ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ಮರಗಳ ನಡುವೆ ನಡಿಗೆ

ಕಬ್ಬನ್‌ ಉದ್ಯಾನದ ಮರಗಳ ಹಿರಿಮೆಗೆ ಬೆರಗಾದ ಯುವಜನತೆ
Last Updated 6 ಫೆಬ್ರುವರಿ 2021, 18:56 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ನಿತ್ಯವೂ ಸಾವಿರಾರು ಮಂದಿ ವಿಹಾರಕ್ಕೆ ಬರುತ್ತಾರೆ. ಆದರೆ, ಇಲ್ಲಿ 150ಕ್ಕೂ ವರ್ಷಗಳಿಗೂ ಹಳೆಯ ಪಾರಂಪರಿಕ ಮರಗಳಿರುವುದನ್ನು ಬಹುತೇಕರು ಗಮನಿಸಿರಲಿಕ್ಕಿಲ್ಲ. ಇಲ್ಲಿರುವ ಪಾರಂಪರಿಕ ಮರಗಳ ಬಗ್ಗೆ ತಿಳಿಯುವ ಅವಕಾಶ ಯುವಜನರ ಪಾಲಿಗೆ ಶನಿವಾರ ಒದಗಿಬಂದಿತ್ತು,

‘ಹೆರಿಟೇಜ್‌ ಬೇಕು’ ಸಂಘಟನೆಯು ತೋಟಗಾರಿಕಾ ಇಲಾಖೆ ಜೊತೆ ಸೇರಿ ಕಬ್ಬನ್ ಉದ್ಯಾನದಲ್ಲಿ ಏರ್ಪಡಿಸಿದ್ದ ‘ಪಾರಂಪರಿಕ ಮರಗಳ ನಡುವೆ ನಡಿಗೆ’ ಕಾರ್ಯಕ್ರಮ ಇದಕ್ಕೆ ಅವಕಾಶ ಕಲ್ಪಿಸಿತು.

ಚುಮು ಚುಮು ಚಳಿ ಕಳೆಯುವ ಮುನ್ನವೇ ಉತ್ಸಾಹಿ ಯುವಕ ಯುವತಿಯರ ನಡುವೆ ಉದ್ಯಾನದಲ್ಲಿ ಮುಂಜಾನೆ ಹೆಜ್ಜೆ ಹಾಕುತ್ತಾ ಸಾಗಿದ ನಿಸರ್ಗಪ್ರೇಮಿ ಕಾವ್ಯಾ ಚಂದ್ರ ಅವರು ಜೀವಿ ಪರಿಸರ ವ್ಯವಸ್ಥೆಯಲ್ಲಿ ಈ ಉದ್ಯಾನದ ಮರಗಳ ಮಹತ್ವವೇನು, ಅವು ಎಷ್ಟು ಹಳೆಯವು, ಅವುಗಳಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

‘ಈ ಉದ್ಯಾನದಲ್ಲಿ 8 ಸಾವಿರಕ್ಕೂ ಅಧಿಕ ಮರಗಳಿವೆ. 150 ಅಧಿಕ ಪಾರಂಪರಿಕ ಪ್ರಭೇದಗಳ ಆಗರವಿದು. ಇಂತಹ 300ಕ್ಕೂ ಹೆಚ್ಚು ಮರಗಳು ಇಲ್ಲಿವೆ’ ಎಂದರು.

ಆಲದ ಮರದ ಕುರಿತು ವಿವರಿಸಿದ ಅವರು, ‘ಈ ಮರವೊಂದೇ 100ಕ್ಕೂ ಹೆಚ್ಚು ಪ್ರಭೇದಗಳ ಹಕ್ಕಿಗಳಿಗೆ ಆಹಾರ–ಆಶ್ರಯ ಕಲ್ಪಿಸುತ್ತದೆ. ಈ ಮರವೇ ಒಂದು ಜೈವಿಕ ವ್ಯವಸ್ಥೆ ಇದ್ದಂತೆ’ ಎಂದು ಬಣ್ಣಿಸಿದರು.

150 ವರ್ಷಗಳಷ್ಟು ಹಳೆಯದಾದ ಗುಲ್‌ಮೊಹರ್‌, ಮಳೆ ಮರ, ನೇರಳೆ ಹಣ್ಣಿನ ಮರ, ನೀಲಗಿರಿ, ಆಫ್ರಿಕನ್‌ ಟ್ಯುಲಿಪ್‌ ವೃಕ್ಷಗಳ ಬಗ್ಗೆ ಅವರು ವಿವರಿಸುವಾಗ ಯುವಕ ಯುವತಿಯರು ಕಣ್ಣೆವೆ ಇಕ್ಕದೆ ಕುತೂಹಲದಿಂದ ಆಲಿಸಿದರು.

ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಹಾಗೂ ಕಬ್ಬನ್‌ ಉದ್ಯಾನದ ಉಪ ನಿರ್ದೇಶಕ ಬಾಲಕೃಷ್ಣ ಭಾಗವಹಿಸಿದರು.

***

ಈ ನಗರದ ಪಾರಂಪರಿಕ ವಿಚಾರಗಳ ಬಗ್ಗೆಯೇ ಅರಿವಿಲ್ಲದಿದ್ದರೆ ನಾವು ಈ ನಗರವನ್ನು ಪ್ರೀತಿಸುವುದಾದರೂ ಹೇಗೆ. ಈ ನಗರದ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟೂ ಇದು ನಮಗೆ ಮತ್ತಷ್ಟು ಆಪ್ತವಾಗುತ್ತದೆ

–ಪ್ರಿಯಾಚೆಟ್ಟಿ ರಾಜಗೋಪಾಲ್‌, ಹೆರಿಟೇಜ್‌ ಬೇಕು, ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT