ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಯೋಜನೆ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಭಾನುವಾರ ಚಾಲನೆ ನೀಡಿದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ಅತಿಹೆಚ್ಚು ವಾಹನ ದಟ್ಟಣೆ ಉಂಟಾಗುತ್ತಿದ್ದು, ಇದರ ನಿವಾರಣೆಗೆ ಮೇಲ್ಸೇತುವೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿತ್ತು. ಈ ಯೋಜನೆಯ ಮೊದಲ ಹಂತದಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯಿಂದ ಬೆಂಗಳೂರು ಕಡೆಗೆ ಮೂರು ಪಥದ (715 ಮೀ. ) ಮೇಲ್ಸೇತುವೆ ಮತ್ತು ಯಶವಂತಪುರ- ಕೆ.ಆರ್. ಪುರ ಮಾರ್ಗದಲ್ಲಿ ಮೂರು ಪಥದ ಅಂಡರ್ ಪಾಸ್ ನಿರ್ಮಾಣವಾಗಲಿದೆ.
‘ನಾನಾ ಕಾರಣಗಳಿಂದ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಯೋಜನೆ ಒಂದು ದಶಕದಿಂದ ನನೆಗುದಿಗೆ ಬಿದ್ದಿತ್ತು. ವಾಹನ ದಟ್ಟಣೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿ ಶೀಘ್ರ ಮುಗಿಸಬೇಕೆಂದು ಸೂಚನೆ ನೀಡಿ ದ್ದರು’ ಎಂದು ವಿಶ್ವನಾಥ್ ತಿಳಿಸಿದರು.
‘ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಯರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಬಿಡಿಎ ಕಾಮಗಾರಿಗೆ ಚಾಲನೆ ನೀಡಿದೆ. ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆಗೆ ಒಟ್ಟು ₹225 ಕೋಟಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಹಣವನ್ನೂ ಮಂಜೂರು ಮಾಡಲಾಗಿದೆ. ಈಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ₹87 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದರು.
‘ಈ ಹಿಂದೆ ಕಾಮಗಾರಿಗೆ 26 ತಿಂಗಳ ಕಾಲಮಿತಿಯನ್ನು ಹಾಕಲಾಗಿತ್ತು. ಆದರೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮೇಲ್ಸೇತುವೆ ವಿಸ್ತರಣೆ ಯೋಜನೆಗೆ ನಮ್ಮ ಮೆಟ್ರೊ ವಿನ್ಯಾಸವನ್ನು ಸಿದ್ಧಗೊಳಿ ಸುತ್ತಿದೆ. ಇದರಂತೆ ಮುಂದಿನ ತಿಂಗಳಾಂ ತ್ಯಕ್ಕೆ ಎರಡನೇ ಹಂತದ ಕಾಮಗಾರಿಗೂ ಚಾಲನೆ ನೀಡಲಾಗುತ್ತದೆ’ ಎಂದರು.
ಸಂಸದ ಡಿ.ವಿ.ಸದಾನಂದ ಗೌಡ, ಹೆಬ್ಬಾಳ ಶಾಸಕ ಬೈರತಿ ಸುರೇಶ್, ಬಿಡಿಎ ಆಯುಕ್ತ ಕುಮಾರ ನಾಯಕ್, ಕಾರ್ಯದರ್ಶಿ ಶಾಂತರಾಜು, ಎಂಜಿನಿಯರ್ ಸದಸ್ಯ ಶಾಂತರಾಜಣ್ಣ, ಬಿಡಿಎ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಇದ್ದರು.