ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸಕಾರ ಷ.ಶೆಟ್ಟರ್ ನಿಧನ

Last Updated 28 ಫೆಬ್ರುವರಿ 2020, 19:06 IST
ಅಕ್ಷರ ಗಾತ್ರ

ಬೆಂಗಳೂರು:ಅನಾರೋಗ್ಯದಿಂದ ಬಳಲುತ್ತಿದ್ದ ಸಂಶೋಧಕ ಷ.ಶೆಟ್ಟರ್ (85) ಶುಕ್ರವಾರ ಮುಂಜಾನೆ ನಿಧನರಾದರು.

ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು.ಒಂದು ವಾರದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಅಪೊಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಬೆಳಿಗ್ಗೆ3.15ರ ವೇಳೆ ಲಘು ಹೃದಯಾಘಾತದಿಂದ ನಿಧನರಾದರು. ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಭೂಪಸಂದ್ರದ ಸ್ವಗೃಹದಲ್ಲಿ ಇರಿಸ
ಲಾಗಿದೆ.ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅವರ ಅಳಿಯಂದಿರು ಮತ್ತು ಮೊಮ್ಮಕ್ಕಳು ಶನಿವಾರ ಬೆಂಗಳೂರಿಗೆ ಬರಲಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಲೂರು ತಾಲ್ಲೂಕಿನ ಆಲಹಳ್ಳಿಯಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಸಂಶೋಧನಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಶೆಟ್ಟರ್ ಅವರು, 1935 ಡಿ.11ರಂದು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ ಜನಿಸಿದ್ದರು.ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಳ್ಳಾರಿಯಲ್ಲಿ ಪೂರೈಸಿದರು ಹಳಗನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಅಭಿರುಚಿ ಹೊಂದಿದ್ದರು. ಇತಿಹಾಸ, ಪುರಾತತ್ವ ಶಾಸ್ತ್ರ, ಮಾನವ ಶಾಸ್ತ್ರ, ಕಲಾ ಇತಿಹಾಸ, ದರ್ಶನ ಶಾಸ್ತ್ರ, ಹಳಗನ್ನಡ ಕಾವ್ಯದ ಮೇಲೆ 27 ಸಂಶೋಧನಾ ಗ್ರಂಥಗಳನ್ನು ಬರೆದಿದ್ದಾರೆ.

ವಿಳಾಸ: ಹೊಯ್ಸಳ ಶ್ರೀಕೃಷ್ಣ ಅಪಾರ್ಟ್‌ಮೆಂಟ್, ಕಲ್ಪನಾ ಚಾವ್ಲಾ ರಸ್ತೆ, ಭೂಪಸಂದ್ರ. ಸಂಪರ್ಕಕ್ಕೆ ರಾಮ್–80886 84275.

ಷ.ಶೆಟ್ಟರ್ ಬದುಕಿನ ಹಾದಿ

ಹುಟ್ಟಿದ್ದು 11ನೇ ಡಿಸೆಂಬರ್ 1935. ಬಳ್ಳಾರಿ ಜಿಲ್ಲೆ ಹಂಪಸಾಗರದಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್‌ಗಳಲ್ಲಿ ಉನ್ನತ ವ್ಯಾಸಂಗ. ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ.

ವಿವಿದ ವಿಶ್ವವಿದ್ಯಾಲಯದಲ್ಲಿ ಬೋಧನೆ 1960–96; ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978–95, ನವದೆಹಲಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಹಿಸ್ಟಾರಿಕಲ್‌ ರಿಸರ್ಚ್‌ ಅಧ್ಯಕ್ಷ ಸ್ಥಾನ 1996–99, ಬೆಂಗಳೂರು ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಪ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ನಲ್ಲಿ ಡಾ. ಎಸ್‌ ರಾಧಾಕೃಷ್ಣ್‌ ಪ್ರಾಧ್ಯಾಪಕತ್ವ 2002–2010, 2010ರಿಂದ ಇದೇ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಭಾರತ ಶಾಖೆಯ ನಿರ್ದೇಶಕತ್ವ 2005–2013.

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌, ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್‌ಗಳ ಸರ್ವಾಧ್ಯಕ್ಷ ಸ್ಥಾನ, ಮೆಲ್ಬೋರ್ನ್‌ (ಆಸ್ಟ್ರೇಲಿಯಾ) ವಿಶ್ವ ಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನ, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಹಾಗೂ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತ್ವ.

ಕುಂದಕುಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್‌, ಮಾಸ್ತಿ ಪ್ರಶಸ್ತಿ, ರನ್ನ ಪ್ರಶಸ್ತಿ, 2016ರ ಶಾಸ್ತ್ರೀಯ ಕನ್ನಡ ವಾಙ್ಮಯದ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಸದ್ಯ ಬೆಂಗಳೂರಿನಲ್ಲಿ ಹಳಗನ್ನಡ ಮತ್ತು ವಚನ ಸಾಹಿತ್ಯದ ಓದು ಸಂಶೋಧನೆಯಲ್ಲಿ ಅವರು ತೊಡಗಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT