ಗುರುವಾರ , ನವೆಂಬರ್ 21, 2019
27 °C
ರಾಜ್ಯದಲ್ಲಿ ವರ್ಷಕ್ಕೆ 3.39 ಕೋಟಿ ಕಾಂಡೋಮ್‌ ಉಚಿತ ವಿತರಣೆ

ಕಾಂಡೋಮ್ ಬಳಕೆ: ಎಚ್‌ಐವಿ ಸೋಂಕು ಹರಡುವಿಕೆ ಇಳಿಕೆ

Published:
Updated:
Prajavani

ಬೆಂಗಳೂರು: ಸುರಕ್ಷಿತ ಲೈಂಗಿಕ ಕ್ರಿಯೆ, ಪ್ರಸವಪೂರ್ವ ಪರೀಕ್ಷೆ ಸೇರಿದಂತೆ ವಿವಿಧ ಮುಂಜಾಗ್ರತೆ ಕ್ರಮದಿಂದಾಗಿ ರಾಜ್ಯದಲ್ಲಿ ಎಚ್‌ಐವಿ ಸೋಂಕು ಹರಡುವಿಕೆ ಪ್ರಮಾಣ ಶೇ 0.73ಕ್ಕೆ ಇಳಿಕೆಯಾಗಿದೆ. 

ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿಯ (ಕೆಸಾಪ್ಸ್) ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ (ಐಸಿಟಿಸಿ) ಎಚ್‌ಐವಿ ಸೋಂಕಿತರನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ. ಎಚ್‌ಐವಿ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಏಡ್ಸ್‌ ನಿಯಂತ್ರಣಾ ಸಂಸ್ಥೆಯು (ನ್ಯಾಕೊ) ಕೆಸಾಪ್ಸ್ ಮೂಲಕ ಉಚಿತವಾಗಿ ರಾಜ್ಯದ ವಿವಿಧೆಡೆ ಕಾಂಡೋಮ್‌ಗಳನ್ನು ವಿತರಿಸುತ್ತಿದೆ. ರಾಜ್ಯದಲ್ಲಿ ಪ್ರತಿ ವರ್ಷ 3 ಕೋಟಿಗೂ ಅಧಿಕ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ 2017-18ನೇ ಸಾಲಿನಲ್ಲಿ ಶೇ 0.85 ರಷ್ಟಿದ್ದ ಎಚ್‌ಐವಿ ಸೊಂಕು ಹೊಸದಾಗಿ ಹರಡುವಿಕೆ ಪ್ರಮಾಣ ಇನ್ನಷ್ಟು ಕಡಿಮೆ ಆಗಿದೆ. 

ಎಚ್‌ಐವಿ ಸೋಂಕಿತರಲ್ಲಿ ಮಿಜೋರಾಂ (ಶೇ 1.19) ಪ್ರಥಮ ಹಾಗೂ ನಾಗಾಲ್ಯಾಂಡ್‌ (ಶೇ 0.82) ದ್ವಿತೀಯ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. 

2030ರ ವೇಳೆಗೆ ನಿಯಂತ್ರಣ: ‘ಈ ಹಿಂದೆ ಪರೀಕ್ಷೆಯ ಬಳಿಕ ಶೇ 1 ರಷ್ಟು ಮಂದಿಯಲ್ಲಿ ಎಚ್‌ಐವಿ ಇರುವುದು ದೃಢಪಡುತ್ತಿತ್ತು. ಇದೀಗ ಇಳಿಕೆಯಾಗುತ್ತಿದೆ.

2030ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಎಚ್‌ಐವಿ ಹರಡುವ ವಿಧಾನ ಹಾಗೂ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ’ ಎಂದು ಕೆಸಾಪ್ಸ್ ಉಪನಿರ್ದೇಶಕ ಡಾ. ಜಯರಾಜ್ ಮಾಹಿತಿ ನೀಡಿದರು. 

‘ರಾಜ್ಯದಲ್ಲಿ ಶೇ 90ಕ್ಕಿಂತ ಅಧಿಕ ಪ್ರಕರಣಗಳಲ್ಲಿ ಎಚ್‌ಐವಿ ಹರಡುವಿಕೆ ಸೋಂಕಿತ ವ್ಯಕ್ತಿ ಜತೆಗಿನ ಅಸುರಕ್ಷಿತ ಲೈಂಗಿಕ ಸಂಬಂಧವೇ ಕಾರಣವಾಗಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದಾಗಿ ಕಾಂಡೋಮ್ ಬಳಸುವವರ ಸಂಖ್ಯೆ ಅಧಿಕವಾಗಿದೆ. ಔಷಧ ಅಂಗಡಿಗಳಲ್ಲಿ ಹಣ ನೀಡಿ ಖರೀದಿಸುವವರ ಪ್ರಮಾಣ ಜಾಸ್ತಿಯಾಗಿರುವುದು ಉತ್ತಮ ಬೆಳವಣಿಗೆ’ ಎಂದು ತಿಳಿಸಿದರು. 

ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧೆಡೆ ಕಾಂಡೋಮ್‌ಗಳು ಉಚಿತವಾಗಿ ದೊರೆಯುತ್ತಿದೆ. ಸರ್ಕಾರೇತರ ಸಂಸ್ಥೆಗಳು ಕೂಡಾ ಈ ಬಗ್ಗೆ ಜಾಗೃತಿ ಮೂಡಿಸಿ, ಕಾಂಡೋಮ್‌ಗಳನ್ನು ವಿತರಿಸುತ್ತಿದೆ.

‘ಗರ್ಭಿಣಿಯರಲ್ಲೂ ಇಳಿಕೆ’
ಸೋಂಕಿತ ತಾಯಿಯಿಂದ ಮಗುವಿಗೆ ಕೂಡಾ ಎಚ್ಐವಿ ಹರಡುವ ಸಾಧ್ಯತೆ ಇರಲಿದೆ. ಗರ್ಭಾವಸ್ಥೆಯಲ್ಲಿ ಹಾಗೂ ಎದೆ ಹಾಲು ಸೇವನೆಯಿಂದ ಸೋಂಕು ಹರಡಲಿದೆ. ಹಾಗಾಗಿ ಐಸಿಟಿಸಿ ಕೇಂದ್ರಗಳಲ್ಲಿ ಗರ್ಭಿಣಿಯರನ್ನು ಪರೀಕ್ಷೆ ಮಾಡಲಾಗುತ್ತದೆ. 2018–19ನೇ ಸಾಲಿನಲ್ಲಿ ಪರೀಕ್ಷೆಗೊಳಪಟ್ಟ 14.23ಲಕ್ಷ ಗರ್ಭಿಣಿಯರಲ್ಲಿ ಶೇ 0.05ರಷ್ಟು ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ. ಈ ಪ್ರಮಾಣ 2013–14ನೇ ಸಾಲಿನಲ್ಲಿ ಶೇ 0.12ರಷ್ಟಿತ್ತು. 

ಪ್ರತಿಕ್ರಿಯಿಸಿ (+)