ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಮನೆಗಳ ಧ್ವಂಸ: ಪೊಲೀಸರಿಗೆ ದೂರು

Last Updated 18 ಆಗಸ್ಟ್ 2021, 20:49 IST
ಅಕ್ಷರ ಗಾತ್ರ

ಬೆಂಗಳೂರು: ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮರಿಯಪ್ಪನಪಾಳ್ಯದ ಸುಬ್ರಹ್ಮಣ್ಯ ಲೇಔಟ್‌ನಲ್ಲಿ ಗುಂಪೊಂದು 12 ಮನೆಗಳನ್ನು ದ್ವಂಸಗೊಳಿಸಿದ್ದು, ನಿವಾಸಿಗಳು ಬೀದಿಪಾಲಾಗಿದ್ದಾರೆ.

ಜೆಸಿಬಿಯೊಂದಿಗೆ ಬಂದ ಗುಂಪು ಜನರನ್ನು ಹೊರಕ್ಕೆ ಕಳುಹಿಸಿ ಮನೆಗಳನ್ನು ನೆಲಸಮ ಮಾಡಿದ್ದಾರೆ. ನಾಗದೇವನಹಳ್ಳಿ ಸರ್ವೆ ನಂಬರ್ 93ರ 2 ಎಕರೆ ಜಾಗವೂ ಸೇರಿ ಸುತ್ತಮುತ್ತಲ ಜಮೀನನ್ನು 1988ರಲ್ಲಿ ಗವಿಪುರಂ ಹೌಸಿಂಗ್ ಸಹಕಾರ ಸಂಘಕ್ಕೆ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ರೈತರು ಹೈಕೋರ್ಟ್‌ ಮೊರೆ ಹೋಗಿದ್ದರಿಂದ ಇಡೀ ಜಾಗದ ಭೂಸ್ವಾಧೀನ ಆದೇಶವನ್ನು ನ್ಯಾಯಾಲಯ 2000ನೇ ಇಸವಿಯಲ್ಲಿ ವಜಾಗೊಳಿಸಿತ್ತು.

ಬಳಿಕ ರೈತರು ಉದಯ ಅಸೋಸಿಯೇಟ್ಸ್ ಮೂಲಕ ಜಮೀನನ್ನು ನಿವೇಶನವಾಗಿ ಪರಿವರ್ತಿಸಿ ಮಾರಿದ್ದರು. ಈ ನಿವೇಶನ ಖರೀದಿ ಮಾಡಿದ್ದ ಜನ ಮನೆಗಳನ್ನು ನಿರ್ಮಿಸಿದ್ದಾರೆ.

‘2014ರಲ್ಲಿ ಗವಿಪುರಂ ಹೌಸಿಂಗ್ ಸೊಸೈಟಿಯವರು ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿ ಇಡೀ ಜಾಗ ತಮಗೆ ಸೇರಿದ್ದು ಎಂಬ ಆದೇಶ ಪಡೆದುಕೊಂಡಿದ್ದರು. ಸುಳ್ಳು ದಾಖಲೆ ಸಲ್ಲಿಸಿ ಈ ಆದೇಶ ಪಡೆಯಲಾಗಿದೆ ಎಂದು ಆರೋಪಿಸಿ ನಿವೇಶನದಾರರು ಮತ್ತೊಮ್ಮೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆವು. ನಿವೇಶನದಾರರ ಪರವಾಗಿ ನ್ಯಾಯಾಲಯ ಆದೇಶ ನೀಡಿತು. ಹೌಸಿಂಗ್ ಸೊಸೈಟಿ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿತು. ಈಗಾಗಲೇ ಮನೆ ನಿರ್ಮಾಣ ಆಗಿದ್ದರೆ ಅವುಗಳನ್ನು ಬಿಟ್ಟು ಖಾಲಿ ಜಾಗವನ್ನು ಸೊಸೈಟಿ ಸ್ವಾಧೀನಕ್ಕೆ ಪಡೆಯಬಹುದು ಎಂದು ಆದೇಶಿಸಿದೆ’ ಎಂದು ನಿವಾಸಿ ಎಚ್‌.ಎಂ. ಸೋಮು ವಿವರಿಸಿದರು.

’ಈ ನಡುವೆ, ಬುಧವಾರ ಬೆಳಿಗ್ಗೆ ಬಡಾವಣೆಗೆ ನುಗ್ಗಿದ 200ಕ್ಕೂ ಹೆಚ್ಚು ಗೂಂಡಾಗಳು ಮನೆಗಳನ್ನು ದ್ವಂಸ ಮಾಡಿದ್ದಾರೆ. ನಿವೇಶನ ಪಡೆದು ಮನೆ ಕಟ್ಟಿದವರಿಗೆ ಅನ್ಯಾಯವಾಗಿದೆ‘ ಎಂದು ದೂರಿದರು.

ದೂರು ಪಡೆಯಲು ಜ್ಞಾನಭಾರತಿ ಠಾಣೆಯ ಅಧಿಕಾರಿಗಳು ನಿರಾಕರಿಸಿದ್ದು, ಎಸಿಪಿ ಯು.ಡಿ. ಕೃಷ್ಣಕುಮಾರ್ ಅವರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT