ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲತಿಶ್ರೀ, ಹೊನ್ನವಳ್ಳಿ ಕೃಷ್ಣಗೆ ಎಸ್‌.ಪಿ.ವರದರಾಜು ಪ್ರಶಸ್ತಿ

Last Updated 7 ಫೆಬ್ರುವರಿ 2020, 15:52 IST
ಅಕ್ಷರ ಗಾತ್ರ

ಮಾಲತಿಶ್ರೀ ಮೈಸೂರು ಕನ್ನಡ ರಂಗಭೂಮಿ ಕಂಡ ಅತ್ಯುತ್ತಮ ಅಭಿನಯ ಪ್ರತಿಭೆಯಾದರೆ, ಹೊನ್ನವಳ್ಳಿ ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಕಾಲದಿಂದಲೂ ಹೆಸರು ಮಾಡಿದ ಪೋಷಕ ನಟ. ಈ ಇಬ್ಬರಿಗೂ ಈ ವರ್ಷದ ಎಸ್‌.ಪಿ.ವರದರಾಜು ಪ್ರಶಸ್ತಿ ಅರ್ಹವಾಗಿಯೇ ಘೋಷಣೆಯಾಗಿದೆ.

ಹೊನ್ನವಳ್ಳಿ ಕೃಷ್ಣ

ಹೊನ್ನವಳ್ಳಿ ಕೃಷ್ಣ ಡಾ.ರಾಜ್‌ ಕುಟುಂಬದೊಂದಿಗೆ ಮತ್ತು ರಾಜ್‌ ಚಿತ್ರಬದುಕಿನೊಂದಿಗೆ 25 ವರ್ಷಗಳ ಸುದೀರ್ಘ ಒಡನಾಟ ಹೊಂದಿದವರು. ಅರ್ಚಕ ವೃತ್ತಿ ಮಾಡುತ್ತಿದ್ದ ಸಮಯದಲ್ಲೇ ಊರಿನಲ್ಲಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ ಅಭಿನಯದ ಹುಚ್ಚು ಹತ್ತಿಸಿಕೊಂಡು ಅರಕಲಗೂಡಿನಿಂದ ಬೆಂಗಳೂರು ಬಸ್ಸು ಹತ್ತಿದವರು. ಹೋಟೆಲ್ಲಿನಲ್ಲಿ ಪಾತ್ರೆ ತೊಳೆದು, ರಾಜಾಶಂಕರ್‌ ಪರಿಚಯದಿಂದ ಮದ್ರಾಸ್‌ಗೆ ಹೋಗಿ ಪಂಡರಿಬಾಯಿಯವರ ನಾಟಕ ಕಂಪೆನಿ ಸೇರಿದರು. ಶನಿ ಮಹಾದೇವಪ್ಪ ಅವರ ಮೂಲಕ ರಾಜ್‌ಕುಮಾರ್‌ ಪರಿಚಯವಾದ ಬಳಿಕ, ಬೆಳ್ಳಿತೆರೆಯ ಮೇಲೆ (ಮಿಸ್ಟರ್‌ ರಾಜ್‌ಕುಮಾರ್‌) ಪುಟ್ಟ ಪಾತ್ರ ದೊರಕಿತು. ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ, 25ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಡಾ.ರಾಜ್‌ ಅವರ ಒಟ್ಟು 72 ಸಿನಿಮಾಗಳಲ್ಲಿ ಕೃಷ್ಣ ಅವರು ನಟನೆ ಅಥವಾ ಸಹನಿರ್ದೇಶನ ಮಾಡಿರುವುದು ವಿಶೇಷ.

ಮಾಲತಿಶ್ರೀ

ಮಾಲತಿಶ್ರೀ ಮೈಸೂರು ಆರ್‌.ನಾಗರತ್ನಮ್ಮನವರ ಸ್ತ್ರೀ ನಾಟಕ ಮಂಡಳಿ ಮತ್ತು ಶ್ರೀಕಂಠೇಶ್ವರ ನಾಟಕ ಮಂಡಳಿಗಳಲ್ಲಿ ಬಾಲ್ಯದಲ್ಲೇ ಬಣ್ಣ ಹಚ್ಚಿದವರು. ಹದಿಹರೆಯದಲ್ಲಿ ಗೋಕಾಕ ಬಸವಣ್ಣೆಪ್ಪ ಕಂಪೆನಿ ಮತ್ತು ಮಾಸ್ಟರ್‌ ಹಿರಣ್ಣಯ್ಯ ಮಿತ್ರಮಂಡಳಿಯ ನಾಟಕಗಳಲ್ಲಿ ಅಭಿನಯಿಸಿದರು.

ಕಮತಗಿ ಶ್ರೀ ಹುಚ್ಚೇಶ್ವರ ನಾಟ್ಯಸಂಘ ಸೇರಿದ ಬಳಿಕ ಅಲ್ಲೇ ನೆಲೆನಿಂತರು. ಅದರ ಮಾಲೀಕ ಬಿ.ಆರ್‌.ಅರಿಷಿಣಗೋಡಿ ಅವರನ್ನು ಮದುವೆಯಾಗಿ ಎ ದಶಕಗಳ ಕಾಲ ತಮ್ಮ ನಾಟಕ ಮಂಡಲಿಯನ್ನು ನಡೆಸಿಕೊಂಡು ಹೋದ ಕೀರ್ತಿ ಇವರದು.

ಕೃಷ್ಣಲೀಲೆ, ರಾಮಾಯಣದ, ದೇವದಾಸಿ, ಸಂಪತ್ತಿಗೆ ಸವಾಲು, ಮಲಮಗಳು, ಬಸ್‌ ಕಂಡಕ್ಟರ್‌, ಮುದುಕನ ಮದುವೆ, ಸಿಂಧೂರ ಲಕ್ಷ್ಮಣ ಸೇರಿದಂತೆ 80ಕ್ಕೂ ಹೆಚ್ಚು ಶೀರ್ಷಿಕೆಗಳ 8000ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ ಜನಪ್ರಿಯತೆಯ ತುತ್ತತುದಿಗೇರಿದವರು ಮಾಲತಿಶ್ರೀ. ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು, ಸ್ವಂತ ಖರ್ಚಿನಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ. ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ಉಚಿತ ನಾಟಕ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ನಾಟಕ ಕಂಪೆನಿ ನಿಂತುಹೋದ ಬಳಿಕ ಮಾಲತಿಶ್ರೀ ಹಲವು ಟಿವಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಫೆ.8ರಂದು ಶನಿವಾರ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ 14ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್‌ ಕೃಷ್ಣ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಶ್ರೀನಿವಾಸ್‌ ಜಿ ಕಪ್ಪಣ್ಣ ಮುಖ್ಯ ಅತಿಥಿಯಾಗಿದ್ದು, ಪ್ರಶಸ್ತಿ ಸಮಿತಿಯ ಬರಗೂರು ರಾಮಚಂದ್ರಪ್ಪ ಉಪಸ್ಥಿತರಿರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT