ಶುಕ್ರವಾರ, ಏಪ್ರಿಲ್ 23, 2021
23 °C
ಹೆಬ್ಬಾಳ

ಫ್ಲೈಓವರ್‌ ಕೆಳಗೊಂದು ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ಬಾಳ ಫ್ಲೈಓವರ್‌ ಕೆಳಗೊಂದು ಹೊಸ ಮಾರುಕಟ್ಟೆಯೇ ಸೃಷ್ಟಿಯಾಗಿದೆ. ಅನಾಯಾಸವಾಗಿ ಸಿಗುವ ಜಾಗ. ಹಲವು ಪಿಲ್ಲರ್‌ಗಳ ಮೇಲೆ ಉದ್ದಕ್ಕೆ ಮಲಗಿದಂತಿರುವ ಬೃಹತ್‌ ರಸ್ತೆ ಕೆಳಗಡೆ ವಿಶಾಲ ಖಾಲಿ ಪ್ರದೇಶವೇ ರೂಪುಗೊಂಡಿದೆ. ಬಿಎಂಟಿಸಿ ಬಸ್‌, ಆಟೊ, ಒಮ್ಮೊಮ್ಮೆ ಲಾರಿಗಳು, ತಳ್ಳು ಗಾಡಿಗಳು ನಿಲ್ಲುವುದಕ್ಕೆ ಪ್ರಶಸ್ತ ಜಾಗ ಎನ್ನುವಂತೆ!

ಅಲ್ಲಲ್ಲಿ ಸಿಗುವ ಪುಟ್ಟ ಜಾಗೆಯಲ್ಲಿ ಪೆಟ್ಟಿ ಅಂಗಡಿ, ಸೈಕಲ್‌ ಮೇಲೆ ಟೀ ಮಾರುವವರು, ಹಣ್ಣು, ಹೂ, ಕಾಯಿ ಮಾರುವ ಹೆಂಗಸರು ಹೀಗೆ ಏನೆಲ್ಲ ಅವತಾರಗಳಲ್ಲಿ ವ್ಯಾಪಾರಸ್ಥರು ಕಾಣ ಸಿಗುತ್ತಾರೆ. ಈಗ ಅಲ್ಲಿ ಏನು ಸಿಗಲ್ಲ ಹೇಳಿ? ಎಲ್ಲ ಬೆಗೆಯ ತರಕಾರಿ, ಸೊಪ್ಪು, ಹಣ್ಣುಗಳು, ಅಗ್ಗದ ಮೊಬೈಲ್‌ಗಳು, ಮೊಬೈಲ್‌ ಬಿಡಿ ಭಾಗಗಳು, ಚಾರ್ಜಿಂಗ್‌ ಬ್ಯಾಟರಿಗಳು ಮಾರಾಟವಾಗುತ್ತಿವೆ. ಬಟ್ಟೆ ಬೇಕು ಅಂದರೆ ಬರ್ಮುಡಾ, ಚಡ್ಡಿ, ಬನಿಯನ್‌, ನೈಟಿ, ಕರ್ಚೀಫು.. ಇಷ್ಟೇ ಅಲ್ಲ ಫಾಸ್ಟ್‌ ಫುಡ್‌, ಹೋಟೆಲ್‌, ಟೀ ಅಂಗಡಿ, ಎಗ್‌ ರೈಸ್‌, ಮಿರ್ಚಿ ಪಕೋಡ, ಪಡ್ಡು, ದೋಸೆ, ಚಾಟ್ಸ್‌, ಕಡಲೆ ಬೀಜದ ತಳ್ಳುಗಾಡಿ. ಕಬ್ಬಿನ ಹಾಲು ಅಂಗಡಿ, ಬೇಕರಿ...

ಇದೇ ಫ್ಲೈಓವರ್‌ ಕೆಳಗೆ ರೈಲ್ವೆ ಕ್ರಾಸಿಂಗ್‌ ಇದೆ. ಫ್ಲೈಓವರ್‌ ನಿರ್ಮಾಣದ ನಂತರ ಇದರ ಸುತ್ತ ಕಬ್ಬಿಣದ ಪಟ್ಟಿಗಳಿಂದ ಬೇಲಿ ಹಾಕಲಾಗಿದೆ. ಬೇಲಿಯೊಳಗಿಂದ ಸುಲಭಕ್ಕೆ ತೂರಿಕೊಂಡು ಅತ್ತ ಇತ್ತ ದಾಟಬಹುದು. ಇನ್ನು ಸ್ವಲ್ಪ ದೂರದಲ್ಲಿ ಅಂಥ ಬೇಲಿಯೂ ಇಲ್ಲ. ಸರಾಗವಾಗಿ ಹಳಿಗಳ ಮೇಲಿಂದ ಸಾಗಿ ಬರಬಹುದು. ಈಗೀಗ ಇಲ್ಲಿಂದ ಹಲವು ಲಾಂಗ್‌ ರೂಟ್‌ ಟ್ರೈನ್‌ಗಳು ದಾಂಗುಡಿ ಇಡುತ್ತಲೇ ಇರುತ್ತವೆ. ಹೀಗಾಗಿ ಹಳಿ ದಾಟುವುದು ಅಸುರಕ್ಷಿತ. ಇದಕ್ಕೆ ಯಾವುದೇ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟವರಿಗೆ ಈತನಕ ಸಾಧ್ಯವಾಗಿಲ್ಲ. ಹೆಬ್ಬಾಳ, ಭೂಪಸಂದ್ರ, ಗಂಗೇನಹಳ್ಳಿ, ಆರ್‌ಟಿ ನಗರ, ಸಂಜಯನಗರ ಸುತ್ತಮುತ್ತಲಿನ ಜನರಿಗೆ ಈ ಹಳಿ ದಾಟುವುದು ಅನಿವಾರ್ಯ. ರಿಂಗ್‌ ರಸ್ತೆಯ ಸುತ್ತ ಹಬ್ಬಿಕೊಂಡಿರುವ ಐಟಿಬಿಟಿ ಮತ್ತಿತರ ಉದ್ಯಮಗಳಿವೆ. ಅಲ್ಲಿ ಕೆಲಸಕ್ಕೆ ಹೋಗುವ ನೌಕರರು, ಕಾರ್ಮಿಕರು ಬಿಎಂಟಿಸಿ ಬಸ್‌, ಟ್ಯಾಕ್ಸಿಗೆ ಈ ರೈಲ್ವೆ ಕ್ರಾಸಿಂಗ್‌ ದಾಟಿಕೊಂಡು ಅತ್ತಿಂದಿತ್ತ ಓಡಾಡಲೇಬೇಕು. ಒಂದೊಮ್ಮೆ ಇದನ್ನು ಮುಚ್ಚಿದರೆ ಸಂಪರ್ಕ ಸೇತು ಬಂದ್‌ ಆದ ಹಾಗೆ. ಮನುಷ್ಯರ ಓಡಾಟ, ಒಡನಾಟ ಈ ಹಳಿಗಳನ್ನು ದಾಟುವುದರ ಮೇಲೆ ಅವಲಂಬಿತವಾಗಿದೆ. ಅಷ್ಟರಮಟ್ಟಿಗೆ ಇದೊಂದು ತರಹದ ಅನಿವಾರ್ಯತೆ. 

ಆದರೆ, ರೈಲು ಹಳಿಗಳ ಇಕ್ಕೆಲಗಳ ಪುಟ್ಟ ಬೇಲಿಯ ಸುತ್ತ ಏನೆಲ್ಲ ಇದೆ! ಹಳಿಯ ಇಕ್ಕೆಲಗಳಲ್ಲಿ ತರಹೇವಾರಿ ವ್ಯಾಪಾರ ಇದೆ. ರೈಲು ಸಾಗುವ ಹಳಿಗೆ ಕೆಲವೇ ಅಡಿ ದೂರದಲ್ಲಿ ಹೆಂಗಸರು, ಯುವಕರಾದಿಯಾಗಿ ಏನೇನೋ ವಸ್ತುಗಳನ್ನು ಹರವಿಕೊಂಡು ವ್ಯಾಪಾರಕ್ಕೆ ಕುಳಿತುಕೊಳ್ಳುತ್ತಾರೆ. ಅಲ್ಲಿ ಏನೇನೋ ಮಾರಾಟ ಮಾಡುತ್ತಾರೆ. ಒಂದು ಟ್ಯಾಟೂ ಹಾಕುವ ಅಂಗಡಿಯೂ ಇದೆ. ಮ್ಯೂಸಿಕ್‌ ಹಾಕಿಕೊಂಡು ತರಹೇವಾರಿ ಡಿಸೈನ್‌ಗಳನ್ನು ಹರವಿ ಒಂದಷ್ಟು ಯುವಕರು ಯುವತಿಯರಿಗೆ ಟ್ಯಾಟೂ ಹಾಕುತ್ತ ಒಳ್ಳೆಯ ಕಮಾಯಿ ಮಾಡುತ್ತಿರುತ್ತಾರೆ. ಅವರಿಗೆಲ್ಲ ಅಣತಿ ದೂರದಲ್ಲೇ ಹಳಿಯ ಮೇಲೆ ರೈಲು ಸಾಗುವುದರ ಪರಿವೆಯೂ ಇರುವುದಿಲ್ಲ!

ಫ್ಲೈಓವರ್‌ ಕೆಳಗಿನ ಮತ್ತೊಂದೆಡೆ ಒಂದು ಪಾರ್ಕಿಂಗ್‌ ಲೋಕವೇ ಸೃಷ್ಟಿಯಾಗಿದೆ. ಇದಕ್ಕೆ ಅನುಮತಿ ಇದೆಯೋ ಇಲ್ಲವೋ? ಅನುಮಾನ ಕಾಡಿ ವಿಚಾರಿಸಿದರೆ ಯಾವ ಮಾಹಿತಿಯೂ ಲಭ್ಯವಾಗುವುದಿಲ್ಲ. ಹಳಿಯ ಈಚೆಗಿನ ಪ್ರದೇಶದಲ್ಲೂ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ನಾಗಶೆಟ್ಟಿಹಳ್ಳಿ, ಭೂಪಸಂದ್ರ ಮತ್ತು ಹೆಬ್ಬಾಳವನ್ನು ಪರಸ್ಪರ ಸಂಪರ್ಕಿಸುವ ರಸ್ತೆ ಸದಾ ಗಿಜಿ ಗಿಜಿ. ರಸ್ತೆಗೆ ಹೊಂದಿಕೊಂಡಂತೆ ಫ್ಲೈಓವರ್‌ ಕೆಳಗಿನ ಜಾಗದಲ್ಲಿ ಇದೀಗ ಇಂಟರ್‌ಲಾಕ್‌ ಟೈಲ್ಸ್‌ನಿಂದ ಅಂದವಾದ ನೆಲಹಾಸುಗೆ ರೂಪಿಸಿದ ಸಣ್ಣ ಪಾರ್ಕ್‌ ಇದೆ. ಕೂರಲು ಅಲ್ಲಲ್ಲಿ ಬೆಂಚ್‌ಗಳಿರುವುದರಿಂದ ರಿಲ್ಯಾಕ್ಸ್‌ ತಾಣ ಎನ್ನುವ ಫೀಲ್‌ ಕಟ್ಟಿಕೊಡುತ್ತದೆ. ಚಿಂದಿ ಆಯುವವರು, ಮತ್ತು ನಿರ್ಗತಿಕರಿಗೆ ಆಶ್ರಯತಾಣದಂತೆಯೂ ಇದೆ. ಆದರೆ, ಪಾರ್ಕ್‌ನಲ್ಲಿ ಅಕ್ಕಪಕ್ಕದವರು ಎಸೆದ ಕಸದ ದೊಡ್ಡ ರಾಶಿಯಿಂದಾಗಿ ಗಬ್ಬು ವಾಸನೆ! ಇದೀಗ ಕಸದ ಬೃಹತ್‌ ತೊಟ್ಟಿಯಾಗುವ ಅಪಾಯವೂ ಇದೆ.

ಮೇಖ್ರಿ ಸರ್ಕಲ್‌ ಕಡೆಯಿಂದ ಫ್ಲೈಓವರ್‌ ಅನ್ನು ಸೇರುವ ರಸ್ತೆಯ ಒಂದು ಬದಿಯಲ್ಲಿ ಸಿಕ್ಕ ಒಂದಷ್ಟು ಜಾಗ ಈಗ ಪಾರ್ಕಿಂಗ್‌ ತಾಣ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಮಾಡಿದ ಕೆಲವು ಎಡವಟ್ಟುಗಳಿಂದಾಗಿ ಬಿಟ್ಟಿ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಟ್ಟಂತಿದೆ. ಫ್ಲೈಓವರ್‌ ಅಕ್ಕಪಕ್ಕದ ರಸ್ತೆ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಸೂಕ್ತವಾಗಿ ನಡೆಸದೇ ಇರುವುದರಿಂದ ಸಿಕ್ಕ ಸ್ವಲ್ಪ ಜಾಗೆಯಲ್ಲೇ ತಳ್ಳುಗಾಡಿಗಳು, ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಾಗಿದೆ. ಇರುವ ಪುಟ್ಟ ರಸ್ತೆಯಲ್ಲಿ ಕೆಲವರು ತಮ್ಮ ವ್ಯಾಪಾರ ಜಾಲವನ್ನು ಹಬ್ಬಿಸಿಕೊಂಡಿದ್ದರಿಂದ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಯಾವ ಉದ್ದೇಶಕ್ಕಾಗಿ ಫ್ಲೈಓವರ್‌ ನಿರ್ಮಾಣಗೊಂಡಿತೊ ಅದನ್ನು ಅಣಕಿಸುವಂತಿರುವ ಅದ್ವಾನ ವ್ಯವಸ್ಥೆ ಇದು.

ರಾತ್ರಿಯಿಡೀ ಈ ರೈಲ್ವೆ ಕ್ರಾಸಿಂಗ್‌ ಬಳಿ ಜನರ ಓಡಾಟವಿರುತ್ತದೆ. ರಿಂಗ್‌ ರಸ್ತೆಯ ಉದ್ದಕ್ಕೂ ಇರುವ ಐಟಿ, ಬಿಟಿ ಉದ್ಯಮಗಳಿಗೆ ಕೆಲಸಕ್ಕೆ ಹೋಗುವ ಹೆಬ್ಬಾಳ, ನಾಗಶೆಟ್ಟಿಹಳ್ಳಿ, ಸಂಜಯನಗರ, ಗಂಗಾನಗರದ ಸುತ್ತಲಿನ ನಿವಾಸಿಗಳಿಗೆ ಇದೇ ಸಂಪರ್ಕ ಸೇತುವಾದ್ದರಿಂದ ಓಡಾಟ ಅನಿವಾರ್ಯ. ಕಳ್ಳ, ಕದೀಮರಿಗೂ ಇಲ್ಲಿ ವಿಪುಲ ಅವಕಾಶಗಳಿವೆ. ಹೆಣ್ಣು ಮಕ್ಕಳು, ವೃದ್ಧರು, ದುರ್ಬಲರನ್ನು ಸಲೀಸಾಗಿ ಶೋಷಣೆ ಮಾಡುವುದಕ್ಕೆ ಇಲ್ಲಿ ಅವಕಾಶ ನೀಡಿದಂತಾಗಿದೆ. ಪೊಲೀಸ್‌ ಆಗಲಿ ಅಥವಾ ಇನ್ನಾವುದೇ ಗಾರ್ಡ್‌ ವ್ಯವಸ್ಥೆಯಾಗಲಿ ಇಲ್ಲಿ ಕಾಣಿಸುವುದಿಲ್ಲ. ಅದಕ್ಕೂ ಮುಖ್ಯವಾಗಿ ಇಲ್ಲಿ ಪೂರಕ ಬೆಳಕಿನ ವ್ಯವಸ್ಥೆಯೂ ಇಲ್ಲ.

ಫ್ಲೈಓವರ್‌ ಕೆಳಗಿನ ರಸ್ತೆಯ ಟ್ರಾಫಿಕ್‌ ವ್ಯವಸ್ಥೆಯಂತೂ ಇನ್ನೂ ಅದ್ವಾನ. ಟ್ರಾಫಿಕ್‌ ಪೊಲೀಸರ ನಿರ್ಲಕ್ಷ್ಯಕ್ಕೆ ಅತ್ಯಂತ ಸೂಕ್ತ ನಿದರ್ಶನ ಇದು ಎಂದರೂ ಅಡ್ಡಿ ಇಲ್ಲ. ರಸ್ತೆ ದಾಟಲು ಸುರಕ್ಷಿತ ಮಾರ್ಗ ಇಲ್ಲವಾದ್ದರಿಂದ ಜನರ ಪ್ರಾಣಕ್ಕೆ ಅಪಾಯ. ಸ್ಕೈವಾಕ್‌ ಅಥವಾ ಅಂಡರ್‌ಪಾಸ್‌ನಂಥ ವ್ಯವಸ್ಥೆ ಮಾಡಿದ್ದರೆ ಚೆನ್ನಿತ್ತು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಇಲ್ಲಿ  ಆಗಾಗ ಪೊಲೀಸ್‌ ಬೀಟ್‌ ಇದ್ದರೆ ಜನರಲ್ಲಿ ಸುರಕ್ಷಾ ಭಾವ ಮೂಡಿಸಿದಂತಾಗುವುದಿಲ್ಲವೇ? ಸ್ಕೈವಾಕ್‌ ಅಥವಾ ಅಂಡರ್‌ಪಾಸ್‌ ಇದ್ದಿದ್ದರೆ ಸರಾಗ ಓಡಾಟಕ್ಕೆ ಅನುಕೂಲವಾಗುತ್ತಿರಲಿಲ್ಲವೇ? ಪೊಲೀಸ್‌, ಬಿಬಿಎಂಪಿ ಈ ಬಗ್ಗೆ ಯಾಕೆ ಗಂಭೀರವಾಗಿ ಯೋಚಿಸುವುದಿಲ್ಲ? ಈಗಿರುವ ಸ್ಥಿತಿಯನ್ನು ಹಾಗೆಯೇ ಮುಂದುವರಿಯಲು ಬಿಟ್ಟರೆ ಮುಂದೊಂದು ದಿನ ಇದು ಬಗೆಹರಿಸಲಾಗದ ದೊಡ್ಡ ಸಮಸ್ಯೆಯಾಗಿ ಉಳಿಯುವುದರಲ್ಲಿ ಅನುಮಾನವೇ ಇಲ್ಲ. ಅಷ್ಟಕ್ಕೂ ಇದೆಲ್ಲ ಮಾನವೀಯ ದೃಷ್ಟಿಯಿಂದ ಸುಲಭಕ್ಕೆ ಆಗಬೇಕಾದ ವ್ಯವಸ್ಥೆ ಎನ್ನುವ ಜನದನಿಯನ್ನು ಆಲಿಸದೇ ವ್ಯವಸ್ಥೆಗೆ ಬೇರೆ ದಾರಿ ಇಲ್ಲ! 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು