣದಲ್ಲಿ ಖರ್ಚಾಗಿದ್ದು, ಇನ್ನೂ ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಕಳೆದ ಮೂರು ನಾಲ್ಕು ವರ್ಷಗಳಿಂದ ‌ಮೇಯರ್ ವೈದ್ಯಕೀಯ ಪರಿಹಾರ ನಿಧಿಗೆ ಪಾಲಿಕೆ ಬಜೆಟ್‌ನಲ್ಲಿ ವರ್ಷಕ್ಕೆ ₹ 10 ಕೋಟಿ ಕಾಯ್ದಿರಿಸಲಾಗುತ್ತಿತ್ತು. ಇದು ಸಾಲದ ಕಾರಣ ಇತ್ತೀಚೆಗೆ ಕೌನ್ಸಿಲ್‌ನಲ್ಲಿ ಮತ್ತೆ ₹15 ಕೋಟಿ ಮಂಜೂರು ಮಾಡುವುದಕ್ಕೆ ಅನುಮೋದನೆ ಪಡೆಯಲಾಗಿದೆ. ಈ ಹಣದಲ್ಲಿ ಬಾಕಿ ಅರ್ಜಿಗಳಿಗೆ ಆದ್ಯತೆ ಮೇರೆಗೆ ಪರಿಹಾರ ನೀಡಲು ಪಾಲಿಕೆ ನಿರ್ಧರಿಸಿದೆ.

‘ಪಾಲಿಕೆ ಸದಸ್ಯರು ಹಾಗೂ ಅವರ ಆಪ್ತರು ಶಿಫಾರಸು ಮಾಡುವ ಅರ್ಜಿಗಳು 15 ದಿನಗಳಲ್ಲಿಯೇ ವಿಲೇವಾರಿಯಾಗಿ, ಬ್ಯಾಂಕ್‌ ಖಾತೆಗಳಿಗೆ ನಿಗದಿತ ಹಣ ಜಮಾ ಆಗುತ್ತದೆ. ಆದರೆ, ನೇರವಾಗಿ ಮೇಯರ್ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಿದಲ್ಲಿ ದಾಖಲಾತಿಗಳ ಲೋಪದೋಷ ಎಂಬ ಸಬೂಬು ನೀಡಿ, ತಿರಸ್ಕರಿಸಲಾಗುತ್ತಿದೆ. ಇದರಿಂದ ಕಚೇರಿಗೆ ಅಲೆದಾಟ ನಡೆಸಿ, ಸುಮ್ಮನಾಗಬೇಕಾದ ಪರಿಸ್ಥಿತಿಯಿದೆ. ಪಾಲಿಕೆ ಸದಸ್ಯರ ಆಪ್ತರೆಂದು ಹೇಳಿಕೊಳ್ಳುವವರು ಸಹಾಯಧನ ಕೊಡಿಸಲು ಕಮಿಷನ್ ಕೇಳುತ್ತಾರೆ’ ಎಂದು ಅರ್ಜಿ ಸಲ್ಲಿಸಿದವರಲ್ಲಿ ಕೆಲವರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡಿದ್ದಾರೆ.

‘ತಂದೆಗೆ ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ₹ 2.5 ಲಕ್ಷ ಬಿಲ್‌ ಪಾವತಿಸುವುದು ಕಷ್ಟವಾಗಿದ್ದರಿಂದ ಮೇಯರ್ ಕಚೇರಿಗೆ ನೆರವಿಗೆ ಅರ್ಜಿ ಸಲ್ಲಿಸಿದ್ದೆವು. ಪೂರಕ ದಾಖಲಾತಿಗಳನ್ನೂ ನೀಡಿದ್ದೆವು. ಈ ಸಂಬಂಧ ಹಲವು ಬಾರಿ ಪಾಲಿಕೆ ಕಚೇರಿಗೆ ಭೇಟಿ ನೀಡಿ, ವಿಚಾರಿಸಿದೆವು. ಆದರೆ, ಹಣ ಬಿಡುಗಡೆಯಾಗಲೇ ಇಲ್ಲ’ ಎಂದು ಗಾಯತ್ರಿನಗರದ ನಿವಾಸಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

‘ಮೂತ್ರಪಿಂಡ ಸಮಸ್ಯೆ ಹಿನ್ನೆಲೆಯಲ್ಲಿ ಎರಡು ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದೆ. ₹ 2.5 ಲಕ್ಷ ವೆಚ್ಚವಾಗಿತ್ತು. ₹ 1.35 ಲಕ್ಷ ನೆರವಿಗೆ ಅರ್ಜಿ ಸಲ್ಲಿಸಿ, ಶಾಸಕರು ಹಾಗೂ ಪಾಲಿಕೆ ಸದಸ್ಯರಿಂದ ಶಿಫಾರಸು ಮಾಡಿಸಲಾಗಿತ್ತು. ₹ 80 ಸಾವಿರ ಬಂದಿದೆ’ ಎಂದು ಪೀಣ್ಯದ ನಿವಾಸಿ ನಾಗರಾಜ್ ತಿಳಿಸಿದರು.

‘ಆಯುಷ್ಮಾನ್‌ ಭಾರತ್‌’ಗೆ ನಿರಾಸಕ್ತಿ

ಬಿಪಿಎಲ್ ಪಡಿತರ ಕಾರ್ಡ್ ಹೊಂದಿದವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯವಿಮೆ ಯೋಜನೆಯಡಿ ನೋಂದಾಯಿಸಿ ಕೊಂಡವರುಗೆ ‘ಆಯುಷ್ಮಾನ್ ಭಾರತ್’ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟಾಗಿಯೂ ಮೇಯರ್ ವೈದ್ಯಕೀಯ ಪರಿಹಾರ ನಿಧಿಗೆ ಅರ್ಜಿಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ರಾಜ್ಯ ಸರ್ಕಾರವು 2018 ಮಾ.2ಕ್ಕೆ ‘ಆರೋಗ್ಯ ಕರ್ನಾಟಕ ಯೋಜನೆ’ಯನ್ನು ಪ್ರಾರಂಭಿಸಿತ್ತು. ಬಳಿಕ ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್’ ಯೋಜನೆಯನ್ನು ಪ್ರಾರಂಭಿಸಿತು. ಬಳಿಕ ಈ ಎರಡೂ ಯೋಜನೆಗಳನ್ನು ಸಂಯೋಜಿಸಿ, ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಮಾರಣಾಂತಿಕ ಕಾಯಿಲೆಗಳ ವ್ಯಾಪ್ತಿಯಲ್ಲಿ ಬರುವ ತೃತೀಯ ಹಂತದ (ರೋಗದ ತೀವ್ರತೆ ನಿರ್ಧರಿಸುವುದು) 900 ಚಿಕಿತ್ಸಾ ವಿಧಾನಗಳು ಸೇರಿದಂತೆ ಒಟ್ಟು 1,650 ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.

‘ಆಯುಷ್ಮಾನ್ ಭಾರತ್ ಯೋಜನೆ ಪ್ರಾರಂಭವಾದ ಬಳಿಕಮೇಯರ್ ವೈದ್ಯಕೀಯ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಲಿದೆ ಅಂದುಕೊಂಡಿದ್ದೆವು. ಆದರೆ, ವಿರುದ್ಧವಾದ ವಾತಾವರಣ ನಿರ್ಮಾಣವಾಗಿದೆ.ಹೆಚ್ಚಿನ ಚಿಕಿತ್ಸಾ ನೆರವು ಸಿಕ್ಕರೂ ಚಿಕಿತ್ಸೆ ಪಡೆದುಕೊಳ್ಳುವವರು ಮೊದಲು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಬೇಕು ಎಂಬುದು ಸೇರಿದಂತೆ ಕೆಲವೊಂದು ನಿಬಂಧನೆಗಳಿವೆ. ಇದು ಕೂಡ ಅರ್ಜಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿರಬಹುದು’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಬಾಲು ಅಭಿಪ್ರಾಯಪಟ್ಟರು.

‘ಪಾರದರ್ಶಕತೆಗೆ ಕ್ರಮ’

‘ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಜಾರಿಗೊಂಡ ಬಳಿಕವೂ ಇಷ್ಟು ದೊಡ್ಡ ಪ್ರಮಾಣದಲ್ಲಿ ನೆರವನ್ನು ಅರಸಿ ಅರ್ಜಿಗಳು ಬರುತ್ತಿರುವುದು ಏಕೆ ಎಂದು ತಿಳಿಯದಂತಾಗಿದೆ.ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಪ್ರಯೋಜನ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆಯ ಮಾನದಂಡಗಳಲ್ಲಿ ಕೆಲ ಬದಲಾವಣೆ ಮಾಡುವ ಬಗ್ಗೆ ಗಂಭೀರ ಚಿಂತನೆಗಳು ನಡೆದಿವೆ’ ಎಂದು ಮೇಯರ್‌ ಎಂ.ಗೌತಮ್ ಕುಮಾರ್‌ ತಿಳಿಸಿದರು.

‘ಅರ್ಜಿ ಸಲ್ಲಿಸಿದ ಎಲ್ಲರಿಗೂ ಲಭ್ಯ ಅನುದಾನದಲ್ಲಿ ನೆರವು ನೀಡುವುದು ಕಷ್ಟಸಾಧ್ಯ.ವೈದ್ಯಕೀಯ ವಿಮಾ ಕಂಪನಿಗಳ ಮಾದರಿಯಲ್ಲಿಯೇ ನೆರವಿನ ಮೊತ್ತವನ್ನು ಪಾವತಿಸುವ ಪ್ರಸ್ತಾವಗಳು ಬಂದಿವೆ.ಬಿಲ್‌ಗಳನ್ನು ರೋಗಿಗಳ ಆಧಾರ್‌ಗೆ ಲಿಂಕ್ ಮಾಡಿ, ಆಸ್ಪತ್ರೆಗಳು ಆನ್‌ಲೈನ್‌ನಲ್ಲಿ ಚಿಕಿತ್ಸಾ ಮಾಹಿತಿಯನ್ನು ಅಪ್‌ಲೋಡ್‌ ಮಾಡುವ ವ್ಯವಸ್ಥೆ ರೂಪಿಸಲು ಮುಂದಾಗಿದ್ದೇವೆ’ ಎಂದರು.

‘ಯೋಜನೆಯಲ್ಲಿ ಕೆಲವೊಂದು ಲೋಪದೋಷಗಳಿವೆ. ಎಪಿಎಲ್‌, ಬಿಪಿಎಲ್ ಕುಟುಂಬಗಳೆರಡಕ್ಕೂ ನೆರವು ನೀಡಲಾಗುತ್ತಿದೆ. ಪಡಿತರ ಚೀಟಿ ಅನುಸಾರ ವಿಂಗಡಿಸಿದರೂ ಕೆಲವರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಚಿಕಿತ್ಸೆಗೆ ನೆರವು ನೀಡುವ ಮಾನದಂಡಗಳಲ್ಲಿ ಕೆಲವು ಬದಲಾವಣೆ ಅನಿವಾರ್ಯ’ ಎಂದು ಅಭಿಪ್ರಾಯಪಟ್ಟರು.

ಭೇಟಿ ನೀಡದ ಅಧಿಕಾರಿಗಳು

ನೆರವಿಗೆ ಅರ್ಜಿ ಸಲ್ಲಿಸಿದವರು ಚಿಕಿತ್ಸೆ ಪಡೆದು ಕೊಂಡಿರುವ ಬಗ್ಗೆ ಹಾಗೂ ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಯ ಬಗ್ಗೆ ವಲಯ ಆರೋಗ್ಯ ವೈದ್ಯಾಧಿಕಾರಿಗಳುಸ್ಥಳಕ್ಕೆ ಭೇಟಿ ನೀಡಿ, ಮಾಹಿತಿಗಳನ್ನು ಕಲೆಹಾಕಬೇಕು. ಬಳಿಕ ಮುಖ್ಯ ಆರೋಗ್ಯಾಧಿಕಾರಿಗಳ ಮುಖೇನ ಮೇಯರ್ ಕಚೇರಿಗೆ ವರದಿ ಸಲ್ಲಿಸಬೇಕು. ಆದರೆ, ಯಾವುದೇ ಅಧಿಕಾರಿಗಳು ಅರ್ಜಿದಾರರು ನೀಡಿದ ವಿಳಾಸಕ್ಕೆ ಭೇಟಿ ನೀಡಿ, ಸತ್ಯಾಸತ್ಯತೆ ತಿಳಿದುಕೊಳ್ಳುತ್ತಿಲ್ಲ. ಬದಲಾಗಿ ಶಿಫಾರಸು ಪತ್ರಗಳನ್ನು ಪರಿಶೀಲಿಸಿ, ಅರ್ಜಿಗಳನ್ನು ಮೇಯರ್ ಕಚೇರಿಗೆ ಸಲ್ಲಿಕೆ ಮಾಡುತ್ತಿದ್ದಾರೆ.

ಮಧ್ಯವರ್ತಿಗಳ ಹಾವಳಿ

ವೈದ್ಯಕೀಯ ನೆರವು ಕೊಡಿಸುವುದಾಗಿ ಕಮಿಷನ್ ಪಡೆಯುವ ಮಧ್ಯವರ್ತಿಗಳ ಹಾವಳಿ ಹೆಚ್ಚಳವಾಗಿದೆ.ಕೆಲ ಪಾಲಿಕೆ ಸದಸ್ಯರ ಆಪ್ತರು‌ಶಿಫಾರಸು ಮಾಡುವ ಮೂಲಕ ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಪಾಲಿಕೆ ಸದಸ್ಯರ ಹೆಸರಿನಲ್ಲಿ ಅಧಿಕಾರಿಗಳಿಗೆ ಒತ್ತಡ ಹೇರಿ, ನೆರವು ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ನೆರವಿಗೆ ಪಾಲಿಕೆ ಕಚೇರಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ನರಸಿಂಹಯ್ಯ ಎನ್ನುವವರಿಗೆ ಸಂಬಂಧಿಸಿದ ಅರ್ಜಿಯಲ್ಲಿ ಹರ್ಷ ಎನ್ನುವವರು ಮೊಬೈಲ್ ನಂಬರ್ ನಮೂದಿಸಿದ್ದರು. ಅವರನ್ನು ಸಂಪರ್ಕಿಸಿದಾಗ, ‘ಹಲವರಿಗೆ ಯೋಜನೆಯಡಿ ಹಣ ಕೊಡಿಸಲಾಗಿದೆ. ಹಾಗಾಗಿ ನರಸಿಂಹಯ್ಯ ಎನ್ನುವವರು ನೆನಪಿಗೆ ಬರುತ್ತಿಲ್ಲ’ ಎಂದು ತಿಳಿಸಿದರು.

***

ಅಂಕಿ–ಅಂಶಗಳು

* 3,500 :2019–20ನೇ ಸಾಲಿನಲ್ಲಿ ನೆರವಿಗೆ ಸಲ್ಲಿಕೆಯಾಗಿರುವ ಅರ್ಜಿಗಳು

* 3,300 :ಕಳೆದ ಸಾಲಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳು

* 2,000 :ಯೋಜನೆಯಡಿ ಈ ವರ್ಷ ನೆರವು ಪಡೆದವರ ಸಂಖ್ಯೆ

* 1,300 :ಬಾಕಿ ಉಳಿದಿರುವ ಅರ್ಜಿಗಳ ಸಂಖ್ಯೆ

* ₹ 20 ಕೋಟಿ :2019–20ನೇ ಸಾಲಿನಲ್ಲಿ ಈವರೆಗೆ ನೀಡಲಾದ ನೆರವಿನ ಮೊತ್ತ

* 300:ಯೋಜನೆಯಡಿ ತಲಾ ₹ 1.5 ಲಕ್ಷಕ್ಕಿಂತ ಹೆಚ್ಚು ನೆರವು ಪಡೆದವರು

* ₹ 1.98 ಲಕ್ಷ :ಈ ವರ್ಷ ವ್ಯಕ್ತಿಗೆ ನೀಡಲಾದ ಗರಿಷ್ಠ ಮೊತ್ತ

* ₹ 10 ಸಾವಿರ :ಗಂಭೀರವಲ್ಲದ ಕಾಯಿಲೆಗಳಿಗೆ ಅನುಮೋದನೆ ನೀಡಬಹುದಾದ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT