ಗುರುವಾರ , ಆಗಸ್ಟ್ 5, 2021
22 °C

ಆಮೆಗತಿ ಕಾಮಗಾರಿ: ಸಂಚಾರ ದುಸ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಯ ಹೊಸಕೆರೆಹಳ್ಳಿ ವಾರ್ಡ್‌ ಸಂಖ್ಯೆ 161ರ ವ್ಯಾಪ್ತಿಯಲ್ಲಿ ಬರುವ ಗುರುದತ್ತ ಬಡಾವಣೆ ಹಾಗೂ ದತ್ತಾತ್ರೇಯ ಬಡಾವಣೆ ವ್ಯಾಪ್ತಿಯಲ್ಲಿ ಕಳೆದ ಏಳು ತಿಂಗಳಿನಿಂದ ಮಳೆನೀರುಗಾಲುವೆ ಮತ್ತು ದೊಡ್ಡ ಚರಂಡಿ ಕಾಮಗಾರಿ ಹಲವು ಸಮಸ್ಯೆಯನ್ನು ಸೃಷ್ಟಿಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜೋರು ಮಳೆ ಸುರಿದಾಗ ನೀರು ಮನೆಗೆ ನುಗ್ಗುತ್ತಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಮಳೆನೀರುಗಾಲುವೆ ಮತ್ತು ದೊಡ್ಡಚರಂಡಿ ನಿರ್ಮಾಣ ಕಾರ್ಯವನ್ನು ಬಿಬಿಎಂಪಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಸುಮಾರು ಏಳು ತಿಂಗಳು ಕಳೆದರೂ ಕಾಮಗಾರಿ ಮುಗಿಯುತ್ತಿಲ್ಲ. ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ’ ಎಂದು ಗುರುದತ್ತ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಜೈಸಿಂಗ್‌ ಹೇಳಿದರು.

‘ಚೆನ್ನಾಗಿಯೇ ಇದ್ದ ಮೋರಿ, ರಸ್ತೆಯೆಲ್ಲ ಕಿತ್ತು ಹಾಕಿದ್ದಾರೆ. ಕೈಗೆತ್ತಿಕೊಂಡಿರುವ ಕಾಮಗಾರಿಯನ್ನೂ ಮುಗಿಸುತ್ತಿಲ್ಲ. ದತ್ತಾತ್ರೇಯ ದೇವಸ್ಥಾನ ಮುಖ್ಯರಸ್ತೆಯಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಇಟ್ಟಮಡು, ಗುರುದತ್ತ ಬಡಾವಣೆ, ಕೃಷ್ಣಪ್ಪ ಬಡಾವಣೆಗೆ ಇದೇ ರಸ್ತೆಯ ಮೂಲಕ ಹೋಗಬೇಕು. ಕಾಮಗಾರಿ ನಡೆಯುತ್ತಿರುವುದರಿಂದ ಸುಮಾರು 3ರಿಂದ 4 ಕಿ.ಮೀ. ಸುತ್ತಿ ಬಳಸಿ ಸಾಗಬೇಕಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಳೆ ನೀರು ಮನೆಯೊಳಗೆ ನುಗ್ಗದಂತೆ ತಡೆಯುವ ಉದ್ದೇಶದಿಂದ ನಡೆಯುತ್ತಿರುವ ಈ ಕಾಮಗಾರಿ ಸ್ವಾಗತಾರ್ಹವೇ. ಆದರೆ, ಅನಗತ್ಯ ವಿಳಂಬ ಮಾಡುತ್ತಿರುವುದರಿಂದ ಸ್ಥಳೀಯರಿಗೆ ಅನನುಕೂಲವಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರೊಬ್ಬರು ಒತ್ತಾಯಿಸಿದರು.

ಕೋವಿಡ್‌ ಕಾರಣದಿಂದ ವಿಳಂಬ

‘ಕಾಮಗಾರಿ ಚುರುಕಿನಿಂದ ನಡೆಯುತ್ತಿದ್ದು ಸದ್ಯ, ಕ್ರೇಟಿಂಗ್‌ ಅಳವಡಿಸಲಾಗುತ್ತಿದೆ. ಕೋವಿಡ್‌ ಇದ್ದುದರಿಂದ ಕಾರ್ಮಿಕರು ಸಿಗದೆ ಕಾಮಗಾರಿ ವಿಳಂಬವಾಗಿದೆ’ ಎಂದು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸತೀಶ್‌ ಹೇಳಿದರು.

‘ಅಂದಾಜು ₹3 ಕೋಟಿ ಅನುದಾನ ಒದಗಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು