ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಜಿನಗರ: ಉದ್ಯಾನದಲ್ಲಿ ಈಜುಕೊಳ, ಜಿಮ್ ನಿರ್ಮಿಸದಂತೆ ಹೈಕೋರ್ಟ್ ತಡೆ

Last Updated 14 ಜುಲೈ 2022, 5:57 IST
ಅಕ್ಷರ ಗಾತ್ರ

ಬೆಂಗಳೂರು:'ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಕಾಶ್ ನಗರದ ವಾರ್ಡ್ ಸಂಖ್ಯೆ 98ರ ಗಾಯತ್ರಿ ಪಾರ್ಕ್‌ನಲ್ಲಿ ಈಜುಕೊಳ, ಮಲ್ಟಿ ಜಿಮ್ ನಿರ್ಮಾಣ ಮಾಡಬಾರದು' ಎಂದು ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ಬಂಧ ವಿಧಿಸಿದೆ.

ಈ ಸಂಬಂಧ ಪ್ರಕಾಶ್ ನಗರದ ನಿವಾಸಿಗಳಾದ ಜೆ. ಶ್ರೀನಿವಾಸ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.‌ಮೋಹನ್, ‘ಕರ್ನಾಟಕ ಉದ್ಯಾನ, ಆಟದ ಮೈದಾನಗಳು, ತೆರೆದ ಸ್ಥಳಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಕಲಂ 8 ಹಾಗೂ 1985ರ ಅಧಿನಿಯಮದ ನಿಯಮ 6ರ ಅನ್ವಯ ಪಾರ್ಕ್‌ಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ’ ಎಂಬ ಅಂಶವನ್ನು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯ ಪೀಠ, ಗಾಯತ್ರಿದೇವಿ ಪಾರ್ಕ್‌ ನಲ್ಲಿ ಉದ್ದೇಶಿತ ಈಜುಕೊಳ, ಮಲ್ಟಿ ಜಿಮ್ ನಿರ್ಮಾಣಕ್ಕೆ ನಿರ್ಬಂಧ ವಿಧಿಸಿ ಆದೇಶಿತು.

ಪ್ರಕರಣವೇನು?:'ಕಾಯ್ದೆಯ ಅನ್ವಯ ಪಾರ್ಕ್‌ಗಳಲ್ಲಿ ಬಾವಿ, ಪಂಪ್ ಹೌಸ್, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಬೆಂಚ್, ವಾಚ್‌ ಮೆನ್ ವಾಸಿಸಲು ಮನೆ ನಿರ್ಮಾಣಕ್ಕೆ ಮಾತ್ರವೇ ಅವಕಾಶವಿದೆ. ಆದರೆ, ಗಾಯತ್ರಿ ದೇವಿ ಪಾರ್ಕ್‌ನಲ್ಲಿ ಕಾಯ್ದೆಗೆ ವಿರುದ್ಧವಾಗಿ ಭೂ ಮಾಫಿಯಾ ಸಲ್ಲಿಸಿದ ಪ್ರಸ್ತಾವನೆ ಆಧರಿಸಿ ₹6 ಕೋಟಿ ವೆಚ್ಚದಲ್ಲಿ ಈಜುಕೊಳ, ಮಲ್ಟಿ ಜಿಮ್ ನಿರ್ಮಿಸಲಾಗುತ್ತಿದೆ' ಎಂಬುದು ಅರ್ಜಿದಾರರ ಆರೋಪ.

'ಈಜುಕೊಳ, ಮಲ್ಟಿ ಜಿಮ್ ನಿರ್ಮಾಣ ವಿರೋಧಿಸಿ ಸಲ್ಲಿಸಲಾಗಿರುವ ಮನವಿ ಪರಿಗಣಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ನಿರ್ಮಾಣ ಕಾಮಗಾರಿ ನಡೆಸದಂತೆ ಬಿಬಿಎಂಪಿಗೆ ನಿರ್ಬಂಧ ವಿಧಿಸಬೇಕು' ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT