ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ವಿಫಲ: ಗೃಹ ಸಚಿವರ ರಾಜೀನಾಮೆಗೆ ಆಗ್ರಹ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಗರದಲ್ಲಿ ಪ್ರತಿಭಟನೆ
Published 20 ಜನವರಿ 2024, 14:59 IST
Last Updated 20 ಜನವರಿ 2024, 14:59 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ ಅವರು ವಿಫಲರಾಗಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಲಾಯಿತು.

‘ರಾಜ್ಯದಲ್ಲಿ ಅಕ್ರಮ ದಂಧೆಗಳು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿವೆ. ಈ ದಂಧೆಗೆ ಪೊಲೀಸರ ಕೃಪಾ ಕಟಾಕ್ಷ ಇದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ತಕ್ಷಣವೇ ಸ್ಪಂದಿಸಲು ವಿಫಲರಾಗಿದ್ದಾರೆ. ಪ್ರಕರಣವು ಸಾರ್ವಜನಿಕವಾಗಿ ಮಾಧ್ಯಮದಲ್ಲಿ ವರದಿಯಾದ ನಂತರ ಪೊಲೀಸರು ಎಚ್ಚೆತ್ತು ತನಿಖೆ ಮಾಡಿದ್ದಾರೆ. ಈ ಪ್ರಕರಣವು ಸೇರಿದಂತೆ ರಾಜ್ಯದಲ್ಲಿ ನಿರಂತರವಾಗಿ ಹಲವು ಪ್ರಕರಣಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ಹಾಗೂ ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ಧಾರೆ’ ಎಂದು ಪ್ರತಿಭಟನಕಾರರು ಆಪಾದಿಸಿದರು.

ಕೆಆರ್‌ಎಸ್ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ ಮಾತನಾಡಿ, ‘ಪರಮೇಶ್ವರ ಅವರಿಗೆ ತಮ್ಮ ಇಲಾಖೆಯ ಮೇಲೆ ಹಿಡಿತವಿಲ್ಲ. ತಮಗೂ ಗೃಹ ಇಲಾಖೆಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಅವರು ತಕ್ಷಣವೇ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮಾತನಾಡಿ, ‘ಕೆಆರ್‌ಎಸ್ ಪಕ್ಷವು ಧರ್ಮಸ್ಥಳದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿತ್ತು. ರಾಜ್ಯದ ಎಲ್ಲಾ ಕಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಇಲ್ಲಿಯವರೆಗೂ ಅದಕ್ಕೆ ಸಂಬಂಧಿಸಿದಂತೆ ಯಾವೊಂದು ಕ್ರಮವೂ ಆಗಿಲ್ಲ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್., ರಾಜ್ಯ ಕಾರ್ಯಾದರ್ಶಿಗಳಾದ ಮಂಜುನಾಥ ಎಸ್, ವಿ.ಅರ್.ಮರಾಠೆ, ಸೊಣ್ಣಪ್ಪಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಎಲ್.ಜೀವನ್, ಬಿ.ಜಿ.ಕುಂಬಾರ್, ಕೇಶವಮೂರ್ತಿ, ರಾಜ್ಯ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಜನನಿ ವತ್ಸಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT