ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟಕವಾಗಿ ಕಾಡುತ್ತಿರುವ ರೈಲ್ವೆ ಸೇತುವೆ

ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿನಗರದ ಶ್ರೀಸಾಯಿ ಬಡಾವಣೆಗೆ ನುಗ್ಗುವ ನೀರು
Last Updated 18 ಸೆಪ್ಟೆಂಬರ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆಗೆ ಅಣೆಕಟ್ಟೆ ರೀತಿಯಲ್ಲಿ ಅಡ್ಡಲಾಗಿರುವ ರೈಲ್ವೆ ಸೇತುವೆ, ಜೋರು ಮಳೆಯಲ್ಲಿ ಹಿನ್ನೀರಿನಂತಾಗುವ ಸುತ್ತಮುತ್ತಲ ಬಡಾವಣೆಗಳು, ಪ್ರತಿವರ್ಷವೂ ನೀರಿನಲ್ಲಿ ಮಿಂದೇಳುವ ಮನೆಗಳು...

ಹೊರಮಾವು ವಾರ್ಡ್ ವ್ಯಾಪ್ತಿಯ ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿನಗರದ ಶ್ರೀಸಾಯಿ ಬಡಾವಣೆ, ಗೆದ್ದಲಹಳ್ಳಿಯ ಎಸ್‌ಟಿಪಿ ಪಕ್ಕದ ಟ್ರಿನಿಟಿ ಫಾರ್ಚ್ಯೂನ್ ಬಡಾವಣೆಗಳ ಜನರುಪ್ರತಿವರ್ಷ ಮಳೆಗಾಲದಲ್ಲಿ ಅನುಭವಿಸುವ ಗೋಳು ಇದು.

ಹೆಬ್ಬಾಳ, ನಾಗವಾರ, ಯಲಹಂಕ, ಅಲ್ಲಾಳಸಂದ್ರ, ಜಕ್ಕೂರು, ರಾಚೇನಹಳ್ಳಿ ಕೆರೆಗಳನ್ನು ದಾಟಿ,ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಹಾದು, ಎಲಿಮೆಂಟ್ಸ್‌ ಮಾಲ್‌ ಪಕ್ಕದಲ್ಲಿ ಹೋಗುವ ರಾಜಕಾಲುವೆ ಮುಂದೆ ಸಾಗಿದಂತೆ ಕೆ.ಜಿ. ಹಳ್ಳಿ ಕಡೆಯಿಂದ ಬರುವ ಮತ್ತೊಂದು ರಾಜಕಾಲುವೆಯನ್ನು ಸೇರಿಕೊಳ್ಳುತ್ತದೆ. ಅಲ್ಲಿಂದ ಮುಂದಕ್ಕೆ ಹೆಣ್ಣೂರು– ಬಾಗಲೂರು ರಸ್ತೆ ತನಕ ರಾಜಕಾಲುವೆ ವಿಸ್ತಾರವಾಗಿ ಹರಿಯುತ್ತಿದೆ.

ಈ ರಸ್ತೆ ದಾಟಿದ ನಂತರವೂ ಲಿಂಗರಾಜಪುರದ ಕಡೆಯಿಂದ ಬರುವ ಮತ್ತೊಂದು ರಾಜಕಾಲುವೆಯೂ ಇದರೊಳಗೆ ವಿಲೀನಗೊಳ್ಳುತ್ತದೆ. ಅಲ್ಲಿಂದ ನೂರು ಮೀಟರ್ ದೂರದಲ್ಲೇ ರೈಲ್ವೆ ಮಾರ್ಗ ಎದುರಾಗುತ್ತದೆ. ರೈಲ್ವೆ ಮಾರ್ಗವನ್ನು ರಾಜಕಾಲುವೆ ದಾಟಲು ಸಣ್ಣ ಸಣ್ಣ ಕಿಟಕಿಯಾಕಾರದ ಎರಡು ಸೇತುವೆಗಳಿವೆ.

ಹೆಣ್ಣೂರು–ಬಾಗಲೂರು ರಸ್ತೆಯ ಎರಡೂ ಬದಿಯಲ್ಲಿ ದೊಡ್ಡ ಹೊಳೆಯಂತೆ ಕಾಣುವ ರಾಜಕಾಲುವೆ ರೈಲ್ವೆ ಮಾರ್ಗದಿಂದ ಮುಂದಕ್ಕೆ ಸಣ್ಣದಾಗಿ ಹರಿಯುತ್ತದೆ. ಎರಡೂ ಕಡೆ ಎತ್ತರವಾಗಿ ಕಟ್ಟಲಾಗಿರುವ ತಡೆಗೋಡೆಗಳು ಇಲ್ಲಿಗೇ ಮುಕ್ತಾಯವಾಗುತ್ತವೆ. ಬೇಸಿಗೆಯಲ್ಲಿ ಸಣ್ಣದಾಗಿ ನೀರು ಹರಿಯುವಾಗ ಇದು ಸಮಸ್ಯೆಯಾಗಿ ಕಾಣಿಸುವುದಿಲ್ಲ.

‘ಕಳೆದ ವಾರ ಅಬ್ಬರದಿಂದ ಮಳೆ ಸುರಿದಾಗ ರೈಲ್ವೆ ಸೇತುವೆಯಲ್ಲಿ ಅಷ್ಟು ಪ್ರಮಾಣದ ನೀರು ಹರಿದು ಹೋಗಲು ಸಾಧ್ಯವಾಗಲಿಲ್ಲ. ನಗರದ ಹಲವೆಡೆಯಿಂದ ಬಂದ ನೀರು ರೈಲ್ವೆ ಮಾರ್ಗದ ಬಳಿ ಅಣೆಕಟ್ಟೆಗಳ ಹಿನ್ನೀರಿನಂತೆ ನಿಂತಿತ್ತು. ನೀರು ಹೆಚ್ಚಾದಂತೆ ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗಿತು. ಅದರ ಪರಿಣಾಮವಾಗಿ ಹೊರಮಾವು ವಾರ್ಡ್ ವ್ಯಾಪ್ತಿಯ ವಡ್ಡರಪಾಳ್ಯ, ಕಾವೇರಿನಗರದ ಶ್ರೀಸಾಯಿ ಬಡಾವಣೆ, ಗೆದ್ದಲಹಳ್ಳಿಯ ಎಸ್‌ಟಿಪಿ ಪಕ್ಕದ ಟ್ರಿನಿಟಿ ಫಾರ್ಚ್ಯೂನ್ ಬಡಾವಣೆಗಳ ಜಲಾವೃತಗೊಂಡವು’ ಎಂದು ಸ್ಥಳೀಯರು ಹೇಳುತ್ತಾರೆ.

‘ಇದು ಒಂದು ದಿನದ ಸಮಸ್ಯೆಯಲ್ಲ. ಜೋರು ಮಳೆ ಬಂದಾಗಲೆಲ್ಲಾ ರಾಜಕಾಲುವೆಯ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ನೀರು ನುಗ್ಗಿದಾಗ ಬಂದು ಸಾಂತ್ವನ ಹೇಳಿ ಹೋಗುವ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮತ್ತೆ ಕಾಣಿಸಿಕೊಳ್ಳುವುದಿಲ್ಲ’ ಎಂದು ದೂರುತ್ತಾರೆ.

10 ದಿನವಾದರೂ ಮುಗಿಯದ ಗೋಳು

ಸೆ.8ರಂದು ಸುರಿದ ಮಳೆಯಿಂದ ಒದ್ದೆಯಾಗಿರುವ ವಸ್ತುಗಳನ್ನು ಒಣಗಿಸುವ ಕೆಲಸ 10 ದಿನ ಕಳೆದರೂ ಈ ಬಡಾವಣೆಗಳಲ್ಲಿ ಮುಂದುವರಿದಿದೆ.

‘ಪೀಠೋಪಕರಣಗಳು, ಹಾಸಿಗೆ, ಹೊದಿಕೆಗಳು, ಪುಸ್ತಕ, ದವಸ–ಧಾನ್ಯಗಳು ಸಂಪೂರ್ಣ ಮುಳುಗಿ ಹೋಗಿದ್ದವು. ನೀರು ಕಡಿಮೆಯಾಗಲು ಎರಡು ದಿನ ಬೇಕಾಯಿತು. ಬೈಬಲ್ ಪ್ರತಿಗಳು ಮತ್ತು ಹಾಸಿಗೆ ಒಣಗಿಸುವುದೇ ನಿತ್ಯದ ಕೆಲಸವಾಗಿದೆ’ ಎಂದು ಟ್ರಿನಿಟಿ ಫಾರ್ಚ್ಯೂನ್ ಬಡಾವಣೆಯ ಮೋಹನ್ ಹೇಳಿದರು.

‘ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋದರೆ ಬಡಾವಣೆಗಳಿಗೆ ನೀರು ನುಗ್ಗುವುದಿಲ್ಲ. ಅಲ್ಲಿ ಹರಿಯಲು ಜಾಗವಿಲ್ಲದಿದ್ದಾಗ ನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬಂದರು, ಹೋದರು. ಸಮಸ್ಯೆ ಹಾಗೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸೇತುವೆ ವಿಸ್ತರಣೆಗೆ ತಯಾರಿ

‘ರೈಲ್ವೆ ಸೇತುವೆ ವಿಸ್ತರಣೆಗೆ ಪಾಲಿಕೆಯಿಂದ ತಯಾರಿ ನಡೆಸಲಾಗುತ್ತಿದೆ’ ಎಂದು ಹೊರಮಾವು ವಾರ್ಡ್‌ನ ಸಹಾಯಕ ಎಂಜಿನಿಯರ್ ರಮೇಶ್ ತಿಳಿಸಿದರು.

‘ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಬೈರತಿ ಬಸವರಾಜ್ ಅವರು ಸೇತುವೆ ವಿಸ್ತರಣೆ ಸಂಬಂಧ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಹೀಗಾಗಿ,₹18 ಕೋಟಿ ಮೊತ್ತದಲ್ಲಿ ಕಾಮಗಾರಿ ನಡೆಸಿಕೊಡುವ ಬಗ್ಗೆ ಮೂರು ದಿನಗಳ ಹಿಂದಷ್ಟೆರೈಲ್ವೆ ಇಲಾಖೆಯಿಂದ ಪತ್ರ ಬಂದಿದೆ’ ಎಂದು ಹೇಳಿದರು.

‘45 ಮೀಟರ್ ಅಗಲದ ರಾಜಕಾಲುವೆ ಇದ್ದರೆ, ರೈಲ್ವೆ ಮಾರ್ಗಕ್ಕೆ ತಲಾ 15 ಅಡಿಗಳ ಎರಡು ಸೇತುವೆಗಳಷ್ಟೇ ಇವೆ. ಹೀಗಾಗಿ ಸಮಸ್ಯೆಯಾಗುತ್ತಿದೆ. ಬಿಬಿಎಂಪಿ ಹಿರಿಯ ಅಧಿಕಾರಿಗಳೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ಮಳೆಗಾಲದ ವೇಳೆಗೆ ಸಮಸ್ಯೆ ಬಗೆಹರಿಯಲಿದೆ‘ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT