ಬೆಂಗಳೂರು: ಲಾಲ್‌ಬಾಗ್ ಬಳಿಯ ಪೆಟ್ರೋಲ್ ಬಂಕೊಂದರಲ್ಲಿ ಹಾಕಿದ್ದ ‘ಹಿಂದಿ’ ಬ್ಯಾನರ್‌ಗೆ ‘ಕರುನಾಡ ಸೇವಕರು’ ಸಂಘಟನೆ ಕಾರ್ಯಕರ್ತರು ಸೋಮವಾರ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
‘ಉಜ್ವಲ 2.0’ ಯೋಜನೆ ಜಾಹೀರಾತಿಗಾಗಿ ಬ್ಯಾನರ್ ಹಾಕಲಾಗಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೋಟೊ ಬ್ಯಾನರ್‌ನಲ್ಲಿತ್ತು. ಅದರಲ್ಲಿ ಪ್ರತಿಯೊಂದು ಅಕ್ಷರವೂ ಹಿಂದಿ ಭಾಷೆಯಲ್ಲಿತ್ತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬರು, ಬ್ಯಾನರ್ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ವಿಡಿಯೊ ಗಮನಿಸಿದ್ದ ಸಂಘಟನೆ ಅಧ್ಯಕ್ಷ ರೂಪೇಶ್ ರಾಜಣ್ಣ ಹಾಗೂ ಕಾರ್ಯಕರ್ತರು, ಸ್ಥಳಕ್ಕೆ ಹೋಗಿ ಬ್ಯಾನರ್‌ನಲ್ಲಿದ್ದ ಹಿಂದಿ ಅಕ್ಷರಗಳಿಗೆ ಕಪ್ಪು ಮಸಿ ಬಳಿದರು. ‘ಕನ್ನಡಿಗರು ನಿಮ್ಮ ಗುಲಾಮರಲ್ಲ, ನಾವು ಸ್ವಾಭಿಮಾನಿಗಳು’ ಎಂದು ಬ್ಯಾನರ್ ಮೇಲೆ ಕನ್ನಡದಲ್ಲಿ ಬರೆದರು.
‘ರಾಜ್ಯಕ್ಕೆ ಸಂಬಂಧವಿಲ್ಲದ ಮುಖ್ಯಮಂತ್ರಿಯ ಭಾವಚಿತ್ರ ಇರುವ ಬ್ಯಾನರ್ ನಮಗೇಕೆ ? ಇಂಥ ಹಿಂದಿ ಹೇರಿಕೆಯನ್ನು ನಾವು ಸಹಿಸುವುದಿಲ್ಲ’ ಎಂದು ರೂಪೇಶ್ ಕಿಡಿಕಾರಿದರು.