ಬುಧವಾರ, ಡಿಸೆಂಬರ್ 1, 2021
26 °C
ಸಿಂಗಸಂದ್ರ ವಾರ್ಡ್‌ನ ನಾಲ್ಕು ಬಡವಾಣೆ ನಿವಾಸಿಗಳ ಸಂಚಾರಕ್ಕೆ ತೊಂದರೆ

ಬೆಂಗಳೂರು | ಕೆಸರುಗದ್ದೆಯಾಗಿರುವ ರಸ್ತೆ: ಪರದಾಟ

ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಸಿಂಗಸಂದ್ರ (191) ವಾರ್ಡ್‌ನ ಜಿ.ಕೆ.ಬಡಾವಣೆ, ಈರಪ್ಪರೆಡ್ಡಿ ಬಡಾವಣೆ, ವೆಂಕಟಾದ್ರಿ ಬಡಾವಣೆ, ಏಕದಂತ ಬಡಾವಣೆ ಹಾಗೂ ಸಾಯಿ ಬಡಾವಣೆಯ ನಿವಾಸಿಗಳು ಕೆಸರು ಗದ್ದೆಯಂತಾಗಿರುವ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.

ಬಡಾವಣೆಗಳ ಬಹುತೇಕ ರಸ್ತೆಗಳು ಕೆಸರುಮಯವಾಗಿದ್ದು, ಶಾಲಾ ಬಸ್‌ಗಳು, ಕಸದ ವಾಹನ, ಸಿಲಿಂಡರ್, ಆಟೋ – ಟ್ಯಾಕ್ಸಿಗಳು ಇತ್ತ ಬರುವುದನ್ನು ನಿಲ್ಲಿಸಿವೆ ಎಂದು ನಿವಾಸಿಗಳು ದೂರುತ್ತಾರೆ. ನಾಲ್ಕು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಒಂದೂವರೆ ಕಿ.ಮೀ ಉದ್ದದ 14ನೇ ಮುಖ್ಯ ರಸ್ತೆ ಪೂರ್ತಿಯಾಗಿ ಕೆಸರು ತುಂಬಿಕೊಂಡಿದ್ದು, ಕಾಲಿಡಲೂ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ನಾಲ್ಕೂ ಬಡಾವಣೆಗಳಲ್ಲಿ ಸುಮಾರು 2,600 ಕುಟುಂಬಗಳು ವಾಸವಾಗಿವೆ. ಎರಡು ಶಾಲೆಗಳು ಇವೆ. ದೊಡ್ಡ ಸಂಖ್ಯೆಯ ಜನ ಸಂಚರಿಸುವ ರಸ್ತೆಗಳು 10 ವರ್ಷಗಳಿಂದಲೂ ಡಾಂಬರನ್ನೇ ಕಂಡಿಲ್ಲ. ಇತ್ತೀಚೆಗೆ ಜಲಮಂಡಳಿಯವರು ಕಾವೇರಿ ನೀರು ಪೈಪ್ ಲೈನ್ ಹಾಕಲು ರಸ್ತೆಗಳನ್ನು ಅಗೆದಿದ್ದರು. ಇದರ ಬೆನ್ನಲ್ಲೇ, ಜಿಯೋ ಕೇಬಲ್ ಹಾಗೂ ಗ್ಯಾಸ್ ಪೈಪ್‌ಲೈನ್‌ಗಾಗಿ ರಸ್ತೆಗಳನ್ನು ಅಗೆಯಲಾಗಿತ್ತು. ಇದರಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.

110 ಹಳ್ಳಿಗಳ ಕಾವೇರಿ ಕುಡಿಯುವ ನೀರು ಪೈಪ್‌ಲೈನ್ ಅಳವಡಿಕೆಗೆ ಒಟ್ಟು 78 ಕಿ.ಮೀ ರಸ್ತೆ ನೀಡಲಾಗಿದೆ. ಆದರೆ, ಕೇವಲ 14 ಕಿ.ಮೀ ರಸ್ತೆಗಳ ದುರಸ್ತಿಗಾಗಿ ಹಣ ನೀಡಲಾಗಿದೆ. ಅಗತ್ಯವಿರುವಷ್ಟು ಅನುದಾನ ನೀಡದಿದ್ದಲ್ಲಿ ನಾವೇನು ಮಾಡಲು ಸಾಧ್ಯ? ಎಂದು ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಕಾವೇರಿ ಪೈಪ್ ಲೈನ್‌ಗಾಗಿ ರಸ್ತೆ ಅಗೆದು ಸರಿಯಾಗಿ ಮುಚ್ಚಲಿಲ್ಲ. ಕನಿಷ್ಠ ಮೆಟಲಿಂಗ್ ಮಾಡಬಹುದಿತ್ತು. ಅದನ್ನೂ ಮಾಡಲಿಲ್ಲ. ಪ್ರತಿ ಮಳೆಗಾಲದಲ್ಲೂ ರಸ್ತೆಗಳು ಇದೇ ರೀತಿ ಇರುತ್ತವೆ. 15 ವರ್ಷಗಳಿಂದಲೂ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ. ಜನ ಪ್ರಶ್ನಿಸಿದಾ‌ಗ ಜನಪ್ರತಿನಿಧಿಗಳಿಂದ ಆಶ್ವಾಸನೆ ಸಿಗುತ್ತದೆ. ನಂತರ ಅದು ಅಲ್ಲಿಗೆ ನಿಂತು ಹೋಗುತ್ತದೆ’ ಸ್ಥಳೀಯ ನಿವಾಸಿ ಬಾಬುರೆಡ್ಡಿ ದೂರಿದರು. 

‘ಕೆಲ ದಿನಗಳ ಹಿಂದೆ ರಸ್ತೆ ರಿಪೇರಿಗಾಗಿ ಗುದ್ದಲಿ ಪೂಜೆ ಮಾಡಿದ್ದರು. ಆದರೆ, ಏನಾಯಿತೋ ಗೊತ್ತಿಲ್ಲ, ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ, ಜನರ ಕಣ್ಣೊರೆಸುವ ತಂತ್ರವಾಗಿತ್ತು ಎನಿಸುತ್ತದೆ’ ಎಂದು ಸಾಯಿ ಬಡಾವಣೆಯ ನಿವಾಸಿ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ಚುನಾವಣೆಯಲ್ಲಿ ಈ ಬಡಾವಣೆಗಳಿಂದ ಹೆಚ್ಚು ಮತಗಳು ಬಂದಿಲ್ಲ ಎಂಬ ಕಾರಣ ಮುಂದೊಡ್ಡಿ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಜನಪ್ರತಿನಿಧಿಗಳಾಗಿ ಈ ರೀತಿಯ ತಾರತಮ್ಯ ಮಾಡುವುದು ಸರಿಯಲ್ಲ’ ಎಂದು ಈರಪ್ಪರೆಡ್ಡಿ ಬಡಾವಣೆಯ ನಿವಾಸಿ ಪ್ರದೀಪ್ ದೂರಿದರು.

‘110 ಹಳ್ಳಿಗಳ ರಸ್ತೆ ದುರಸ್ತಿಗಾಗಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 28 ಹಳ್ಳಿಗಳ ರಸ್ತೆ ದುರಸ್ತಿ ಹಾಗೂ ಒಳಚರಂಡಿಗಾಗಿ ₹175 ಕೋಟಿ ತೆಗೆದಿರಿಸಲಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಎಂ.ರಾಮಕೃಷ್ಣ ಹೇಳಿದರು. ಶಾಸಕ ಎಂ.ಕೃಷ್ಣಪ್ಪ ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು