ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಕೊಲೆ: ಅಪರಾಧಿಗೆ ಬಿಡುಗಡೆ ಭಾಗ್ಯ

ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ
Last Updated 20 ಜೂನ್ 2022, 20:11 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆಟೊ ರಿಕ್ಷಾ ಚಾಲಕನ ಶಿಕ್ಷೆಯನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್, ಈಗಾಗಲೇ ಏಳು ವರ್ಷ ಆರು ತಿಂಗಳು ಹದಿನಾರು ದಿನಗಳ ಜೈಲು ಶಿಕ್ಷೆ ಅನುಭವಿಸಿರುವ ಆತನ ಬಿಡುಗಡೆಗೆ ಆದೇಶಿಸಿದೆ.

'ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು' ಎಂದು ಕೋರಿ ಬಿಲವಾರದಹಳ್ಳಿ ನಿವಾಸಿ ವಾಸಿಮ್ (30) ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.

ಈ ಕುರಿತಂತೆ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಭಾಗಶಃ ಪುರಸ್ಕರಿಸಿದೆ.

'ಆರೋಪಿಗೆ ಮಹಿಳೆಯನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಆಕೆಯ ಮಾತುಗಳಿಂದ ದಿಢೀರ್ ಪ್ರಚೋದನೆಗೆ ಒಳಗಾಗಿ ಕೆನ್ನೆಗೆ ಹೊಡೆದು ಕತ್ತು ಹಿಸುಕಿದ್ದಾರೆ. ಈ ವೇಳೆ ಆಕೆ ಮೃತಪಟ್ಟಿದ್ದಾಳೆ. ಹಾಗಾಗಿ, ಇದು ಪೂರ್ವನಿಯೋಜಿತ ಕೊಲೆ ಎಂದು ಹೇಳಲಾಗುವುದಿಲ್ಲ' ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ಪ್ರಕರಣವೇನು?: ಫರೀದಾ ಬೀಬಿ ಎಂಬುವರಿಂದ ವಾಸಿಮ್ ₹ 20 ಸಾವಿರ ಸಾಲ ಪಡೆದಿದ್ದರು. ಸಾಲ ಪಡೆಯವಾಗ ಖಾಲಿ ಪತ್ರಕ್ಕೆ ಸಹಿ ಹಾಕಿದ್ದರು. ನಂತರ ಆ ಪತ್ರವು ನಿಖಾನಾಮಾ (ಮದುವೆ ಒಪ್ಪಂದದ ಪತ್ರ) ಎಂದು
ಪ್ರತಿಪಾದಿಸಿದ್ದ ಫರೀದಾ ತನ್ನನ್ನು ಮದುವೆಯಾಗು ಎಂದು ವಾಸಿಮ್‌ಗೆ ಒತ್ತಾಯಿಸಿದ್ದರು.

ಅದಾಗಲೇ ಮದುವೆಯಾಗಿದ್ದ ವಾಸಿಮ್, ಫರೀದಾ ಅವರನ್ನು ವಿವಾಹವಾಗಲು ನಿರಾಕರಿಸಿದ್ದರು.

ಏತನ್ಮಧ್ಯೆ 2014ರ ಏಪ್ರಿಲ್ 17ರಂದು ರಾತ್ರಿ 11 ಗಂಟೆಯಲ್ಲಿ ಮನೆಯಲ್ಲಿ ವಾಸಿಮ್ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದ ಫರೀದಾ, ಮತ್ತೊಬ್ಬ ವ್ಯಕ್ತಿಗೆ ಪೋನ್ ಕರೆ ಮಾಡಿ ವಾಸಿಮ್ ಪತ್ನಿಯನ್ನು ಅತ್ಯಾಚಾರ ಮಾಡುವಂತೆ ಸೂಚಿಸಿದ್ದರು.
ಇದರಿಂದ ದಿಢೀರ್ ಪ್ರಚೋದನೆಗೆ ಒಳಗಾದ ವಾಸಿಮ್, ಫರೀದಾ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದರು. ಅದೇ ದಿನ (2018ರ ಏಪ್ರಿಲ್18) ಬೆಳಗಿನ ಜಾವ 3.45ಕ್ಕೆ ತಲಘಟ್ಟಪುರ ಠಾಣೆಗೆ ತೆರಳಿ ಘಟನೆಯನ್ನು ವಿವರಿಸಿದ್ದರು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.

ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ ವಾಸಿಮ್‌ಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ 2016ರ ಮೇ 26ರಂದು ಆದೇಶಿಸಿತ್ತು. ಜೀವಾವಧಿ ಶಿಕ್ಷೆ
ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಾಸಿಮ್ ಪರ ವಕೀಲ ಎಂ.ಆರ್.ನಂಜುಂಡಗೌಡ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT