ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 31ರ ಒಳಗೆ ಬಿಬಿಎಂಪಿಗೆ ಚುನಾವಣೆ ನಡೆಸಿ: ಹೈಕೋರ್ಟ್

Last Updated 1 ಅಕ್ಟೋಬರ್ 2022, 1:07 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆಯನ್ನು ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದೊಳಗೆ ನಡೆಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

‘ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿಯಲ್ಲಿ ತಾರತಮ್ಯ ಎಸಗಲಾಗಿದೆ’ ಎಂದು ಆಕ್ಷೇಪಿಸಿ ಈಜಿಪುರದ ಕೆ.ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್‌, ದೊಡ್ಡಬಾಣಸವಾಡಿಯ ವಿ.ಶ್ರೀನಿವಾಸ್‌ ಮತ್ತು ನಾಗನಾಥಪುರದ ಕೆ.ಚಂದ್ರಶೇಖರ್ ಸೇರಿ ಎಂಟು ಜನ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ, ವಿಲೇವಾರಿ ಮಾಡಿದೆ.

‘ಮೀಸಲು ಮರುನಿಗದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಒಬಿಸಿ (ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ) ಆಯೋಗಕ್ಕೆ ನೈಜ ಅಂಕಿ ಅಂಶ ಒದಗಿಸಬೇಕು. 2022ರ ನವೆಂಬರ್ 30ರೊಳಗೆ ಮೀಸಲಾತಿ ಪ್ರಕಟಿಸಬೇಕು ಮತ್ತು ಡಿಸೆಂಬರ್ 31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ. ಅಂತೆಯೇ, ಸರ್ಕಾರ ಈ ಮೊದಲು ಹೊರ ಡಿಸಿದ್ದ 243 ವಾರ್ಡ್‌ಗಳ ಮೀಸಲು ಪಟ್ಟಿಯ ಅಧಿಸೂಚನೆ ರದ್ದುಪಡಿಸಿದೆ.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಮೀಸಲಾತಿ ಮರು ನಿಗದಿಗೆ ಸಂಬಂಧಿ ಸಿದಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ಧಪಡಿಸಿದ್ದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ‘ಮೀಸಲಾತಿ ಮರು ನಿಗದಿಗೆ 16 ವಾರಗಳ ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಒಪ್ಪದ ನ್ಯಾಯಪೀಠ ಎಂಟು ವಾರಗಳ ಕಾಲಾವ ಕಾಶ ನೀಡಿ ಆದೇಶಿಸಿತು. ನ್ಯಾಯಪೀಠದ ಈ ಆದೇಶ ಅನುಪಾಲನೆಯ ವಿವರ ಪಡೆಯುವುದಕ್ಕಾಗಿ ನವೆಂಬರ್ 30ಕ್ಕೆ ವಿಚಾರಣೆ ನಿಗದಿ ಮಾಡಿದೆ.

ಬಿಬಿಎಂಪಿಗೆ ಚುನಾವಣೆ ನಡೆಸು ವಂತೆ ಹೈಕೋರ್ಟ್‌ 2020ರ ಸೆಪ್ಟೆಂಬರ್‌ ನಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಪುನಃ ಹೈಕೋರ್ಟ್‌ನಲ್ಲೇ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

‘ಚುನಾವಣೆ ನಡೆಸಲು ಬಿಬಿಎಂಪಿ ಸಿದ್ಧವಿದ್ದು, ಮತದಾರರ ಅಂತಿಮ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ರಾಜ್ಯ ಚುನಾವಣೆ ಆಯೋಗ ಯಾವಾಗ ಸೂಚನೆ ನೀಡುತ್ತದೆಯೋ ಆ ರೀತಿ ಚುನಾವಣೆ ನಡೆಸುತ್ತೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

‘ಮತದಾರರ ಪಟ್ಟಿಗೆ ಹೆಸರು ಸೇರಿಸುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಮತದಾರರ ಹೆಸರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಜನರು ಬೇರೆ ಕಡೆ ಹೋಗಿದ್ದರೆ, ಬೇರೆ ಕಡೆ ಹೆಸರು ಸೇರಿಸಿದ್ದರೆ ಅದನ್ನು ತೆಗೆಯಲಾಗುತ್ತದೆ. ನಾವು ವಿಧಾನಸಭೆ ಕ್ಷೇತ್ರದಲ್ಲಿರುವ ಪಟ್ಟಿಯಂತೆ ವಾರ್ಡ್‌ವಾರು ಪಟ್ಟಿ ತಯಾರಿಸಲಾಗಿದೆ’ ಎಂದು ಅವರು ಹೇಳಿದರು.

‘ಕಾಯ್ದೆ ಪ್ರಕಾರ, ವಾರ್ಡ್‌ ವಿಂಗಡಣೆ ಮಾಡುವಾಗ ಇದ್ದಂತಹ ಜನಸಂಖ್ಯೆ ಆಧಾರದಂತೆ ವಿಂಗಡಣೆ ಮಾಡಲಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಅದು ಸರ್ಕಾರದ ಮಟ್ಟದಲ್ಲಿ ಆಗಬೇಕು’ ಎಂದರು.

ಒಬಿಸಿ ಮೀಸಲಾತಿ ಶೀಘ್ರ ನಿರ್ಧಾರ: ಅಶೋಕ

ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕುವುದಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಅಧಿಕಾರಿಗಳಿಗೆ ಹೊಣೆ ನೀಡುವ ಅಥವಾ ಸಮಿತಿ ರಚಿಸುವ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಡಿ.31ರ ಒಳಗೆ ಚುನಾವಣೆ ನಡೆಸಲು ಹೈಕೋರ್ಟ್‌ ಸೂಚಿಸಿದೆ. ಚುನಾವಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ. ತೀರ್ಪಿನ ಪ್ರತಿ ಸಿಕ್ಕ ನಂತರ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT