ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಟುತ್ತಾ ಸಾಗಿದ ಕೆರೆ ಪುನರುಜ್ಜೀವನ

ಹೊರಮಾವು– ಅಗರ ಕೆರೆ ಅಂತಿಮ ಹಂತದ ಕಾಮಗಾರಿ ಬಾಕಿ: ತೊಡಕಾದ ಮಳೆ
Last Updated 12 ಮೇ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಹೊರಮಾವು– ಅಗರ ಕೆರೆ ಪುನರುಜ್ಜೀವನ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಇದೀಗ ಕಾಮಗಾರಿಗೆ ಮಳೆ ತೊಡಕಾಗಿದೆ.

ಸುಮಾರು 60 ಎಕರೆ ವಿಸ್ತೀರ್ಣದ ಈ ಕೆರೆಯಲ್ಲಿ ಕಲ್ಯಾಣಿ, ಭದ್ರತಾ ಕೊಠಡಿ, ಸುತ್ತಲು ಬೇಲಿ ನಿರ್ಮಾಣ ಕಾಮಗಾರಿಯನ್ನು ಬಿಬಿಎಂಪಿ ಪೂರ್ಣಗೊಳಿಸಿದೆ. ಚೈನ್‌ ಲಿಂಕ್ ಬೇಲಿಗೆ ಬಣ್ಣ ಬಳಿಯುವ ಕೆಲಸ ಪ್ರಗತಿಯಲ್ಲಿದೆ.

ಸುಮಾರು ಎರಡು ಕಿಲೋ ಮೀಟರ್ ಉದ್ದದ ಪಾದಚಾರಿ ಮಾರ್ಗದ ಕಾಮಗಾರಿಯೂ ಅಂತಿಮ ಹಂತದಲ್ಲಿದೆ. ಒಳಚರಂಡಿ ನೀರು ಕೆರೆಗೆ ಸೇರುವುದನ್ನು ತಪ್ಪಿಸುವ ಕಾಮಗಾರಿ ಇನ್ನೂ ಬಾಕಿ ಇದೆ.

ನಿರ್ಮಾಣ ತ್ಯಾಜ್ಯ, ಕೋಳಿ ಅಂಗಡಿಗಳ ತ್ಯಾಜ್ಯ ಸೇರಿ ಬೇಡದ ವಸ್ತುಗಳನ್ನು ಎಸೆದಿದ್ದರಿಂದ ಕೆರೆ ಸಂಪೂರ್ಣ ಕಲುಷಿತ
ಗೊಂಡಿತ್ತು. ಹೊರಮಾವು– ಅಗರ ಕೆರೆ ಉಳಿಸಲು ಸ್ಥಳೀಯರು ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸಿದ್ದರು. ಅದರ ಫಲವಾಗಿ ಕೆರೆ ಪುನರುಜ್ಜೀವನಗೊಳಿಸುವ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.

‘ಅಚ್ಚುಕಟ್ಟಾಗಿದ್ದ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದ ಕಾಲವೊಂದಿತ್ತು. ನಗರ ಬೆಳೆದಂತೆ ಒಳಚರಂಡಿ ನೀರು ಕೆರೆ ಸೇರಿ ಕಲುಷಿತಗೊಂಡಿತ್ತು. ಅಭಿವೃದ್ಧಿಪಡಿಸುವ ಕಾಮಗಾರಿ ಆರಂಭವಾಗಿ ಹಲವು ವರ್ಷಗಳೇ ಕಳೆದಿವೆ. ಆಮೆ ವೇಗದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದು, ಇನ್ನೂ ಪೂರ್ಣಗೊಳಿಸಿಲ್ಲ. ನಾಲ್ಕೈದು ಮಂದಿ ಕಾರ್ಯ ನಿರ್ವಹಿಸಿದರೆ ಪೂರ್ಣಗೊಳ್ಳುವುದು ಯಾವಾಗ’ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

‘ನಾಲ್ಕು ವರ್ಷಗಳಿಂದ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆಗೊಮ್ಮೆ, ಈಗೊಮ್ಮೆ ಕೆಲವೇ ಸಿಬ್ಬಂದಿ ಕೆಲಸ ಮಾಡುವುದು ಕಾಣಿಸುತ್ತದೆ. ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ ಯಾರೊಬ್ಬರೂ ಸರಿಯಾದ ಮಾಹಿತಿ ನೀಡುವುದಿಲ್ಲ. ಮಳೆಗಾಲ ಸಮೀಪಿಸುವ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿದ್ದರೆ ಮತ್ತಷ್ಟು ವಿಳಂಬ ಆಗುವುದು ತಪ್ಪುತ್ತಿತ್ತು’ ಎಂದು ಕೆರೆ ಸಂರಕ್ಷಣೆಗೆ ಹೋರಾಟ ನಡೆಸುತ್ತಿರುವ ಅನುಪ್ರೀತ್ ಬೇಸರ ವ್ಯಕ್ತಪಡಿಸುತ್ತಾರೆ.

‘ಹತ್ತು ದಿನಗಳಲ್ಲಿ ಕಾಮಗಾರಿ ಪೂರ್ಣ’:

‘ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಒಳಚರಂಡಿ ನೀರು ಕೆರೆ ಸೇರುವುದನ್ನು ತಪ್ಪಿಸುವ ಕಾಮಗಾರಿಯಷ್ಟೇ ಬಾಕಿ ಇದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

‘₹1.50 ಕೋಟಿ ಮೊತ್ತದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಪಾದಚಾರಿ ಮಾರ್ಗ, ಸುತ್ತಲು ಬೇಲಿ, ಭದ್ರತಾ ಕೋಠಡಿ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ. ಒಳಚರಂಡಿ ನೀರಿನ ಮಾರ್ಗ ಬದಲಿಸುವ ಕಾಮಗಾರಿಯೂ ಆರಂಭವಾಗಿದೆ. ಮಳೆ ಬಿಡುವು ನೀಡಿದರೆ ಹತ್ತು ದಿನಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಕೆರೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸ್ವಪ್ನಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT