ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ನಿ ಕೊಲೆ: ‘ಮೌಲ್ವಿ’ ಆಗಿದ್ದ ಸುಬ್ರಮಣಿ, 31 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ

* 1993ರಲ್ಲಿ ನಡೆದಿದ್ದ ಪ್ರಕರಣ * ಚಿಕ್ಕಮಗಳೂರು ಮಸೀದಿಯಲ್ಲಿ ವಾಸ
Published 14 ಫೆಬ್ರುವರಿ 2024, 0:30 IST
Last Updated 14 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿ ಸುಧಾ ಅವರನ್ನು ಬೆಂಕಿ ಹಚ್ಚಿ ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪತಿ ಸುಬ್ರಮಣಿ ಅಲಿಯಾಸ್ ಮೌಲ್ವಿ ಹುಸೇನ್ ಸಿಕಂದರ್ ಬಾಷಾ, 31 ವರ್ಷಗಳ ಬಳಿಕ ಹೆಬ್ಬಾಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ಹೆಬ್ಬಾಳ ನಿವಾಸಿ ಸುಬ್ರಮಣಿ, ಪತ್ನಿ ಸುಧಾ ಅವರನ್ನು 1993ರಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಚಿಕ್ಕಮಗಳೂರಿನ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಈತನನ್ನು ಇತ್ತೀಚೆಗೆ ಬಂಧಿಸಿ, ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ:

‘ಸುಬ್ರಮಣಿ ಹಾಗೂ ಸುಧಾ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕೊಲೆ ಮಾಡಲು ತೀರ್ಮಾನಿಸಿದ್ದ ಸುಬ್ರಮಣಿ, ಸುಧಾ ಅವರ ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ತೀವ್ರ ಗಾಯಗೊಂಡು ಸುಧಾ ಮೃತಪಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೊಲೆ ಪ್ರಕರಣ ದಾಖಲಿಸಿ ಆರೋಪಿ ಸುಬ್ರಮಣಿಯನ್ನು ಬಂಧಿಸಲಾಗಿತ್ತು. ಕೆಲದಿನದ ನಂತರ ಈತ, ಜಾಮೀನು ಮೇಲೆ ಹೊರಗೆ ಬಂದಿದ್ದ. ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ. ಈತನ ಬಂಧನಕ್ಕಾಗಿ ಜಾಮೀನು ರಹಿತ ವಾರಂಟ್ ಸಹ ಜಾರಿಯಾಗಿದ್ದವು’ ಎಂದು ಹೇಳಿವೆ.

ಕೇರಳಕ್ಕೆ ಸ್ಥಳಾಂತರ, ಮುಸ್ಲಿಂ ಹೆಸರು: ‘ಬೆಂಗಳೂರು ತೊರೆದು ಕೇರಳಕ್ಕೆ ಹೋಗಿದ್ದ ಸುಬ್ರಮಣಿ, ಅಲ್ಲಿಯೇ ಸಣ್ಣ–ಪುಟ್ಟ ಕೆಲಸ ಮಾಡಿ ಕೊಂಡಿದ್ದ. ಪೊಲೀಸರು ತನ್ನನ್ನು ಬಂಧಿಸಬಹುದೆಂಬ ಭೀತಿ ಆರೋಪಿ
ಗಿತ್ತು. ಹೀಗಾಗಿ, ಸುಬ್ರಮಣಿ ತನ್ನ ಹೆಸರನ್ನು ಹುಸೇನ್ ಸಿಕಂದರ್ ಬಾಷಾ ಎಂಬುದಾಗಿ ಬದಲಾಯಿಸಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತಾನೊಬ್ಬ ಮುಸ್ಲಿಂ ಎಂಬುದಾಗಿ ಹೇಳಿ ಸ್ಥಳೀಯರ ಜೊತೆ ಒಡನಾಟ ಬೆಳೆಸಿದ್ದ. ಮುಸ್ಲಿಂ ಧಾರ್ಮಿಕ ಆಚರಣೆ ಬಗ್ಗೆ ತಿಳಿದುಕೊಂಡು, ಪಾಲಿಸುತ್ತಿದ್ದ. ಈತ ಹಿಂದೂ ಎಂಬ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ’ ಎಂದು ಮೂಲಗಳು ಹೇಳಿವೆ.

ಚಿಕ್ಕಮಗಳೂರು ಮಸೀದಿಯಲ್ಲಿ ವಾಸ:

‘ಕೇರಳದಿಂದ ಚಿಕ್ಕಮಗಳೂರಿಗೆ ಬಂದಿದ್ದ ಈತ, ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ. ಮಸೀದಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ಈತನ ಇರುವಿಕೆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಚಿಕ್ಕಮಗಳೂರಿಗೆ ಹೋಗಿದ್ದ ವಿಶೇಷ ತಂಡ, ಹಲವು ದಿನಗಳವರೆಗೆ ಆರೋಪಿ ಮೇಲೆ ನಿಗಾ ವಹಿಸಿತ್ತು’ ಎಂದು ಮೂಲಗಳು ಹೇಳಿವೆ.

‘ಮೌಲ್ವಿ ಆಗಿರುವ ವ್ಯಕ್ತಿಯೇ ಸುಬ್ರಮಣಿ ಎಂಬುದಕ್ಕೆ ಕೆಲ ಸುಳಿವುಗಳು ಸಿಕ್ಕಿದ್ದವು. ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT