ಗುರುವಾರ , ಜೂನ್ 30, 2022
26 °C

ಕೈಗಾರಿಕಾ ಭೂಮಿ ಅನ್ಯ ಉದ್ದೇಶಕ್ಕೆ ಬಳಸಲು ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆ.ಆರ್‌.ಪುರದ ದೊಡ್ಡನೆಕುಂದಿ ಬಳಿಯ ಕೈಗಾರಿಕಾ ಭೂಮಿಯನ್ನು ಗ್ರ್ಯಾಫೈಟ್ ಇಂಡಿಯಾ ಲಿಮಿಟೆಡ್ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನೀಡಿರುವ 41 ಎಕರೆಯನ್ನು ರಿಯಲ್ ಎಸ್ಟೇಟ್‌ ಲಾಭಕ್ಕೆ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿ ವಕೀಲ ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

‘ದೊಡ್ಡನೆಕುಂದಿ ಕೈಗಾರಿಕಾ ಪ್ರದೇಶದಲ್ಲಿ 1972ರಲ್ಲಿ ಈ ಕಂಪನಿಗೆ ₹5 ಲಕ್ಷಕ್ಕೆ ನೀಡಲಾಗಿದೆ. ಈ ಜಾಗದಲ್ಲಿ ಉದ್ಯಮವನ್ನು ಈ ಕಂಪನಿ 1980ರಿಂದ 2020ರ ತನಕ ನಿರ್ವಹಿಸಿತ್ತು. ಈ ನಡುವೆ, 2006ರಲ್ಲಿ 15 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಡೆವಲಪರ್‌ಗೆ ಸರ್ಕಾರದ ಅನುಮೋದನೆ ಇಲ್ಲದೆ ಮಾರಾಟ ಮಾಡಿದೆ’ ಎಂದು ಅರ್ಜಿದಾರರು ದೂರಿದ್ದಾರೆ. 

ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಇಡೀ ಕೈಗಾರಿಕೆಯ ಕಾರ್ಯಾಚರಣೆ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ) 2019ರ ಫೆಬ್ರುವರಿಯಲ್ಲಿ ನಿರ್ದೇಶನ ನೀಡಿತ್ತು. 2019ರ ಏಪ್ರಿಲ್‌ನಲ್ಲಿ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಆದೇಶ ಅನುಸರಿಸಿ ಕಂಪನಿಯ ಕಾರ್ಯಾಚರಣೆ ಸಂಪೂರ್ಣ ಮುಚ್ಚಲ್ಪಟ್ಟಿದೆ.

‘ಈ ಉಳಿಕೆ ಭೂಮಿಯನ್ನೂ ರಿಯಲ್ ಎಸ್ಟೇಟ್‌ ಉದ್ಯಮಿಗಳಿಗೆ ₹900 ಕೋಟಿಗೆ ಮಾರಾಟ ಮಾಡಲು ಕಂಪನಿ ಪ್ರಯತ್ನಿಸುತ್ತಿದೆ. ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು