ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ವಿವರಣೆ ಕೇಳಿದ ಹೈಕೋರ್ಟ್‌

ತುಳಸಿ ಮುನಿರಾಜುಗೌಡ ಅನರ್ಹತೆಗೆ ನೋಟಿಸ್ ನೀಡಿದ್ದ ಆಯೋಗ
Last Updated 20 ಫೆಬ್ರುವರಿ 2020, 22:42 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣಾ ಆಯೋಗಕ್ಕೆ ಆಸ್ತಿ ತೆರಿಗೆ ವಿವರಗಳನ್ನು ಸಮರ್ಪಕವಾಗಿ ಸಲ್ಲಿಸಿಲ್ಲ ಎಂಬ ಆರೋಪದ ಮೇರೆಗೆ ನಿಮ್ಮನ್ನು ಯಾಕೆ ಮೂರು ವರ್ಷಗಳ ಕಾಲ ಅನರ್ಹಗೊಳಿಸಬಾರದು ಎಂದು ಕೇಂದ್ರ ಚುನಾವಣಾ ಆಯೋಗ ನೀಡಿದ್ದ ನೋಟಿಸ್‌ ಮತ್ತು ಈ ಕುರಿತ ಪ್ರಕ್ರಿಯೆ ಬಗ್ಗೆ ಸೂಕ್ತ ವಿವರಣೆ ನೀಡಿ’ ಎಂದು ಹೈಕೋರ್ಟ್‌, ತುಳಸಿ ಮುನಿರಾಜುಗೌಡ ಮತ್ತು ಮುನಿರತ್ನ ಅವರಿಗೆ ನಿರ್ದೇಶಿಸಿದೆ.

‘ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ 15ನೇ ವಿಧಾನಸಭೆಗೆ ಆಯ್ಕೆಯಾದ ಮುನಿರತ್ನ (ಅನರ್ಹ ಶಾಸಕ) ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿ ನನ್ನನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು’ ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ತುಳಸಿ ಮುನಿರಾಜುಗೌಡ ಪರ ಹಿರಿಯ ವಕೀಲ ಎಸ್‌.ವಿಜಯಶಂಕರ್‌ ಅವರು, ‘2014ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತುಳಸಿ ಮುನಿರಾಜುಗೌಡ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ವೇಳೆ ಅವರು ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ ತೆರಿಗೆ ವಿವರವನ್ನು ಸರಿಯಾಗಿ ನೀಡಿಲ್ಲ ಎಂದು ಮುನಿರತ್ನ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು’ ಎಂದು ನ್ಯಾಯಪೀಠದ ಗಮನ ಸೆಳೆದರು.

‘ಪ್ರತಿವಾದಿಗಳಾದ ಮುನಿರತ್ನ ಅವರೇ ಈ ಅಂಶವನ್ನು ಮೂಲ ದಾವೆ ಮತ್ತು ಮಧ್ಯಂತರ ಅರ್ಜಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ಅಂಶಇತ್ಯರ್ಥವಾಗುವತನಕ ಮೂಲದಾವೆಯ ಮೇಲಿನ ವಿಚಾರಣೆ ಬೇಡ’ ಎಂದುಪ್ರತಿಪಾದಿಸಿದರು.ಇದಕ್ಕೆ ಮುನಿರತ್ನ ಪರ ಹಾಜರಿದ್ದ ಹಿರಿಯ ವಕೀಲರಾದ ಅಶೋಕ ಹಾರನಹಳ್ಳಿ ಮತ್ತು ಡಿ.ಎನ್‌.ನಂಜುಂಡರೆಡ್ಡಿ, ‘ಈ ಅಂಶದ ಮೇಲಿನ ದಾಖಲೆಗಳನ್ನು ಮತ್ತೊಮ್ಮೆ ಪರಾಮರ್ಶಿಸಿ ಕೋರ್ಟ್‌ಗೆ ವಿವರಿಸುತ್ತೇವೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇದೊಂದು ಅತ್ಯಂತ ಸೂಕ್ಷ್ಮ ಅರ್ಜಿಯಾಗಿ ಪರಿಣಮಿಸಿದೆ. ಹಾಗಾಗಿ ಈ ವಿಚಾರಣೆಯಲ್ಲಿ ನೀವು ಈ ಯಾವುದೇ ವಿವರಣೆ ಬಗ್ಗೆ ಮೆಮೊ ಸಲ್ಲಿಸುವ ಬದಲು ಅರ್ಜಿಯನ್ನೇ ಸಲ್ಲಿಸಿ’ ಎಂದು ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕಾಲತ್ತು ವಹಿಸಿರುವ ಎಂ.ಶಿವಪ್ರಕಾಶ್‌, ‘ತುಳಸಿ ಮುನಿರಾಜುಗೌಡ ಅವರಿಗೆ 2019ರ ಜನವರಿ 9ರಂದು ಚುನಾವಣಾ ಆಯೋಗ ಜನಪ್ರತಿನಿಧಿಗಳ ಕಾಯ್ದೆ ಕಲಂ 10ರ ಅನುಸಾರ ನೋಟಿಸ್ ನೀಡಿತ್ತು. ಅಂತೆಯೇ ನೋಟಿಸ್‌ ಅನ್ನು 2019ರ ಅಕ್ಟೋಬರ್ 17ರಂದು ವಿಲೇವಾರಿ ಮಾಡಿತ್ತು’ ಎಂದು ವಿವರಿಸಿದರು.

‘ಚುನಾವಣಾ ಭ್ರಷ್ಟಾಚಾರ ಎಸಗಿರುವ ಮುನಿರತ್ನ ಅವರ ಆಯ್ಕೆ ಜನಪ್ರತಿನಿಧಿಗಳ ಕಾಯ್ದೆ–1951ರ ಕಲಂ 123ಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು’ ಎಂಬುದು ಅರ್ಜಿದಾರರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT