ಬೆಂಗಳೂರು: ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರಗಳು ಒಂದೆಡೇ ಇರಲಿರುವ ‘ಜ್ಞಾನ ಆರೋಗ್ಯ ನಾವೀನ್ಯತಾ ಸಂಶೋಧನಾ ನಗರ (ಕೆಎಚ್‌ಐಆರ್–ಸಿಟಿ)’ ಯೋಜನೆಯ ಮೊದಲ ಹಂತಕ್ಕೆ ಇದೇ 26ರಂದು ಚಾಲನೆ ನೀಡಲಾಗುತ್ತದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
2,000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವ ಕೆಎಚ್‌ಐಆರ್–ಸಿಟಿ ಯೋಜನೆಯಿಂದ 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
’ಇದೇ 26ರಂದು ವಿಧಾನಸೌಧದ ಬಾಂಕ್ವೆಟ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಸಿಂಗಪುರದ ಬಯೋಪೊಲಿಸ್, ರಿಸರ್ಚ್ ಟ್ರಯಾಂಗಲ್ ಪಾರ್ಕ್, ಸೈನ್ಸ್ ಪಾರ್ಕ್, ಬೋಸ್ಟನ್‌ನ ಇನ್ನೋವೇಷನ್ ಕ್ಲಸ್ಟರ್‌ಗಳಿಂದ ಸ್ಫೂರ್ತಿ ಪಡೆದು ಕೆಎಚ್‌ಐಆರ್–ಸಿಟಿ ವಿನ್ಯಾಸ, ಸ್ವರೂಪ ರೂಪಿಸಲಾಗಿದೆ. ಬೆಂಗಳೂರಿನ ಹೈಟೆಕ್–ಸಿಟಿ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಿಂದಲೂ ಸ್ಫೂರ್ತಿ ಪಡೆಯಲಾಗಿದೆ’ ಎಂದರು.
ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನ ಮಾಡಲು, ಉದ್ಯಮಿಗಳಾದ ಡಾ.ದೇವಿ ಶೆಟ್ಟಿ, ಕಿರಣ್ ಮಜುಂದಾರ್ ಶಾ, ಮೋಹನ್‌ದಾಸ್ ಪೈ, ಪ್ರಶಾಂತ್ ಪ್ರಕಾಶ್, ಥಾಮಸ್ ಓಶಾ, ರಾನ್ ಕಿಂಬಾಲ್ ಮತ್ತು ನಿಖಿಲ್ ಕಾಮತ್ ಅವರನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ’ ಎಂದು ತಿಳಿಸಿದರು.